Advertisement
ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಕನಿಷ್ಠ 25 ಪ್ರಬಲ ಬಂಡಾಯ ಅಭ್ಯರ್ಥಿಗಳನ್ನು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದೆಯಾದರೂ ಕನಿಷ್ಠ 18 ಮಂದಿ ಕಣದಲ್ಲಿ ಉಳಿದು ಕೊಂಡು ಸವಾಲಾಗಿ ಪರಿಣಮಿಸಿದ್ದಾರೆ. 288 ಸದಸ್ಯರ ಅಸೆಂಬ್ಲಿಯಲ್ಲಿ 148 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಗೆ 13 ಮಂದಿ, ಪಾಲುದಾರ ಪಕ್ಷಗಳ ಪೈಕಿ 83ರಲ್ಲಿ ಸ್ಪರ್ಧಿಸಿರುವ ಶಿಂಧೆ ಶಿವಸೇನೆಗೆ ಮತ್ತು 54 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ತಲಾ 6 ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳ ಹೋರಾಟ ಚಿಂತೆಗೀಡು ಮಾಡುವಂತೆ ಮಾಡಿದೆ.
Related Articles
Advertisement
ಮುಂಬೈ ಕ್ಷೇತ್ರವಾದ ಮಂಖುರ್ದ್ ಶಿವಾಜಿನಗರ ಕೂಡ ಮೈತ್ರಿಕೂಟಕ್ಕೆ ತಲೆನೋವಾಗಿ ಉಳಿದಿದೆ. ಮನ್ಖುರ್ದ್ ಶಿವಾಜಿ ನಗರದಲ್ಲಿ, ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಬೆಂಬಲಿಸಲು ಬಿಜೆಪಿ ನಿರಾಕರಿಸಿದೆ ಮತ್ತು ಬದಲಿಗೆ ಪಕ್ಷವು ಶಿವಸೇನಾ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ಘೋಷಿಸಿದೆ. ಸೋಮವಾರ ಸಂಜೆಯ ವೇಳೆಗೆ ಮಹಾ ವಿಕಾಸ್ ಅಘಾಡಿಗೆ ಸವಾಲುಗಳು ಕಠಿನವಾಗಿದ್ದು ಮೂರು ಪ್ರಮುಖ ಪಕ್ಷಗಳು ಎರಡು ಸಣ್ಣ ಮಿತ್ರಪಕ್ಷಗಳೊಂದಿಗೆ ಕನಿಷ್ಠ 10 ಸ್ಥಾನಗಳಲ್ಲಿ ವಿವಾದವನ್ನು ಬಗೆಹರಿಸುವಲ್ಲಿ ವಿಫಲವಾಗಿವೆ. ಪ್ರಮುಖವಾಗಿ ಸಮಾಜವಾದಿ ಪಕ್ಷ ಮಿತ್ರಪಕ್ಷಗಳ ವಿರುದ್ಧ ಆರು ಕ್ಷೇತ್ರಗಳಲ್ಲಿ ತಮ್ಮ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಮಾಜವಾದಿ ಪಕ್ಷ ಆರು ಸ್ಥಾನಗಳಲ್ಲಿ ಸೌಹಾರ್ದ ಹೋರಾಟ ನಡೆಸಲಿದೆ ಎಂದು ಹೇಳಿದೆಯಾದರೂ ಎಸ್‌ಪಿ ಶಾಸಕ ಮತ್ತು ರಾಜ್ಯ ಅಧ್ಯಕ್ಷ ಅಬು ಅಸಿಮ್ ಅಜ್ಮಿ ಅವರು ಪರಿಸ್ಥಿತಿಗೆ ವಿಕಾಸ್ ಅಘಾಡಿಯ ಹಿರಿಯ ನಾಯಕರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಅಪ್ಪ ಅಭ್ಯರ್ಥಿ, ಮಗಳಿಂದ ಬಂಡಾಯ ಕುಟುಂಬ ರಾಜಕಾರಣದ ಸವಾಲು ಎಂಬಂತೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ಹಾಗೂ ಮಾಜಿ ಸಂಸದೆ ಹಿನಾ ಗಾವಿತ್ ತಮ್ಮ ಬಂಡಾಯ ಮುಂದುವರಿಸುವುದರೊಂದಿಗೆ ಬಿಜೆಪಿಯಿಂದ ಹೊರ ನಡೆದಿದ್ದಾರೆ. ಹಿನಾ ಅಕ್ಕಲ್ಕುವಾ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಅಚ್ಚರಿಯೆಂದರೆ ಹಿನಾ ಅವರ ತಂದೆ ರಾಜ್ಯ ಬುಡಕಟ್ಟು ಅಭಿವೃದ್ಧಿ ಸಚಿವ ವಿಜಯ್ ಕುಮಾರ್ ಗಾವಿತ್. ವಿಜಯಕುಮಾರ್ ಅವರು ದೂರಬಾರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಟಿಕೆಟ್ ಹಂಚಿಕೆಯಲ್ಲೂ ಭಾರೀ ಗೊಂದಲ
ಮಹಾಯುತಿಯ ಮಿತ್ರ ಪಕ್ಷಗಳಾದ ಅಜಿತ್ ಅವರ ಎನ್‌ಸಿಪಿ ಮತ್ತು ಶಿಂಧೆ ಶಿವಸೇನೆಯ ನಡುವೆ ಶ್ರೀರಾಮಪುರ ಕ್ಷೇತ್ರದಲ್ಲಿ ಭಾರೀ ಗೊಂದಲ ನಿರ್ಮಾಣವಾಗಿ ಬಿಕ್ಕಟ್ಟಿಗೆ ಕಾರಣವಾಗಿದೆ. ಎನ್‌ಸಿಪಿ ಹಾಲಿ ಶಾಸಕ ಲಹು ಕಾನಡೆ ಅವರಿಗೆ ಟಿಕೆಟ್ ನೀಡಿದ್ದು, ಇನ್ನೊಂದೆಡೆ ಮಾಜಿ ಶಾಸಕ, ಶಿವಸೇನೆ ಶಿಂಧೆ ಬಣದ ಬಾವುಸಾಹೇಬ್ ಕಾಂಬ್ಳೆ ಅವರಿಗೂ ಎಬಿ ಫಾರ್ಮ್ ನೀಡಲಾಗಿದೆ. ಇಬ್ಬರೂ ಕಣಕ್ಕಿಳಿದು ಪಟ್ಟು ಬಿಡದೆ ಕೊನೆ ಕ್ಷಣದವರೆಗೂ ಯಾರೂ ನಾಮಪತ್ರ ಹಿಂಪಡೆಯದ ಕಾರಣ ಮೈತ್ರಿಕೂಟದ ಮತ ವಿಭಜನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹರಿಯಾಣದಲ್ಲಿ ಆದಂತಾಗುವುದೇ?
ಹರಿಯಾಣದಲ್ಲಿ ಬಿಜೆಪಿಯಿಂದ ಅಧಿಕಾರ ಕಸಿಯುವ ರಣತಂತ್ರ ಮಾಡಿದ್ದ ಕಾಂಗ್ರೆಸ್ ಗೆ ಬಂಡಾಯ ಅಭ್ಯರ್ಥಿಗಳು ಅಡ್ಡಿಯಾಗಿ ಚಿತ್ರಣ ಬದಲಿಸಿದ್ದು ಚುನಾವಣ ಫಲಿತಾಂಶದ ಬಳಿಕ ಸ್ಪಷ್ಟವಾಗಿತ್ತು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು 13 ಕ್ಷೇತ್ರಗಲ್ಲಿ ಅಧಿಕೃತ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದರು. ಕೆಲ ಪಕ್ಷೇತರರು 30 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರು. ಬಿಜೆಪಿಗೂ 2 ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿ ಸೋಲು ಕಾಣಬೇಕಾಗಿತ್ತು. ಆದರೂ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಏರುವಲ್ಲಿ ಅಡ್ಡಿಯಾಗಲಿಲ್ಲ. ಮಹಾರಾಷ್ಟ್ರದಲ್ಲಿ ಹಲವು ಗೊಂದಲಗಳ ನಡುವೆಯೇ ಚುನಾವಣ ಕಣ ರಂಗೇರಿದ್ದು ಮತದಾರ ಯಾರಿಗೆ ನಿಷ್ಠೆ ತೋರುತ್ತಾನೆ ಎನ್ನುವುದು ಯಾವ ಲೆಕ್ಕಾಚಾರದಿಂದಲೂ ಅರಿಯುವುದು ಅಸಾಧ್ಯ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮಹಾಯುತಿಗೆ ಶಾಕ್ ನೀಡಿದ್ದ ವಿಕಾಸ್ ಅಘಾಡಿ ಈಗಲೂ ಅದೇ ಫಲಿತಾಂಶ ಪಡೆಯಲಿದೆಯೇ ಎನ್ನುವುದನ್ನೂ ನಿರ್ಣಯಿಸಲು ಸಾಧ್ಯವಿಲ್ಲ.