Advertisement
ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆರೋಪಿತ ಮಹಿಳೆಯ ಮನೆಯ ಮೇಲೆ ಟಿಎಚ್‌ಓ ಅವರು 2019 ಮತ್ತು 2022ರಲ್ಲಿ ಎರಡು ಬಾರಿ ಮನೆಯ ಮೇಲೆ ದಾಳಿಮಾಡಿ, ಮುಖ್ಯದ್ವಾರಕ್ಕೆ ಶೀಲ್ ಮಾಡಿದ್ದಾರೆ. ಅವಳಿಂದ 500 ಬಾಂಡ್‌ನಲ್ಲಿ ಇನ್ನು ಮುಂದೆ ಇಂತಹ ಕೆಲಸ ಮಾಡುವದಿಲ್ಲ ಎಂದು ಬಾಂಡ್ ಬರೆಸಿಕೊಂಡಿದ್ದಾರೆ. ನಂತರ ಅವಳ ಮೇಲೆ ಕೇಸ್ ಹಾಕಿ ಕೋರ್ಟನಲ್ಲಿ ಕೇಸ್ ನಡೆಯುತ್ತಿದ್ದರು ಸಹ, ಹಿತ್ತಲ ಬಾಗಿಲು ಮೂಲಕ ಎಗ್ಗಿಲ್ಲದೇ ಅಕ್ರಮವಾಗಿ ಭ್ರೂಣಹತ್ಯೆ ಮಾಡುತ್ತಿದ್ದರು. ಕಳೆದ ಸೋಮವಾರ ಮಹಾರಾಷ್ಟ್ರ ಮೂಲಕ ಸೋನಾಲಿ ಸಚಿನ್ ಕದಂ(33) ಗರ್ಭಪಾತ ಮಾಡಿಸಿಕೊಂಡು ಮೃತಳಾದ ಕಾರಣ ನೆರೆಯ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಕೇಸ್ ಬಾಗಲಕೋಟೆಗೆ ವರ್ಗಾವಣೆಯಾದ್ದರಿಂದ ಭ್ರೂಣಹತ್ಯೆ ಪ್ರಕರಣವು ಬೆಳಕಿಗೆ ಬಂದಿದೆ.
ಭಾರತ ದೇಶದಲ್ಲಿ ಲಿಂಗಾನುಪಾತ ಕುಸಿಯುತ್ತಿರುವ ಸಂದರ್ಭದಲ್ಲಿ ಹಾಗೂ ಸ್ರ್ತೀ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿ ಹೋರಾಟ ಮಾಡಿದ್ದ ವಿಶ್ವಗುರು ಬಸವಣ್ಣನವರು ಜನ್ಮ ತಳೆದ ನಾಡಿನಲ್ಲಿ ಹೆಣ್ಣುಭ್ರೂಣ ಹತ್ಯೆಯ ಅಕ್ರಮ ದಂಧೆಯು ಕಳೆದ 7-8 ವರ್ಷಗಳಿಂದ ಎಗ್ಗಿಲ್ಲದೆ ಮಹಾಲಿಂಗಪುರದಲ್ಲಿ ನಡೆಯುತ್ತಿದೆ ಎಂದರೆ ಇದು ನಮ್ಮ ನಾಗರೀಕ ಸಮಾಜ ತಲೆ ತಗ್ಗಿಸುವ ಮತ್ತು ಬಸವಣ್ಣನವರಿಗೆ ಮಾಡಿದ ಅವಮಾನವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
Related Articles
ಭ್ರೂಣಹತ್ಯೆ ಪ್ರಕರಣವು ಅಂತರಾಜ್ಯಕ್ಕೆ ವ್ಯಾಪಿಸಿದ್ದರಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸುಮೋಟೋ ಪ್ರಕರಣ ದಾಖಲಿಸಿಕೊಂಡಿದೆ. ಇಂದು ಸ್ವತಃ ನಾವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಜಿಲ್ಲಾಧಿಕಾರಿಗಳು, ಎಸ್‌ಪಿ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮೂರು ದಿನಗಳಲ್ಲಿ ಕೇಸ್‌ನ ಸಂಪೂರ್ಣ ವರದಿಯನ್ನು ತರಿಸಿಕೊಂಡು ನಮ್ಮ ಆಯೋಗದಿಂದಲೂ ಕೇಸ್ ದಾಖಲಿಸಿ ಆರೋಫಿತರಿಗೆ ಕಠೀಣ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತೇವೆ.
Advertisement
ಪ್ರಭಾವಿಗಳ ಆಟ ನಡೆಯಲು ಬಿಡಲ್ಲಭ್ರೂಣಹತ್ಯೆ ಪ್ರಕರಣದಲ್ಲಿ ಜಿಲ್ಲೆಯ ಕೆಲವು ಪ್ರಭಾವಿ ವ್ಯಕ್ತಿ ಹಾಗೂ ಅಧಿಕಾರಿಗಳ ಬೆಂಬಲವಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಜೊತೆಗೆ ಕೆಲ ಅಧಿಕಾರಿಗಳಿಂದಲೂ ಅವರ ಪೋನ್ ಪೇ ನಂಬರಗೆ ದೊಡ್ಡ ಮೊತ್ತದ ಹಣ ವರ್ಗಾವಣೆಯಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ನಮ್ಮ ಪೋಲಿಸ ಇಲಾಖೆಯ ಅಧಿಕಾರಿಗಳು ಕವಿತಾ ಬಾಡನವರ ಅವರ ಮೋಬೈಲ್ ಸೀಜ್ ಮಾಡಿ ಪೋಲಿಸ್ ಇಲಾಖೆಯ ಎಫ್‌ಎಸ್‌ಎಲ್‌ಗೆ ಕಳಿಸಿದ್ದಾರೆ. ಅದರ ಸಂಪೂರ್ಣ ವರದಿ ಬಂದ ನಂತರ ಆ ಕವಿತಾಗೆ ಬೆಂಬಲವಿರುವ ಪ್ರಭಾವಿ ವ್ಯಕ್ತಿಗಳು ಹಾಗೂ ಪ್ರಕರಣದ ಮುಖ್ಯ ಕಿಂಗ್‌ಪಿನ್ ಯಾರು ಎಂಬ ಮಾಹಿತಿ ಸಿಗಲಿದೆ. ಈ ಕೆಸ್‌ನಲ್ಲಿ ಎಂತಹದೇ ಪ್ರಭಾವಿ ಅಧಿಕಾರಿಗಳು ಮತ್ತು ವ್ಯಕ್ತಿಗಳಿಂದರೂ ಅವರ ಆಟವನ್ನು ನಡೆಸಲು ಬೀಡದೇ ಸರ್ಕಾರಕ್ಕೆ ವರದಿ ಸಲ್ಲಿಸಿ, ನಮ್ಮ ಆಯೋಗವು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ ಎಂದರು. ಮೂಡಲಗಿ ತಾಲೂಕಿನಲ್ಲಿಯೂ ಕವಿತಾ ಕ್ಲಿನಿಕ್!
ಭ್ರೂಣಹತ್ಯೆ ಕೇಸ್‌ನಲ್ಲಿ ಬಂಧಿಯಾಗಿರುವ ಕವಿತಾ ಬಾಡವರ ಅವರು ಹೆಣ್ಣುಭ್ರೂಣ ಹತ್ಯೆ ಪತ್ತೆಯ ಸ್ಕ್ಯಾನಿಂಗ್‌ಗಾಗಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಶ್ರಾವಣಿ ಹೆಸರಿನಲ್ಲಿ ಕ್ಲೀನಿಕ್ ನಡೆಸುತ್ತಿದ್ದರು ಎಂಬ ಮಾಹಿತಿಯ ಔಷಧಿ ಚೀಟಿ ಸಿಕ್ಕಿದ್ದರಿಂದ ಗೋಕಾಕ್ ಟಿಎಚ್‌ಓ ಅವರನ್ನು ಸಂಪರ್ಕಿಸಿದಾಗ ಮೊದಲು ಇತ್ತು, ಕಳೆದ ಮೂರು ತಿಂಗಳಿನಿಂದ ಅಲ್ಲಿ ಕ್ಲೀನಿಕ್ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಆದರೂ ಸಹ ಬಾಗಲಕೋಟೆ ಡಿಎಚ್‌ಓ ಅವರಿಗೆ ಬೆಳಗಾವಿ ಡಿಎಚ್‌ಓ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಪತ್ರ ಬರೆದು ಸ್ಥಳ ಪರಿಶೀಲನೆ ನಡೆಸಿ ಆಯೋಗಕ್ಕೆ ವರದಿ ನೀಡಲು ತಿಳಿಸಿದ್ದೇನೆ. ಜೊತೆಗೆ ಜಮಖಂಡಿ ಎಸಿ ಅವರಿಗೆ ಕೂಡಾ ಢವಳೇಶ್ವರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲು ಸೂಚಿಸಿದ್ದೇವೆ ಎಂದರು. ಆರೋಪಿ ಕವಿತಾಳ ನಕಲಿ ಡಿಗ್ರಿ ?
ಭ್ರೂಣಹತ್ಯೆ ಆರೋಪಿ ಕವಿತಾ ಬಾಡನವರ ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿನ ಢವಳೇಶ್ವರದಲ್ಲಿ ನಡೆಸುತ್ತಿದ್ದ ಶ್ರಾವಣಿ ಕ್ಲೀನಿಕ್‌ನ ಔಷಧಿ ಚೀಟಿಯು ಆಯೋಗದ ಸದಸ್ಯರಿಗೆ ಸಿಕ್ಕಿದೆ. ವಿಚಿತ್ರವೆಂದರೆ ಚೀಟಿಯಲ್ಲಿ ಕೆ.ಸಿ.ಬಾಡನವರ ಎಂ.ಬಿ.ಇ.ಎಚ್ ಎಂದು ತಮ್ಮ ಡಿಗ್ರಿಯನ್ನು ನಮೂದಿಸಿಕೊಂಡಿದ್ದಾರೆ. ಈ ಕುರಿತು ಡಿಎಚ್‌ಓ ಅವರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತಹ ಯಾವುದೇ ಕೋರ್ಸಗಳು ಇಲ್ಲ ಎಂದು ಆಯೋಗದ ಸದಸ್ಯರಿಗೆ ಮಾಹಿತಿ ನೀಡಿದರು. ನಕಲಿ ವೈದ್ಯರ ಮೇಲೆ ನಿಗಾ ಇರಿಸಿ
ಬಾಗಲಕೋಟೆ ಜಿಲ್ಲೆಯಲ್ಲಿ 183 ಒಟ್ಟು ಸ್ಕ್ಯಾನಿಂಗ್ ಸೆಟಂರ್‌ಗಳಿವೆ. ಮಹಾಲಿಂಗಪುರದಲ್ಲಿ ಮೂರು ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಪಿಸಿಆರ್ ಮಾಡಲಾಗಿದೆ. ಜೊತೆಗೆ ಬಾಗಲಕೋಟೆ ಜಿಲ್ಲೆಯಲ್ಲಿಯೇ ಅದರಲ್ಲೂ ಮುಧೋಳ, ಮಹಾಲಿಂಗಪುರ ಭಾಗದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಮಾಹಿತಿಯು ಆಯೋಗದ ಗಮನಕ್ಕೆ ಬಂದಿದೆ. ಆರೋಗ್ಯ ಇಲಾಖೆ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ಟಿಎಚ್‌ಓ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ನಕಲಿ ವೈದ್ಯರ ಮೇಲೆ ಸೂಕ್ತ ನಿಗಾ ಇರಿಸಿ, ಮತ್ತೊಮ್ಮೆ ಇಂತಹ ಯಾವುದೇ ಪ್ರಕರಣಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದರು. ಸಾಂಗಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆಗೆ ಪತ್ರ
ಭ್ರೂಣಹತ್ಯೆ ಕೇಸ್‌ನಲ್ಲಿ ಶಾಮೀಲಾಗಿರುವ ವ್ಯಕ್ತಿಗಳನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿಗಳ ಮೂಲಕ ಸಾಂಗಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಗೆ ಪತ್ರಬರೆಯಲು ತಿಳಿಸಿ, ಪ್ರಕರಣದಲ್ಲಿ ಭಾಗಿಯಾದ ಸ್ಕಾö್ಯನಿಂಗ್ ವೈದ್ಯರ ಮೇಲೆ ಕ್ರಮ ಹಾಗೂ ಆಸ್ಪತ್ರೆಯನ್ನು ಸೀಜ್ ಮಾಡಲು ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲು ತಿಳಿಸಿದ್ದೇವೆ. ಪ್ರಕರಣದ ಸಂಪೂರ್ಣ ವರದಿಯನ್ನು ಪಡೆದುಕೊಂಡು ನಮ್ಮ ಆಯೋಗದಿಂದ ಮತ್ತೊಂದು ಕೇಸ್ ದಾಖಲಿಸಿಕೊಂಡು ಕೇಸ್‌ನಲ್ಲಿ ಭಾಗಿಯಾದವರಿಗೆ ಸಮನ್ಸ್ ಜಾರಿ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು. ಇಂತಹ ಘಟನೆ ಮರುಕಳಿಸದಂತೆ ಕ್ರಮ
ಭ್ರೂಣಹತ್ಯೆ ಕೇಸ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿಗಳು ಪೋಲಿಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ತಪ್ಪಿತಸ್ಥರಿಗೆ ಶೀಕ್ಷೆಯಾಗಬೇಕು. ಮುಂದೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಅಧಿಕಾರಿಗಳು ಗಮನ ಹರಿಸಬೇಕು. ಇಂತಹ ನಕಲಿ ವೈದ್ಯರ ಹಾಗೂ ಭ್ರೂಣಹತ್ಯೆ ಮಾಡುವ ಮಾಹಿತಿ ಸಿಕ್ಕಲ್ಲಿ ಆಯೋಗದಿಂದಲೇ ದಾಳಿ ನಡೆಸಿ, ಕೇಸ್ ದಾಖಲಿಸಿಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತದೆ ಎಂದರು. ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮೇಲೆ ಸೂಕ್ತಕ್ರಮಕ್ಕೆ ಸೂಚನೆ
ಈ ಭ್ರೂಣಹತ್ಯೆ ಪ್ರಕರಣವನ್ನು ಗಮನಿಸಿದಾಗ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಅರವಿಂದ ಪಟ್ಟಣಶೆಟ್ಟಿ ಅವರ ನಿರ್ಲಕ್ಷ್ಯವೇ ಎದ್ದು ಕಾಣುತ್ತಿದೆ. ಮುಖ್ಯವಾಗಿ ಅರವಿಂದ ಪಟ್ಟಣಶೆಟ್ಟಿ ಅವರು ಮೂಲತ: ಮಹಾಲಿಂಗಪುರದವರಾಗಿದ್ದು ಸಂಶಯಕ್ಕೆ ಎಡೆಮಾಡಿದೆ. ಜಮಖಂಡಿ ಎಸಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯ ಮೇಲೆ ಸೂಕ್ತಕ್ರಮ ಕೈಗೊಂಡು ಆಯೋಗಕ್ಕೆ ವರದಿ ನೀಡಲು ತಿಳಿಸಿದ್ದೇನೆ.
— ಶಶಿಧರ ಕೋಸಂಬೆ. ಸದಸ್ಯರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆಯೋಗ್ಯದ ಸದಸ್ಯರ ಭೇಟಿಯ ಸಮಯದಲ್ಲಿ ಭಾಗಲಕೋಟೆ ಡಿಎಚ್‌ಓ ಡಾ.ರಾಜಕುಮಾರ ಯರಗಲ್ಲ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಎಂ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಣಗೌಡ ಪಾಟೀಲ, ಜಮಖಂಡಿ ಎಸಿ ಸಂತೋಷ ಕಾಮಗೌಡ, ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ಮುಧೋಳ ಟಿಎಚ್‌ಓ ವೆಂಕಟೇಶ ಮಲಘಾಣ, ಜಮಖಂಡಿ ಡಿವೈಎಸ್‌ಪಿ ಶಾಂತವೀರ ಈ, ಬನಹಟ್ಟಿ ವೃತ್ತದ ಸಿಪಿಆಯ್ ಸಂಜೀವ ಬಳಗಾರ, ಸ್ಥಳೀಯ ಠಾಣಾಧಿಕಾರಿ ಪ್ರವೀಣ ಬೀಳಗಿ, ಪುರಸಭೆ ವ್ಯವಸ್ಥಾಪಕ ಎಸ್.ಎಂ.ಪಾಟೀಲ, ಆರೋಗ್ಯ ನಿರೀಕ್ಷಕ ಎಂ.ಎಂ.ಮೂಗಳಖೋಡ, ಕಿರಿಯ ಆರೋಗ್ಯ ನಿರೀಕ್ಷಕ ರಾಜು ಹೂಗಾರ, ಸಮುದಾಯ ಆರೋಗ್ಯದ ಕೇಂದ್ರ ವೈದ್ಯಾಧಿಕಾರಿ ಸಿ.ಎಂ.ವಜ್ಜರಮಟ್ಟಿ ಸೇರಿದಂತೆ ಹಲವರು ಇದ್ದರು. –ವರದಿ : ಚಂದ್ರಶೇಖರ ಮೋರೆ