ಮುಂಬಯಿ : ಛತ್ರಪತಿ ಶಿವಾಜಿ ಮಹಾರಾಜ್ ಅವರ ಕುರಿತಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ಬಿಎಸ್ ಕೊಶ್ಯಾರಿ ಅವರ ವಿರುದ್ಧ ಮುಂಬೈನಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಶಿವಸೇನಾ ನಾಯಕ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
”ಛತ್ರಪತಿ ಶಿವಾಜಿ ಮಹಾರಾಜ್, ಡಾ ಸಾವಿತ್ರಿಬಾಯಿ ಫುಲೆ ಮತ್ತು ಇತರ ಮಹಾನ್ ವ್ಯಕ್ತಿಗಳ ವಿರುದ್ಧ ಏನು ಹೇಳಿದರೂ ಮಹಾರಾಷ್ಟ್ರದ ಜನರು ಸಹಿಸುವುದಿಲ್ಲ. ಶಿಂಧೆ ಸರ್ಕಾರಕ್ಕೆ ನಮ್ಮ ಸಂದೇಶ ಏನೆಂದರೆ, ರಾಜ್ಯದ ಇತಿಹಾಸವನ್ನು ಬದಲಾಯಿಸಲು ಅವರು ಪ್ರಯತ್ನಿಸಬಾರದು” ಎಂದು ಎನ್‌ಸಿಪಿ ನಾಯಕ ದಿಲೀಪ್ ವಾಲ್ಸೆ ಪಾಟೀಲ್ ಹೇಳಿಕೆ ನೀಡಿದರು.
”ಕೆಲವು ಪ್ರಮುಖ ಯೋಜನೆಗಳನ್ನು ಮಹಾರಾಷ್ಟ್ರದಿಂದ ಕಿತ್ತುಕೊಂಡು ಗುಜರಾತ್‌ಗೆ ನೀಡಲಾಯಿತು ಮತ್ತು ಅಲ್ಲಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತು. ಮಹಾರಾಷ್ಟ್ರದ ಜನರು ತಮ್ಮ ಮತದಿಂದ ಬಿಜೆಪಿಗೆ ಬಲವಾದ ಸಂದೇಶವನ್ನು ನೀಡಲಿದ್ದಾರೆ ಎಂದು ಪ್ರತಿಭಟನೆಯಲ್ಲಿ ಭಾಗಿಯಾದ ಕಾಂಗ್ರೆಸ್ ಮುಖಂಡ ಬಾಳಾಸಾಹೇಬ್ ಥೋರಟ್ ಕಿಡಿ ಕಾರಿದರು.