ಮುಂಬಯಿ: ಮಹಾರಾಷ್ಟ್ರ ಸರಕಾರದ ವಿರುದ್ಧ ಬಂಡಾಯವೆದ್ದಿರುವ ಸಚಿವ ಏಕನಾಥ ಶಿಂಧೆ ಅವರನ್ನು ಬೆಂಬಲಿಸಿ ಶುಕ್ರವಾರ ಮತ್ತಷ್ಟು ಶಿವಸೇನೆ ಶಾಸಕರು ಗುವಾಹಾಟಿಯತ್ತ ಮುಖ ಮಾಡಿದ್ದಾರೆ. ಶಿಂಧೆ ಬಣದಲ್ಲಿ ಶಾಸಕರ ಸಂಖ್ಯೆ 50 ದಾಟಿದೆ. ಹೀಗಾಗಿ ಉದ್ಧವ್ ಸರಕಾರ ಪತನ ಬಹುತೇಕ ಖಚಿತವಾಗಿದೆ.
ಗುವಾಹಾಟಿಯಲ್ಲಿರುವ ಬಂಡಾಯ ಶಾಸಕರು ತಮ್ಮ ವಿರುದ್ಧ ನೀಡಲಾಗಿರುವ ಅನರ್ಹತೆ ನೋಟಿಸ್‌ಗಾಗಿ ಕಾಯುತ್ತಿದ್ದು, ಅದು ತಲುಪಿದ ಕೂಡಲೇ ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತಯಾರಿ ನಡೆಸಿದ್ದಾರೆ. ಜತೆಗೆ ಪಕ್ಷ ಮತ್ತು ಪಕ್ಷದ ಚಿಹ್ನೆಯ ಹಕ್ಕಿಗಾಗಿ ಚುನಾವಣ ಆಯೋಗಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇಂದು ಸಭೆ
ಉದ್ಧವ್ ಠಾಕ್ರೆ ಅವರು ಶನಿವಾರ ಮಧ್ಯಾಹ್ನ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದಾರೆ. ಶುಕ್ರವಾರ ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ವರ್ಚುವಲ್ ಭಾಷಣ ಮಾಡಿದ ಉದ್ಧವ್, ಶಿಂಧೆ ಸೇರಿದಂತೆ ಬಂಡಾಯ ಶಾಸಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಪಕ್ಷವನ್ನು ಹೋಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಶಿವಸೇನೆ, ಬಾಳಾಸಾಹೇಬ್ ಹೆಸರನ್ನು ಪ್ರಸ್ತಾವಿಸದೆ ಅವರು ಹೇಗೆ ಮುನ್ನಡೆಯುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಪವಾರ್-ಉದ್ಧವ್ ಭೇಟಿ
ಈ ನಡುವೆ ಶುಕ್ರವಾರವೂ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಸಿಎಂ ಉದ್ಧವ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಪವಾರ್ ಜತೆಗೆ ಡಿಸಿಎಂ ಅಜಿತ್ ಪವಾರ್, ರಾಜ್ಯ ಸಂಪುಟ ಸಚಿವ ಜಯಂತ್ ಪಾಟೀಲ್, ನಾಯಕ ಪ್ರಫುಲ್ ಪಟೇಲ್ ಕೂಡ ಇದ್ದರು. ಇದೇ ವೇಳೆ ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋನಿ ಅವರನ್ನು ತಮ್ಮ ಕಾರ್ಯಾಲಯಕ್ಕೆ ಕರೆಸಿಕೊಂಡಿರುವ ಉದ್ಧವ್ ಪ್ರಸ್ತುತ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿ ಶಾಸಕರ ಅನರ್ಹತೆ ಮತ್ತಿತರ ಕಾನೂನು ಅಂಶಗಳ ಕುರಿತು ಸಲಹೆ ಪಡೆದಿದ್ದಾರೆ.
Related Articles
ರಾಷ್ಟ್ರೀಯ ಪಕ್ಷ ಸಂಪರ್ಕದಲ್ಲಿಲ್ಲ!
ಗುರುವಾರವಷ್ಟೇ “ಪ್ರಬಲ ರಾಷ್ಟ್ರೀಯ ಪಕ್ಷ’ವೊಂದು ನಮಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದ ಶಿಂಧೆ ಶುಕ್ರವಾರ ಯೂಟರ್ನ್ ಹೊಡೆದಿದ್ದಾರೆ. “ದೊಡ್ಡ ಶಕ್ತಿ ನಮ್ಮ ಬೆಂಬಲಕ್ಕಿದೆ ಎಂದು ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಶಕ್ತಿಯ ಕುರಿತಾಗಿ ಹೇಳಿದ್ದು’ ಎಂದು ಸ್ಪಷ್ಟನೆ ನೀಡಿದ್ದಾರೆ. ಶಿವಸೇನೆಯ 55 ಶಾಸಕರ ಪೈಕಿ 40 ಮಂದಿ ಗುವಾಹಾಟಿಗೆ ಬಂದಿದ್ದಾರೆ. ಈಗ ನಮ್ಮದೇ ನಿಜವಾದ ಶಿವಸೇನೆ. ನಮ್ಮ ವಿರುದ್ಧ ಯಾರೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.
ನಾನು ಶಿಂಧೆಗಾಗಿ ಎಲ್ಲವನ್ನೂ ಮಾಡಿದೆ. ನನ್ನ ಕೈಯ್ಯಲ್ಲಿದ್ದ ಖಾತೆಯನ್ನೂ ಅವರಿಗೆ ಬಿಟ್ಟುಕೊಟ್ಟೆ. ಆದರೆ ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
-ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಸಿಎಂ