Advertisement

ಉಪಚುನಾವಣೆಗೆ ಅಂತಿಮ ಅಖಾಡ ಸಿದ್ಧ

12:57 PM May 13, 2022 | Team Udayavani |

ದಾವಣಗೆರೆ: ಭಾರೀ ಕುತೂಹಲ, ರೋಚಕತೆಗೆ ಕಾರಣವಾಗಿರುವ ಬಿಜೆಪಿ, ಕಾಂಗ್ರೆಸ್‌ ಪಾಲಿಗೆ ಅತೀ ಮಹತ್ವದ ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್‌ ಉಪ ಚುನಾವಣೆಗೆ ಅಂತಿಮ ಅಖಾಡ ಸಿದ್ದವಾಗಿದೆ.

Advertisement

ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಗುರುವಾರ ಯಾವುದೇ ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆಯದೆ ಕಣದಲ್ಲೇ ಉಳಿದುಕೊಂಡಿರುವುದರಿಂದ ಮೇ 20 ರಂದು ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಹಣಾಹಣಿ ಅಖೈರಾಗಿದೆ.

ಅತಿ ಹೆಚ್ಚು ಗಮನ ಸೆಳೆದಿರುವ 28ನೇ ವಾರ್ಡ್‌ನಲ್ಲಿ ಬಿಜೆಪಿಯ ಜೆ.ಎನ್. ಶ್ರೀನಿವಾಸ್‌, ಕಾಂಗ್ರೆಸ್‌ ನ ಹುಲ್ಮನೆ ಗಣೇಶ್‌, ಜೆಡಿಎಸ್‌ನ ಮೊಹ್ಮದ್‌ ಸಮೀವುಲ್ಲಾ ಒಳಗೊಂಡಂತೆ ಒಟ್ಟು ಆರು ಜನ ಕಣದಲ್ಲಿದ್ದಾರೆ. ಎನ್‌. ಎಸ್‌. ಅಭಿಷೇಕ್‌, ಬಿ. ಚಂದ್ರಶೇಖರ್‌, ಸೈಯದ್‌ ಮನ್ಸೂರ್‌ ಪಕ್ಷೇತರರಾಗಿದ್ದಾರೆ. 37ನೇ ವಾರ್ಡ್‌ನಲ್ಲಿ ಕಳೆದ 2019ರ ಚುನಾವಣೆಯಂತೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಶ್ವೇತಾ ಶ್ರೀನಿವಾಸ್‌, ಕಾಂಗ್ರೆಸ್‌ನಿಂದ ರೇಖಾರಾಣಿ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿರುವ ಜೆ.ಎನ್. ಶ್ರೀನಿವಾಸ್‌ ಸ್ಪರ್ಧಿಸುತ್ತಿರುವ 28ನೇ ವಾರ್ಡ್‌ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಕಾಂಗ್ರೆಸ್‌ನ ಗಣೇಶ್‌ ಹುಲ್ಮನೆ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಜೆಡಿಎಸ್‌ನ ಮೊಹ್ಮದ್‌ ಸಮೀವುಲ್ಲಾ, ಪಕ್ಷೇತರ ಅಭ್ಯರ್ಥಿ ಸೈಯದ್‌ ಮನ್ಸೂರ್‌ ಒಡ್ಡುವ ಸ್ಪರ್ಧೆಯನ್ನು ಮೆಟ್ಟಿ ನಿಲ್ಲಬೇಕಾಗಿದೆ.

ಜೆ.ಎನ್. ಶ್ರೀನಿವಾಸ್‌ ಅವರನ್ನು ಬೆಂಬಲಿಸಿಕೊಂಡು ಬರುತ್ತಿದ್ದ ಅಲ್ಪಸಂಖ್ಯಾತ ಸಮುದಾಯ ಈ ಉಪ ಚುನಾವಣೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಆಧಾರದಲ್ಲೇ ಫಲಿತಾಂಶ ನಿರ್ಧರಿತವಾಗಲಿದೆ. ಕಾಂಗ್ರೆಸ್‌ ಸಹ ಅಲ್ಪಸಂಖ್ಯಾತರ ಮತಗಳ ಮೇಲೆ ಭಾರೀ ಕಣ್ಣಿಟ್ಟಿದೆ. ಕಾಂಗ್ರೆಸ್‌ನ ಮತಬ್ಯಾಂಕ್‌ ಎಂದೇ ಗುರುತಿಸಲ್ಪಡುವ ಅಲ್ಪಸಂಖ್ಯಾತರು ಸಾಮಾನ್ಯವಾಗಿ ಕಮಲ ಅರಳಲು ಅವಕಾಶ ನೀಡುವುದಿಲ್ಲ ಎಂಬ ಮಾತು ಜನಜನಿತ. ಅಲ್ಪಸಂಖ್ಯಾತ ಸಮುದಾಯದವರೇ ಆದ ಮೊಹ್ಮದ್‌ ಸಮೀವುಲ್ಲಾ, ಸೈಯದ್‌ ಮನ್ಸೂರ್‌ ಪಡೆಯುವ ಪ್ರತಿಯೊಂದು ಮತ ಮುಖ್ಯ. ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರ ಅಭ್ಯರ್ಥಿ ಪಡೆಯುವ ಮತಗಳು ಶ್ರೀನಿವಾಸ್‌ ಪಾಳೇಯದವೇ ಆಗಿವೆ. ಬಹು ನಿರ್ಣಾಯಕ ಅಲ್ಪಸಂಖ್ಯಾತ ಸಮುದಾಯದ ಮತಗಳು ವಿಭಜನೆಯಾಗಿ ಬಿಜೆಪಿಯ ಮತ್ತು ಶ್ರೀನಿವಾಸ್‌ ಅವರ ಪಕ್ಕಾ ಮತಗಳು ದೊರೆತಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸ ಬಲ್ಲರು. ಹಾಗಾಗಿ ಫಲಿತಾಂಶ ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿದೆ.

Advertisement

ಇನ್ನು 28ನೇ ವಾರ್ಡ್‌ನಲ್ಲಿ ಮಹಿಳಾ ಮತದಾರರು ಸಹ ಪ್ರಮುಖ ಪಾತ್ರ ವಹಿಸಲಿದ್ದಾರೆ. ಭಗತ್‌ಸಿಂಗ್‌ ನಗರ ವಾರ್ಡ್‌ನ ಒಟ್ಟು ಮತದಾರರ ಸಂಖ್ಯೆ 8946. ಅವರಲ್ಲಿ ಪುರುಷರು 4467. ಮಹಿಳಾ ಮತದಾರರ ಸಂಖ್ಯೆ 4479. ಪುರುಷರಗಿಂತಲೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಮಹಿಳೆಯರು ಕೈಗೊಳ್ಳುವ ತೀರ್ಮಾನ ಬಹಳ ಕುತೂಹಲ ಕೆರಳಿಸಿದೆ. ಕಮಲ, ಕೈ ಇಲ್ಲವೇ ತೆನೆ ಹೊತ್ತ ಮಹಿಳೆಗೆ ಆಶೀರ್ವದಿಸುವರೋ ಎಂಬುದನ್ನು ಕಾದು ನೋಡಬೇಕಿದೆ.

37 ನೇ ವಾರ್ಡ್‌ನ ಕೆ.ಇ.ಬಿ. ಕಾಲೋನಿಯಲ್ಲಿ ಕಳೆದ ಬಾರಿಯಂತೆ ಬಿಜೆಪಿಯ ಶ್ವೇತಾ ಶ್ರೀನಿವಾಸ್‌ ನೇರ ಸ್ಪರ್ಧೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ನ ಅಚ್ಚರಿಯ ಅಭ್ಯರ್ಥಿ ರೇಖಾರಾಣಿ ಸಕ್ರಿಯ ರಾಜಕಾರಣಕ್ಕೆ ತೀರಾ ಹೊಸಬರು. ಆದರೂ, ಅವರ ಹಿಂದೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹೆಸರಿದೆ. ಕೆಇಬಿ ಕಾಲೋನಿ ವಾರ್ಡ್‌ ಕಾಂಗ್ರೆಸ್‌ ಬೆಲ್ಟ್ ಎಂದೇ ಗುರುತಿಸಲ್ಪಡುತ್ತದೆ. ಹಾಗಾಗಿ ಶ್ವೇತಾ ಶ್ರೀನಿವಾಸ್‌ ಕಳೆದ ಬಾರಿಗಿಂತಲೂ ಹೆಚ್ಚಿನ ಪೈಪೋಟಿ ಎದುರಿಸುವಂತಾಗಿದೆ.

ಕೆಇಬಿ ಕಾಲೋನಿಯಲ್ಲೂ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಒಟ್ಟಾರೆ 6630 ಮತದಾರರಲ್ಲಿ 3530 ಮಹಿಳಾ ಮತದಾರರಿದ್ದಾರೆ. 3100 ಪುರುಷ ಮತದಾರರಿದ್ದಾರೆ. ಮತಗಟ್ಟೆ ಸಂಖ್ಯೆ 315 ರಲ್ಲೇ 732 ಮಹಿಳಾ ಮತದಾರರಿದ್ದಾರೆ. ಎರಡೂ ವಾರ್ಡ್‌ಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ.

ಅಂತಿಮ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುವ ಮುನ್ನವೇ ಎಲ್ಲ ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರ ದಲ್ಲಿ ತೊಡಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಜಿದ್ದಿಗೆ ಬಿದ್ದಿರುವಂತೆ ಪ್ರಚಾರ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಸ್ಥಳೀಯ ಮುಖಂಡರು ಸಹ ರಂಗಪ್ರವೇಶ ಮಾಡುವುದರಿಂದ ಚುನಾವಣಾ ರಂಗೇರಲಿದೆ. ಎರಡೂ ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಎರಡು ಪಕ್ಷಗಳ ನಡುವೆ 28ನೇ ವಾರ್ಡ್‌ನಲ್ಲಿ ಜೆಡಿಎಸ್‌ ಒಂದು ಕೈ ನೋಡುವ ಗುರಿಯೊಂದಿಗೆ ಪ್ರಯತ್ನ ಮುಂದುವರೆಸಿದೆ.

-ರಾ. ರವಿಬಾಬು

 

Advertisement

Udayavani is now on Telegram. Click here to join our channel and stay updated with the latest news.

Next