ಮುಂಬಯಿ: ಭ್ರಷ್ಟಾಚಾರ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆ ನಡೆಸಲು ಆದೇಶ ನೀಡಿದ್ದ ಬೆನ್ನಲ್ಲೇ ದೇಶ್ ಮುಖ್ ತಮ್ಮ ಸ್ಥಾನಕ್ಕೆ ಸೋಮವಾರ(ಏಪ್ರಿಲ್ 05) ರಾಜೀನಾಮೆ ನೀಡಿರುವುದಾಗಿ ಪಿಟಿಐ ವರದಿ ತಿಳಿಸಿದೆ.
ದೇಶ್ ಮುಖ್ ವಿರುದ್ಧ ಆರೋಪ ಕೇಳಿ ಬಂದ ಸಂದರ್ಭದಲ್ಲಿ ಬಿಜೆಪಿ ರಾಜೀನಾಮೆ ನೀಡುವಂತೆ ಆಗ್ರಹಿಸಿತ್ತು. ಆದರೆ ತಾನು ಯಾವುದೇ ತಪ್ಪು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಿಲ್ಲ ಎಂದು ದೇಶ್ ಮುಖ್ ಹೇಳಿದ್ದರು. ಇದೀಗ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದ್ದ ನಿಟ್ಟಿನಲ್ಲಿ ನೈತಿಕ ನೆಲೆಗಟ್ಟಿನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ದೇಶ್ ಮುಖ್ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಅನಿಲ್ ದೇಶಮುಖ್ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ 15 ದಿನದೊಳಗೆ ಸಿಬಿಐ ಪ್ರಾಥಮಿಕ ತನಿಖೆಯನ್ನು ಆರಂಭಿಸಬೇಕು ಎಂದು ಬಾಂಬೆ ಹೈಕೋರ್ಟ್ ಸೋಮವಾರ(ಏಪ್ರಿಲ್ 05) ನಿರ್ದೇಶನ ನೀಡಿತ್ತು.
ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಮುಂಬಯಿನ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಪರಂಬೀರ್ ಸಿಂಗ್, ಹಣ ವಸೂಲಿ ಮತ್ತು ಕಾನೂನು ಬಾಹಿರವಾಗಿ ವರ್ಗಾವಣೆ ದಂಧೆಯಲ್ಲಿ ಶಾಮೀಲಾಗಿರುವುದಾಗಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ದೇಶಮುಖ್ ವಿರುದ್ಧ ತನಿಖೆ ನಡೆಸಲು ಆದೇಶ ನೀಡಬೇಕೆಂದು ಕೋರಿ ಪರಂಬೀರ್ ಸಿಂಗ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಹಾರಾಷ್ಟ್ರ ಗೃಹ ಸಚಿವ ದೇಶ್ ಮುಖ್ ವಿರುದ್ಧ ಯಾಕೆ ಎಫ್ ಐಆರ್ ದಾಖಲಿಸಿಲ್ಲ ಎಂದು ಬಾಂಬೆ ಹೈಕೋರ್ಟ್ ಹಿಂದಿನ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಪ್ರಶ್ನಿಸಿತ್ತು. ನೀವೊಬ್ಬ ಪೊಲೀಸ್ ಕಮಿಷನರ್, ಯಾಕೆ ನೀವು ಕಾನೂನು ಮೀರಿ ನಡೆದುಕೊಳ್ಳುತ್ತೀರಿ? ಪೊಲೀಸ್ ಅಧಿಕಾರಿಗಳು, ಸಚಿವರು, ರಾಜಕಾರಣಿಗಳು ಕಾನೂನಿಗಿಂತ ಮಿಗಿಲಾದವರೇ ಎಂದು ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿ.ಜೆ. ದತ್ತ ಪ್ರಶ್ನಿಸಿದ್ದರು.