ಮುಂಬೈ: ಬೆಳಗಾವಿ ಗಡಿ ವಿಚಾರದಲ್ಲಿ ಮತ್ತೆ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಮಹಾರಾಷ್ಟ್ರ ಸರ್ಕಾರ ಈಗ ಒಂದು ಹೆಜ್ಜೆ ಮುಂದೆ ಹೋಗಿ, ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಂಗಳಕ್ಕೆ ಕರೆದೊಯ್ಯಲು ಮುಂದಾಗಿದೆ.
ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ಮಹಾರಾಷ್ಟ್ರ ಸಲ್ಲಿಕೆ ಮಾಡಿರುವ ಬೆಳಗಾವಿ ಗಡಿ ವಿವಾದ ಸಂಬಂಧದ ಅರ್ಜಿ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಈ ವೇಳೆ ಸಮರ್ಥವಾಗಿ ವಿಚಾರಣೆ ಮಂಡಿಸಲು ಹಿರಿಯ ವಕೀಲ ವೈದ್ಯನಾಥನ್ ಅವರ ನೇಮಕ ಮತ್ತು ಕಾನೂನು ಸಮನ್ವಯಕ್ಕಾಗಿ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರನ್ನು ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ.
ಪ್ರಧಾನಿ ಭೇಟಿ:
ಸಭೆ ಬಳಿಕ ಮಾತನಾಡಿದ ಡಿಸಿಎಂ ದೇವೇಂದ್ರ ಫಡ್ನವೀಸ್, ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಗಡಿ ವಿವಾದ ಬಗೆಹರಿಸಲು ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಅಲ್ಲದೇ, ಗಡಿ ವಿವಾದವು ಅತ್ಯಂತ ಸೂಕ್ಷ್ಮವಿಚಾರವಾಗಿದ್ದು, ಮಹಾರಾಷ್ಟ್ರದ ಎಲ್ಲ ರಾಜಕೀಯ ಪಕ್ಷಗಳೂ ಈ ವಿಚಾರದಲ್ಲಿ ಒಗ್ಗಟ್ಟಾಗಿವೆ. ಸೂಕ್ತ ಹಾಗೂ ಪ್ರಜಾಸತ್ತಾತ್ಮಕವಾಗಿ ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದೂ ತಿಳಿಸಿದ್ದಾರೆ.
Related Articles
ಜತೆಗೆ, ಗಡಿ ವಿಚಾರದ ಬಗ್ಗೆ ನೋಡಿಕೊಳ್ಳುವ ವಿಶೇಷ ಘಟಕವನ್ನು ಮತ್ತಷ್ಟು ಬಲಿಷ್ಠಪಡಿಸಿ, ರಾಜ್ಯ ಸರ್ಕಾರದ ಎಲ್ಲ ಯೋಜನೆಗಳೂ ಗಡಿಯಲ್ಲಿರುವ ಜನರಿಗೆ ತಲುಪುವಂತೆ ಮಾಡಬೇಕು ಎಂದು ಸೂಚಿಸಿದ್ದಾರೆ. ನಮ್ಮ ಸರ್ಕಾರವು ಗಡಿ ಭಾಗದ ಜನರೊಂದಿಗಿದೆ ಎಂದೂ ತಿಳಿಸಿದ್ದಾರೆ.
ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರು ಸದಾ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರೊಂದಿಗಿದ್ದರು. ಗಡಿ ಸಮಸ್ಯೆ ಪರಿಹಾರವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿಯೇ ವೈದ್ಯನಾಥನ್‌ರನ್ನು ನೇಮಕ ಮಾಡಲಾಗಿದೆ. ಅಗತ್ಯಬಿದ್ದರೆ, ಕಾನೂನು ತಜ್ಞರ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದೂ ಸಿಎಂ ಶಿಂಧೆ ಹೇಳಿದ್ದಾರೆ.
ಸಭೆಯಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಅಂಬಾದಾಸ್ ದಾನ್ವೆ, ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್, ರಾಜೇಶ್ ಕ್ಷೀರಸಾಗರ್, ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಸೇರಿದಂತೆ ಹಲವರು ಭಾಗಿಯಾಗಿದ್ದರು.
ನಿಮ್ಮ ಜತೆ ನಾವಿದ್ದೇವೆ,ಸರ್ವಪಕ್ಷ ಸಭೆ ಕರೆಯಿರಿ:
ಅತ್ತ ಮಹಾರಾಷ್ಟ್ರದಲ್ಲಿ ಗಡಿ ವಿವಾದ ವಿದ್ಯಮಾನಗಳು ಜೋರಾಗಿ ನಡೆಯುತ್ತಿರುವಂತೆಯೇ, ಇತ್ತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ, ಸರ್ವಪಕ್ಷ ಸಭೆ ಕರೆಯುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನೆಲ-ಜಲ- ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಗೆ ಬದ್ಧವಾಗಿ ರಾಜ್ಯ ಬಿಜೆಪಿ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ನಮ್ಮ ಪಕ್ಷ ಬೆಂಬಲಿಸುತ್ತದೆ. ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಕರೆಯಿರಿ ಎಂದಿದ್ದಾರೆ. ಹಾಗೆಯೇ, ಸುಪ್ರೀಂನಲ್ಲಿ ವಾದ ಮಂಡಿಸುವ ಸಲುವಾಗಿ ಅಲ್ಲಿನ ಸಿಎಂ ಶಿಂಧೆ ಅವರ ಸಿದ್ಧತೆ, ಸಮಿತಿ ರಚನೆ ಕುರಿತಂತೆಯೂ ಪ್ರಸ್ತಾಪಿಸಿದ್ದಾರೆ.