Advertisement

ಮಹಾಬಲದ ಜಟಾಪಟಿ: 9 ಬಂಡಾಯ ಸಚಿವರ ಖಾತೆಗಳು ವಜಾ

04:46 PM Jun 27, 2022 | Team Udayavani |

ಮುಂಬಯಿ: ಗುವಾಹಟಿಯಲ್ಲಿ ಬೀಡುಬಿಟ್ಟಿರುವ 9 ಬಂಡಾಯ ಸಚಿವರ ಖಾತೆಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ವಜಾಗೊಳಿಸಿದ್ದಾರೆ. ಈ ಸಚಿವರ ಖಾತೆಗಳನ್ನು ಸಂಪುಟದಲ್ಲಿರುವ ಇತರ ಸಚಿವರಿಗೆ ಆಡಳಿತವನ್ನು ಸುಲಭಗೊಳಿಸಲು ಹಸ್ತಾಂತರಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

Advertisement

ಏಕನಾಥ್ ಶಿಂಧೆ ನೇತೃತ್ವದ ಬಂಡಾಯದ ನಂತರ, ಶಿವಸೇನೆಯು ಈಗ ಸಿಎಂ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಅನಿಲ್ ಪರಬ್ ಮತ್ತು ಸುಭಾಷ್ ದೇಸಾಯಿ ಸೇರಿದಂತೆ ನಾಲ್ಕು ಕ್ಯಾಬಿನೆಟ್ ಮಂತ್ರಿಗಳನ್ನು ಹೊಂದಿದೆ. ಆದಿತ್ಯ ಠಾಕ್ರೆ ಹೊರತುಪಡಿಸಿ ಉಳಿದ ಮೂವರು ಎಂಎಲ್‌ಸಿಗಳಾಗಿದ್ದಾರೆ.

ಇದನ್ನೂ ಓದಿ : ಬಂಡಾಯ ಶಾಸಕರ ಮನವಿ : ಮಹಾ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ

39 ಬಂಡಾಯ ಶಿವಸೇನೆ ಶಾಸಕರು ಮತ್ತು ಅವರ ಕುಟುಂಬ ಸದಸ್ಯರ ಜೀವ, ಸ್ವಾತಂತ್ರ್ಯ ಮತ್ತು ಆಸ್ತಿಯನ್ನು ರಕ್ಷಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಬಂಡಾಯ ಶಾಸಕರು ತಂಗಿರುವ ಗುವಾಹಟಿ ಬಳಿಯ ಐಷಾರಾಮಿ ಹೋಟೆಲ್‌ನಲ್ಲಿ ಸೋಮವಾರ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

Advertisement

“ಇಲ್ಲಿಂದ ಓಡಿಹೋಗಿ ಬಂಡಾಯವೆದ್ದವರು, ಇಲ್ಲೇ ಹೋರಾಟ ಮಾಡಬೇಕಿತ್ತು. ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಬೇಕಿತ್ತು. ಸದನದಲ್ಲಿ ಬಹುಮತ ಪರೀಕ್ಷೆ ವೇಳೆ ನನ್ನ ಮುಂದೆ ಕುಳಿತಾಗ, ನನ್ನನ್ನು ನೋಡಿ. ಕಣ್ಣಲ್ಲಿ ಕಣ್ಣಿಟ್ಟು ನಾವೇನು ​​ತಪ್ಪು ಮಾಡಿದೆವು ಎಂದು ಹೇಳಿ,” ಎಂದು ಆದಿತ್ಯ ಠಾಕ್ರೆ ಬಂಡಾಯ ಶಾಸಕರನ್ನು ಪ್ರಶ್ನಿಸಿದ್ದಾರೆ.

ಬಂಡಾಯ ಶಿವಸೇನೆ ಶಾಸಕರಿಗೆ ಸುಪ್ರೀಂ ಕೋರ್ಟ್ ಜುಲೈ 11 ರವರೆಗೆ ರಿಲೀಫ್ ನೀಡಿದ್ದು, ಅವರ ಅನರ್ಹತೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.

ಶಿಂಧೆ ನೇತೃತ್ವದ ಗುಂಪಿನೊಂದಿಗೆ ಬೀಡುಬಿಟ್ಟಿರುವ ಸಚಿವ ರಾಜೇಂದ್ರ ಪಾಟೀಲ್-ಯಾದವ್ಕರ್ ಬೆಂಬಲಿಗರು ಮತ್ತು ಸೇನಾ ಕಾರ್ಯಕರ್ತರು ಕೊಲ್ಲಾಪುರದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಘರ್ಷಣೆಯನ್ನು ತಪ್ಪಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಗುವಾಹಟಿ ಹೋಟೆಲ್‌ನಲ್ಲಿ ಬಂಡಾಯ ಶಾಸಕರನ್ನು ಭೇಟಿ ಮಾಡಲು ಮುಂದಾದ ಮಣಿಪುರ ಶಿವಸೇನೆ ಮುಖ್ಯಸ್ಥರನ್ನು ತಡೆದು ನಿಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next