ಮುಂಬಯಿ: ಇನ್ನೂ ಚರ್ಚೆ ಹಂತದಲ್ಲಿದ್ದ ರೈಲ್ವೆ ಇಲಾಖೆಯ ಆಂತರಿಕ ಪ್ರಸ್ತಾವನೆಯ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವ್ಯಕ್ತಿ ಮತ್ತು ಅದೇ ಪ್ರತಿಯನ್ನು ಟಿ.ವಿ ಪರದೆ ಮೇಲೆ ಪದೇಪದೆ ತೋರಿಸಿ, ರೈಲು ಸೇವೆ ಆರಂಭವಾಗಲಿದೆ ಎಂದು ಸುಳ್ಳು ಸುದ್ದಿ ಬಿತ್ತರಿಸಿ ಸಾವಿರಾರು ವಲಸೆ ಕಾರ್ಮಿಕರು ಬಾಂದ್ರಾ ರೈಲು ನಿಲ್ದಾಣದಲ್ಲಿ ಸೇರುವಂತೆ ಮಾಡಿದ ಪತ್ರಕರ್ತ ಸೇರಿ ಸುಮಾರು 1000 ಮಂದಿ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಲಾಕ್ ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಅನುಕೂಲವಾಗುವಂತೆ ‘ಜನ್ ಸಾಧಾರಣ್’ ರೈಲು ಸಂಚಾರ ಆರಂಭಿಸುವ ಕುರಿತ ಆಂತರಿಕ ಪ್ರಸ್ತಾವನೆಯೊಂದು ರೈಲ್ವೆ ಇಲಾಖೆ ಒಳಗೇ ಚರ್ಚೆ ಹಂತದಲ್ಲಿತ್ತು. ಏ.13ರ ಸಭೆ ಬಳಿಕ ಈ ಪ್ರಸ್ತಾವವನ್ನು ವಾಪಸ್ ಕೂಡ ಪಡೆಯಲಾಗಿತ್ತು.
ಆದರೆ, ಈ ಪ್ರಸ್ತಾವನೆ ಪ್ರತಿ ಹೇಗೋ ವಿನಯ್ ದುಬೆ ಎಂಬಾತನ ಕೈಗೆ ಸಿಕ್ಕಿದೆ. ಇದೇ ಅವಕಾಶ ಬಳಸಿಕೊಂಡು ಪ್ರಚಾರ ಪಡೆಯಲು ಮುಂದಾದ ದುಬೆ, ‘ಚಲೋ ಘರ್ ಕಿ ವೋರ್’ (ಮನೆಯತ್ತ ಹೊರಡಿರಿ) ಎಂಬ ಸಂದೇಶವುಳ್ಳ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಮಾಡಿದ್ದ.
ಇದನ್ನು ನೋಡಿದ ಸಾವಿರಾರು ವಲಸೆ ಕಾರ್ಮಿಕರು ಮಂಗಳವಾರ ಸಂಜೆ ಪಶ್ಚಿಮ ಬಾಂದ್ರಾ ರೈಲು ನಿಲ್ದಾಣದಲ್ಲಿ ಸೇರಿದ್ದರು. ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸಿದ ಆರೋಪದಲ್ಲಿ ವಿನಯ್ ದುಬೆಯನ್ನು ನವಿ ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇದೇ ವೇಳೆ ರೈಲು ಸೇವೆ ಆರಂಭವಾಗಲಿದೆ ಎಂದು ಸುದ್ದಿ ಪ್ರಸಾರ ಮಾಡಿದ ಟಿವಿ ವಾಹಿನಿಯೊಂದರ ಸಿಬ್ಬಂದಿಯನ್ನೂ ಬಾಂದ್ರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಊರತ್ತ ಕಾರ್ಮಿಕರು
ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸುತ್ತಿದ್ದಂತೆ ಹೈದರಾಬಾದ್‌ನಲ್ಲಿ ನೂರಾರು ಕಾರ್ಮಿಕರು ಗಂಟು ಮೂಟೆ ಕಟ್ಟಿಕೊಂಡು, ಮಹಿಳೆಯರು, ಮಕ್ಕಳೊಡನೆ ತಮ್ಮ ಊರುಗಳತ್ತ ಹೊರಟಿದ್ದಾರೆ.
ಅಚ್ಚರಿಯ ಸಂಗತಿ ಏನೆಂದರೆ ಆಂಧ್ರಪ್ರದೇಶದ ಉತ್ತರ ಭಾಗದಲ್ಲಿನ ಗ್ರಾಮದವರಾದ ಈ ಕಾರ್ಮಿಕರು, ಬರೋಬ್ಬರಿ 900 ಕಿ.ಮೀ. ನಡೆದುಕೊಂಡೇ ಹೋಗಲು ನಿರ್ಧರಿಸಿದ್ದಾರೆ. ಆಂಧ್ರಪ್ರದೇಶದ ಸರಕಾರ ತಾನು ಕೊಟ್ಟ ಭರವಸೆ ಪ್ರಕಾರ ಆಹಾರ ಧಾನ್ಯ ಹಾಗೂ ಹಣವನ್ನು ತಮಗೆ ನೀಡಿಲ್ಲ ಎಂದು ವಲಸೆ ಕಾರ್ಮಿಕರು ಆರೋಪಿಸಿದ್ದಾರೆ.