Advertisement

2 ವರ್ಷವಾದರೂ ಸದಸ್ಯರಿಗಿಲ್ಲ ಅಧಿಕಾರ ಭಾಗ್ಯ

04:28 PM Sep 02, 2020 | Suhan S |

ಮಹಾಲಿಂಗಪುರ: ಸ್ಥಳೀಯ ಪುರಸಭೆ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದೇ, ಆಡಳಿತಾಧಿಕಾರಿಯ ಅಡಿಯಲ್ಲಿ ಪುರಸಭೆ ಕಾರ್ಯನಿರ್ವಹಿಸುವಂತಾಗಿದೆ.

Advertisement

ಎರಡು ವರ್ಷವಾದರೂ ಅಧಿಕಾರವಿಲ್ಲ: ಸ್ಥಳೀಯ ಪುರಸಭೆಗೆ 2018ರ ಆಗಸ್ಟ್‌ನಲ್ಲಿ ಚುನಾವಣೆ ನಡೆದಿತ್ತು. ಸದಸ್ಯರಾಗಿ ಚುನಾಯಿತಗೊಂಡು ಎರಡು ವರ್ಷ ಕಳೆದರೂ ಸದಸ್ಯರಿಗೆ ಅಧಿ ಕಾರ ಭಾಗ್ಯ ಸಿಕ್ಕಿಲ್ಲ. ಎರಡು ವರ್ಷಗಳ ಅವ ಧಿಯಲ್ಲಿ ಮೂರು ಬಾರಿ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಂಡಿದೆ. ಕೆಲವರು ಮೀಸಲಾತಿ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ ಕಾರಣ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನಿರಂತರ ವಿಳಂಬವಾಗಿದೆ. ಚುನಾಯಿತ ಸದಸ್ಯರು ಮಾತ್ರ ಮೀಸಲಾತಿ ಸಮಸ್ಯೆ ಬಗೆಹರಿದು ಬೇಗ ಅಧಿಕಾರ ಸ್ವೀಕರಿಸಬೇಕೆಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಮಾ. 11ರಂದು ಮೀಸಲಾತಿ ಪ್ರಕಟ: ರಾಜ್ಯ ಸರಕಾರವು ಕಳೆದ ಮಾ. 11ರಂದು ರಾಜ್ಯದ ನಗರಸಭೆ, ಪುರಸಭೆ, ಪಪಂ ಸೇರಿದಂತೆ 268 ನಗರ ಸ್ಥಳೀಯ  ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿತ್ತು. ಮಾರ್ಚ್‌ ಅಂತ್ಯದೊಳಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮುಗಿದು ಅಧಿ ಕಾರ ಭಾಗ್ಯ ಸಿಗುತ್ತದೆ ಎಂದು ಭಾವಿಸಲಾಗಿತ್ತು. ರಾಜ್ಯ ಸರಕಾರದ ಮಾರ್ಚ್‌ 11ರ ಹೊಸ ಅಧಿ ಸೂಚನೆಗೆ ರಾಯಚೂರು ಜಿಲ್ಲೆ ಸಿಂಧನೂರು ನಗರಸಭೆ ಸದಸ್ಯ ಮತ್ತು ಮಹಾಲಿಂಗಪುರ ಪುರಸಭೆ ಸಾಮಾನ್ಯ ಮಹಿಳಾ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಸ್ಥಾನಕ್ಕೆ ಮೀಸಲಿಟ್ಟಿದ್ದನ್ನು ಪ್ರಶ್ನಿಸಿ ಸ್ಥಳೀಯ ಪುರಸಭೆ ಸದಸ್ಯೆ ಸ್ನೇಹಲ್‌ ಅಂಗಡಿ ಸೇರಿದಂತೆ ರಾಜ್ಯಾದ್ಯಂತ ಹಲವರು ಹೊಸ ಮೀಸಲಾತಿ ಪ್ರಶ್ನಿಸಿ ಮತ್ತೇ ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಾಲಯ ವಿಚಾರಣೆಯನ್ನು ಏ. 1ಕ್ಕೆ ಮುಂದೂಡಿತ್ತು.  ಬಳಿಕ ಕೋವಿಡ್ ಹಾವಳಿಯಿಂದ ಕೋರ್ಟ್‌ ಕಲಾಪ ಸ್ಥಗಿತಗೊಂಡವು.

ಪರಿಷ್ಕರಣೆಗಾಗಿ ಅಧಿಸೂಚನೆ ಪ್ರಕಟ: ರಾಜ್ಯ ಸರಕಾರವು ರಾಜ್ಯದಲ್ಲಿನ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಉದ್ದೇಶಕ್ಕಾಗಿ, ಬಾಧಿತ ವ್ಯಕ್ತಿಗಳಿಂದ ಸಲಹೆ, ಆಕ್ಷೇಪಣೆಗಳನ್ನು ಸಲ್ಲಿಸಲು ಆ. 27ರಂದು ನೂತನ ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆಯಿಂದ ಬರುವ ವರದಿ ಆಧರಿಸಿ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡು, ಸದಸ್ಯರು ಅಧಿ ಕಾರ ಗದ್ದುಗೆ ಏರಲು ಇನ್ನು ಕೆಲವು ತಿಂಗಳು ಕಾಯಬೇಕಾಗಿದೆ.

 

Advertisement

ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಕಾರಣ ಚುನಾವಣೆಯಲ್ಲಿ ಗೆದ್ದು ಎರಡು ವರ್ಷ ಕಳೆದರೂ ಅಧಿಕಾರ ಸಿಕ್ಕಿಲ್ಲ. ಚುನಾಯಿತ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದೇ ಅಧಿಕಾರಿಗಳು ಮನಬಂದಂತೆ ಕಾರ್ಯನಿರ್ವಹಿಸುತ್ತಿರುವ ಕಾರಣ, ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿವೆ. ಇದರಿಂದ ಹಲವು ಬಾರಿ ಸಾರ್ವಜನಿಕರಿಂದಲೇ ಮುಜಗುರಕ್ಕೆ ಒಳಗಾಗುವ ಪರಿಸ್ಥಿತಿ ನಮಗಾಗಿದೆ. ಅಧಿ ಕಾರಕ್ಕಾಗಿ ಎರಡು ವರ್ಷಗಳಂತೆ ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ. – ರವಿ ಜವಳಗಿ, ಪ್ರಹ್ಲಾದ ಸಣ್ಣಕ್ಕಿ, ಪುರಸಭೆ ಸದಸ್ಯರು.

 

-ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next