ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಯಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡ ಗೆಲುವಿನ ಖಾತೆ ತೆರೆದಿದೆ. ಶನಿವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ 8 ವಿಕೆಟ್‌ಗಳ ಸುಲಭ ಜಯ ಗಳಿಸಿದೆ.
ಮಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಸೋಲನುಭವಿಸಿತ್ತು. ಆದರೆ ಶಿವಮೊಗ್ಗ ತಂಡಕ್ಕೆ ಇದು ಸತತ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಆರಂಭಿಕ ಪಂದ್ಯದಲ್ಲಿ ಅದು ಮೈಸೂರು ವಾರಿಯರ್ಸ್ ವಿರುದ್ಧ ಸೋತಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಮಂಗಳೂರು 16.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಜಯಭೇರಿ ಬಾರಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶಿವಮೊಗ್ಗ ಲಯನ್ಸ್, ಆರಂಭಿಕ ಓವರ್‌ನಲ್ಲೇ ನಿಹಾಲ್ ಉಳ್ಳಾಲ್ ಅವರ ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯಿತು. ಆದರೆ ರೋಹಿತ್ (24) ಮತ್ತು ಧ್ರುವ್ ಪ್ರಭಾಕರ್ (20) ತಂಡವನ್ನು ಆಧರಿಸಿದರು. 5ನೇ ಕ್ರಮಾಂಕದಲ್ಲಿ ಆಡಿದ ಅಭಿನವ್ ಮನೋಹರ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅವರು 34 ಎಸೆತಗಳಲ್ಲಿ 3 ಬೌಂಡರಿ, 9 ಸಿಕ್ಸರ್ ಸಹಿತ ಅಜೇಯ 84 ರನ್ ಸಿಡಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಲು ನೆರವಾದರು. ಡಿ.ಅವಿನಾಶ್ 22 ರನ್ ಬಾರಿಸಿದರು.
ಡ್ರ್ಯಾಗನ್ಸ್ ಪರ ಮೆಕ್ನೀಲ್ ನೊರೋನ್ಹಾ 43, ರೋಹನ್ ಪಾಟೀಲ್ 72 ರನ್ ಬಾರಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಉಳಿದಂತೆ ನಿಕಿನ್ ಜೋಸ್ ಅಜೇಯ 17, ಕೆ.ಸಿದ್ಧಾರ್ಥ್ ಅಜೇಯ 38 ರನ್ ಗಳಿಸಿದರು.
ಪಂದ್ಯದ ತಿರುವು:
ಆರಂಭಿಕ 6 ಓವರ್‌ಗಳಲ್ಲೇ 1 ವಿಕೆಟ್ ನಷ್ಟಕ್ಕೆ 75 ರನ್ ಕಲೆ ಹಾಕಿದ ಮಂಗಳೂರು ಡ್ರ್ಯಾಗನ್ಸ್ ಆಟವನ್ನು ತನ್ನ ಹಿಡಿತಕ್ಕೆ ತಂದುಕೊಂಡಿತ್ತು. ಮೆಕ್ನೀಲ್ ಮತ್ತು ರೋಹನ್ ಆರಂಭಿಕ ಜತೆಯಾಟವೇ ಮಂಗಳೂರನ್ನು ಗೆಲುವಿನೆಡೆಗೆ ಮುನ್ನಡೆಸಿತು.
ಸಂಕ್ಷಿಪ್ತ ಸ್ಕೋರ್: ಶಿವಮೊಗ್ಗ 20 ಓವರ್‌ಗಳಲ್ಲಿ ಆರು ವಿಕೆಟಿಗೆ 175 (ಅಭಿನವ್ 84, ಅವಿನಾಶ್ 22, ನಿಶ್ಚಿತ್ 31ಕ್ಕೆ 2). ಮಂಗಳೂರು 16.2 ಓವರ್‌ಗಳಲ್ಲಿ ಎರಡು ವಿಕೆಟಿಗೆ 178(ಮೆಕ್ನೀಲ್ 43, ರೋಹನ್ 72, ರಾಜ್‌ವೀರ್ 23ಕ್ಕೆ 1)
ಪಂದ್ಯಶ್ರೇಷ್ಠ: ರೋಹನ್ ಪಾಟೀಲ್