ಮುಂಬಯಿ: ಆಕ್ಸಿಜನ್ ಹಾಗೂ ಬೆಡ್ ಗಳ ಕೊರತೆಯಿಂದ ಕೋವಿಡ್ ಸೋಂಕಿತರು ಸಾವಿಗೀಡಾಗುತ್ತಿದ್ದು, ಏತನ್ಮಧ್ಯೆ ಕೋವಿಡ್ ನಿಂದ ಮೃತಪಟ್ಟಿದ್ದ 22 ಮಂದಿಯ ಶವಗಳನ್ನು ಒಂದೇ ಆ್ಯಂಬುಲೆನ್ಸ್ ನಲ್ಲಿ ಚಿತಾಗಾರಕ್ಕೆ ಸಾಗಿಸಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದ್ದು, ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ 19: ಕಡಿಮೆಗೊಳ್ಳುತ್ತಿಲ್ಲ ಸೋಂಕಿನ ವೇಗ.! ಮಹಾರಾಷ್ಟ್ರಕ್ಕೆ ಮತ್ತಷ್ಟು ಬಿಗಿ ಕ್ರಮ..?
ವೈದ್ಯಕೀಯ ವಾಹನಗಳ ಕೊರತೆಯಿಂದಾಗಿ ಒಂದೇ ಆ್ಯಂಬುಲೆನ್ಸ್ ನಲ್ಲಿ 22 ಶವಗಳನ್ನು ಸಾಗಿಸಲಾಗಿದೆ ಎಂದು ಜಿಲ್ಲಾಡಳಿತ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದೆ. ಬೀಡ್ ನಗರದ ಅಂಬಾಜೋಗಾಯಿಯಲ್ಲಿರುವ ಸ್ವಾಮಿ ರಮಾನಂದ ತೀರ್ಥ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಕೋವಿಡ್ ನಿಂದ ಮೃತಪಟ್ಟವರ ದೇಹಗಳನ್ನು ಭಾನುವಾರ ಅಂತ್ಯಕ್ರಿಯೆಗಾಗಿ ಚಿತಾಗಾರಕ್ಕೆ ಸಾಗಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಒಂದೇ ಆ್ಯಂಬುಲೆನ್ಸ್ 22 ಶವಗಳನ್ನು ಸಾಗಿಸುತ್ತಿರುವುದನ್ನು ಕಂಡ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಪರಿಣಾಮ ಬೀಡ್ ಜಿಲ್ಲಾಡಳಿತ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಮಾಡಿತ್ತು ಎಂದು ವರದಿ ತಿಳಿಸಿದೆ.
ಈ ಆಸ್ಪತ್ರೆಯಲ್ಲಿ ಸಾಕಷ್ಟು ಆ್ಯಂಬುಲೆನ್ಸ್ ಸೌಲಭ್ಯ ಇಲ್ಲ. ಈಗ ಇರುವ ಆ್ಯಂಬುಲೆನ್ಸ್ ನಲ್ಲಿಯೇ ಕೋವಿಡ್ ರೋಗಿಗಳನ್ನು ಕರೆತರುವ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಿವಾಜಿ ಸುಖ್ರೆ ಪಿಟಿಐಗೆ ತಿಳಿಸಿದ್ದಾರೆ.