ಮುಂಬಯಿ: ಸಂಶೋಧನಾ ಕಾರ್ಯವನ್ನು ಕೇವಲ ಅಕಾಡೆಮಿ ಕ್ಷೇತ್ರದವರೇ ಮಾಡಬೇಕು ಎಂಬುದಿಲ್ಲ. ಲೋಕಕ್ಕೆ ಹೊಸ ಸಂಗತಿಯನ್ನು ಅಥವಾ ಇತಿಹಾಸಕಾರರು ಪರಿಗಣಿಸದೆ ಇರುವ ವಿಷಯದ ಬಗ್ಗೆ ಯಾರೂ ಸಂಶೋಧನೆ ಮಾಡಬಹುದು ಎಂಬುದಕ್ಕೆ ಮುಂಬಯಿಯ ಹಿರಿಯ ಪತ್ರಕರ್ತ, ಲೇಖಕ ಅಶೋಕ್ ಸುವರ್ಣ ಸಾಕ್ಷಿಯಾಗಿದ್ದಾರೆ. ಮುಂಬಯಿಯಲ್ಲಿ ಅನೇಕ ಪುರಾತನ ಗುಹೆಗಳಿವೆ. ಒಂದೊಂದು ಗುಹೆಗೂ ತನ್ನದೇ ಆದ ವಿಶಿಷ್ಟವಾದ ಸಾಂಸ್ಕೃತಿಕ, ಧಾರ್ಮಿಕ ಪರಂಪರೆ ಇದೆ. ಆದರೆ ಅಂಧೇರಿ ಅಲ್ಲಿರುವ ಕೊಂಡಿವಿಟಾ ಕೇವ್ಸ್ ಎಂಬ ಪುರಾತನ ಗುಹೆ ಮಹಾಕಾಳಿ ಕೇವ್ಸ್ ಎಂಬ ನಾಮಾಂತರ ಹೇಗಾಯಿತು ಎಂಬುದರ ಬಗ್ಗೆ ಈ ಕೃತಿಯಲ್ಲಿ ಸಂಶೋಧನಾ ರೀತಿ ಕಾರ್ಯವಿದೆ ಎಂಬುದು ಹೆಮ್ಮೆಪಡುವ ಸಂಗತಿಯಾಗಿದೆ. ಅಲ್ಲದೆ ಈ ಕೃತಿ ಸಂಶೋಧಕರಿಗೆ ಮಾರ್ಗದರ್ಶಿಯಾಗಿದೆ ಎಂದು ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಹೇಳಿದರು.
ಮಾ. 16 ರಂದು ಬೆಳಗ್ಗೆ ಮುಂಬಯಿ ವಿವಿ ಕನ್ನಡ ವಿಭಾಗದ ವತಿಯಿಂದ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ. ಪಿ. ನಾಯಕ್ ಭವನದಲ್ಲಿ ನಡೆದ ಮೊಗವೀರ ಮಾಸಿಕದ ಸಂಪಾದಕ ಅಶೋಕ ಎಸ್. ಸುವರ್ಣ ರಚಿತ “ಮಹಾಕಾಳಿ ಕೇವ್ಸ್‌ನ ಮಹಾನುಭಾವ’ ಕೃತಿ
ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಶೋಕ್ ಸುವರ್ಣ ಅವರಿಂದ ಇನ್ನಷ್ಟು ಕೃತಿಗಳು ಪ್ರಕಟಗೊಂಡು ಸಾಹಿತ್ಯ ಲೋಕ ಶ್ರೀಮಂತಗೊಳ್ಳಬೇಕು ಎಂದು ನುಡಿದರು.
ಮೈಸೂರು ಹಿರಿಯ ಸಾಹಿತಿ ಡಾ| ಕಾಳೇಗೌಡ ನಾಗವಾರ ಮುಖ್ಯ ಅತಿಥಿಯಾಗಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್. ಬಂಗೇರ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಪ್ರಾಧ್ಯಾಪಕ ವಿಮರ್ಶಕ, ಹಿರಿಯ ಸಾಹಿತಿ ಡಾ| ವಿಶ್ವನಾಥ್ ಕಾರ್ನಾಡ್, ಹುಬ್ಬಳ್ಳಿ ಅಲ್ಲಿನ ವಿಮರ್ಶಕ, ಹಿರಿಯ ಸಾಹಿತಿ ಡಾ| ಶ್ಯಾಮಸುಂದರ ಬಿದರಕುಂದಿ, ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಬ್ಯಾಂಕಿನ ನಿವೃತ್ತ ಹಿರಿಯ ಉದ್ಯೋಗಿ, ಸಾಹಿತ್ಯಪ್ರಿಯ ಕೃಷ್ಣರಾಜ್ ಸಿ. ಕರ್ಕೇರ ಕೃತಿ ಬಿಡುಗಡೆ ಗೊಳಿಸಿದರು. ಉದಯ ಶೆಟ್ಟಿ ಪಂಜಿಮಾರು ಕೃತಿಯನ್ನು ಪರಿಚಯಿಸಿದರು.
ಹರೀಶ್ ಪುತ್ರನ್ ಕಾಂತಪ್ಪ ಮನೆ, ಮೊಗವೀರ ಮಂಡಳಿ ಟ್ರಸ್ಟಿಗಳಾದ ಜಿ. ಕೆ. ರಮೇಶ್, ಅಜಿತ್ ಜಿ. ಸುವರ್ಣ, ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಸಾಲ್ಯಾನ್, ಕಾಟಿಪಟ್ಣ ಮೋಗವೀರ ಸಭಾ ಅಧ್ಯಕ್ಷ ಪಿ. ಧರ್ಮಪಾಲ್, ಆನಂದ ಮೆಂಡನ್ ಕಾಂತವು ಭಟ್ಟ ಮನೆತನ, ಮೊಗವೀರ ಪತ್ರಿಕೆಯ ವ್ಯವಸ್ಥಾಪಕ ದಯಾನಂದ ಬಂಗೇರ, ಉದ್ಯಮಿ ಶ್ರೀನಿವಾಸ ಕಾಂಚನ್ ಉಪಸ್ಥಿತರಿದ್ದರು.
ಡಾ| ಕಾಳೇಗೌಡ ನಾಗವಾರ ಮಾತನಾಡಿ, ಮೊಗವೀರರ ಸಾಹಸ, ಸಾಧನೆ ಮತ್ತು ಸೌಲಭ್ಯದ ಬಗ್ಗೆ ಬೆಳಕು ಚೆಲ್ಲುತ್ತಾ, ಪಶ್ಚಿಮ ಕರಾವಳಿಯ ಈ ಸಮಾಜವು ತನ್ನ ಶ್ರೀಮಂತ ಪರಂಪರೆಯಿಂದಾಗಿ ಒಗ್ಗಟ್ಟಿಗೆ ಹೆಸರುವಾಸಿಯಾಗಿದೆ ಎಂದರು.
ಗುಹೆಗಳೆಲ್ಲವೂ ಶಿವತತ್ವದಲ್ಲಿ ನಿರ್ಮಾಣಗೊಂಡಿವೆ. ಇವೆಲ್ಲವೂ ನಮ್ಮ ಪುರಾತನ ಜೀವನ ಪದ್ಧತಿಯನ್ನು ಬಿಂಬಿಸುತ್ತಿವೆ. ಆದ್ದರಿಂದ ಭವಿಷ್ಯತ್ತಿನ ಪೀಳಿಗೆಗೆ ಇಂತಹ ಬರವಣಿಗಳ ಪುಸ್ತಕ ಆಕಾರಗ್ರಂಥ ಆಗಬೇಕು ಎಂದು ಕೃತಿಕಾರ ಅಶೋಕ ಸುವರ್ಣ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಸಿದರು. ಕನ್ನಡ ವಿಭಾಗದ ಸಂಶೋಧನ ಸಹಾಯಕ ದಿನಕರ ಚಂದನ್ ವಂದಿಸಿದರು.
ಚಿತ್ರ- ವರದಿ: ರೋನ್ಸ್ ಬಂಟ್ವಾಳ್