Advertisement

ಬಸ್‌ ನಿಲುಗಡೆ ಸಮಸ್ಯೆ-ಪರದಾಟ

03:47 PM Dec 08, 2019 | |

ಮಹಾಲಿಂಗಪುರ: ಪಟ್ಟಣದಲ್ಲಿ ನಿರ್ಮಿಸುತ್ತಿರುವ ನೂತನ ಬಸ್‌ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದೆ. ಆದರೆ, ಬಸ್‌ ನಿಲುಗಡೆಗೆ ಜಾಗ ಸಮಸ್ಯೆಯಾಗಿದೆ.

Advertisement

ನಿಲ್ದಾಣದ ಜಾಗ ಕಡಿಮೆ: ಮೂಲತ: ನಿಲ್ದಾಣದ ಜಾಗ ಕಡಿಮೆಯಿದೆ. ಅದರಲ್ಲಿಯೇ ನೂತನ ಕಟ್ಟಡ ನಿರ್ಮಾಣ, ಕಟ್ಟಡ ಸಾಮಗ್ರಿಗಳ ದಾಸ್ತಾನು, ಶೌಚಾಲಯ, ತಾತ್ಕಾಲಿಕ ನಿಯಂತ್ರಕರ ಕೊಠಡಿ, ಹಣ್ಣಿನ ಅಂಗಡಿಗಳು ಇರುವುದರಿಂದಾಗಿ ಬಸ್‌ಗಳು ಒಳಗೆ ಬಂದು, ಮರಳಿಸಿಕೊಳ್ಳಲು ತೊಂದರೆಯಾಗುತ್ತಿದೆ. ಹೆದ್ದಾರಿ ಮೇಲೆ ಬಸ್‌ ನಿಲುಗಡೆ: ನೂತನ ನಿಲ್ದಾಣ ಕಾಮಗಾರಿಯಿಂದಾಗಿ ನಿಲ್ದಾಣದೊಳಗೆ ಬಸ್‌ಗಳು ಹೋಗದೇ ನಿಲ್ದಾಣ ಪಕ್ಕದ ರಬಕವಿ-ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ಬಸ್‌ ನಿಲುಗಡೆ ಮಾಡುತ್ತಿದ್ದಾರೆ.

ಇದರಿಂದ ಬಸ್‌ಗಳನ್ನು ಮರಳಿಸಿ ತಮ್ಮ ದಾರಿಯತ್ತ ನಿಲ್ಲಿಸಲು ಚಾಲಕರು, ಯಾವ ಬಸ್‌ಗಳು ಎಲ್ಲಿಗೆ ಹೋಗುತ್ತವೆ, ಎಲ್ಲಿ ನಿಲ್ಲುತ್ತವೆ ಎಂಬ ಮಾಹಿತಿಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಟ್ರಾಫಿಕ್‌ ಸಮಸ್ಯೆ: ಹೆದ್ದಾರಿ ಮೇಲೆ ಬಸ್‌ ನಿಲುಗಡೆ ಮಾಡುತ್ತಿರುವುದು, ಕಾರ್ಖಾನೆಗಳು ಆರಂಭಗೊಂಡ ಹಿನ್ನೆಲೆ ಕಬ್ಬು ತುಂಬಿದ ಟ್ರಾಕ್ಟ್ರ್‌ಗಳ ಓಡಾಟ ಹೆಚ್ಚಳವಾಗಿದೆ. ಜತೆಗೆ ರಸ್ತೆಯ ಪೂರ್ವದಲ್ಲಿನ ರಿಕ್ಷಾ  ನಿಲ್ದಾಣ, ಪಶ್ಚಿಮ ಭಾಗದಲ್ಲಿನ ಅನಧಿಕೃತ ಚಹಾ ಹೊಟೇಲ್‌, ಪಾನಶಾಪ್‌ ಸೇರಿದಂತೆ ಅಂಗಡಿ ಮುಂಗ್ಗಟ್ಟುಗಳು ಅರ್ಧ ರಸ್ತೆಯನ್ನೇ ಅತಿಕ್ರಮಣ ಮಾಡಿವೆ.

ಇದರಿಂದಾಗಿ ಗೋಕುಲ್‌ ಹೋಟೆಲ್‌ ದಿಂದ ಚನ್ನಮ್ಮ ವೃತ್ತದವರೆಗೆ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿ ವಾಹನ ಸವಾರರು, ಪಾದಚಾರಿಗಳಿಗೆ ಕಿರಿಕಿರಿಯಾಗಿದೆ.

Advertisement

ತೆರವು ಮತ್ತು ಸ್ಥಳಾಂತರ ಸೂಕ್ತ!: ಕಾಮಗಾರಿ ಮುಗಿಯಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಈ ಸಮಸ್ಯೆ ತಪ್ಪಿದ್ದಲ್ಲ. ಕಾರಣ ಕಾಮಗಾರಿ ಮುಗಿಯುವರೆಗೆ ನಿಲ್ದಾಣದ ಎದುರಿನ ಎಲ್ಲ ಅಂಗಡಿ ಮುಂಗ್ಗಟ್ಟು ತೆರವುಗೊಳಿಸುವುದು ಮತ್ತು ರಿಕ್ಷಾ ನಿಲ್ದಾಣ ಸ್ಥಳಾಂತರಿಸಿ, ಬಸ್‌ ನಿಲುಗಡೆಗೆ ಅವಕಾಶ ನೀಡಿ, ಟ್ರಾಫಿಕ್‌ ಸಮಸ್ಯೆ ಕಡಿಮೆಗೊಳಿಸಿ ಎಂದು ಸಾರ್ವಜನಿಕರು-ಪ್ರಯಾಣಿಕರು ಪುರಸಭೆ, ಪೊಲೀಸ್‌ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪುರಸಭೆ ಖಾಲಿ ಜಾಗ ಬಳಸಲು ಒತ್ತಾಯ: ಬಸ್‌ ನಿಲ್ದಾಣ ಕಾಮಗಾರಿ ಆರಂಭವಾಗಿ ಬಸ್‌ ನಿಲುಗಡೆ ಮತ್ತು ಸಂಚಾರ ದಟ್ಟಣೆ ಹೆಚ್ಚಳವಾಗಿದೆ. ಬಸ್‌ ನಿಲ್ದಾಣದ ಪಕ್ಕದಲ್ಲಿನ ಪುರಸಭೆಯ ನಾಲ್ಕು ಎಕರೆ ಖಾಲಿ ಜಾಗ ತ್ಯಾಜ್ಯ ಘಟಕ, ಬಯಲು ಶೌಚಾಲಯ, ಖಾಸಗಿ ವಾಹನಗಳ ನಿಲುಗಡೆಯಾಗಿ ಗಬ್ಬೆದ್ದು ನಾರುತ್ತಿದೆ.

ಶಾಸಕ ಸಿದ್ದು ಸವದಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಗುತ್ತಿಗೆದಾರರು, ಪುರಸಭೆ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಚರ್ಚೆ ನಡೆಸಿ, ನಿಲ್ದಾಣದ ಕಾಮಗಾರಿ ಮುಗಿಯುವರೆಗೂ ಖಾಲಿ ಇರುವ ಪುರಸಭೆ ಜಾಗದಲ್ಲಿ ತಾತ್ಕಾಲಿಕ ಬಸ್‌ ನಿಲ್ದಾಣವನ್ನಾಗಿ ಬಳಸಬೇಕು. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣಗೊಳ್ಳಬಹುದು.

ಖಾಲಿ ಇರುವ ಪುರಸಭೆ ಜಾಗ ಬಳಸಿದರೆ ಜಾಗ ಸ್ವತ್ಛವಾಗುತ್ತದೆ. ಪ್ರಯಾಣಿಕರಿಗೆ ಅನುಕೂಲ ಮಾಡಬೇಕೆಂದು ತೇರದಾಳ ಜೆಡಿಎಸ್‌ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಕನ್ನಡಪರ ಸಂಘಟನೆಗಳ ಅಧ್ಯಕ್ಷ ಮೋಹಸಿನ ಅತ್ತಾರ, ಅಸ್ಲಂ ಕೌಜಲಗಿ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸೋಮಶೇಖರ ಸಂಶಿ, ಹೋರಾಟಗಾರರಾದ ಸುರೇಶ ಮಡಿವಾಳರ, ವಿನೋದ ಸಿಂಪಿ, ವೀರೇಶ ನ್ಯಾಮಗೌಡ, ಮಂಜು ಬಕರೆ ಒತ್ತಾಯಿಸಿದ್ದಾರೆ.

ಬಸ್‌ ನಿಲ್ದಾಣದಲ್ಲಿ ಕಾಮಗಾರಿ ಮುಗಿಯುವರೆಗೂ ತಾತ್ಕಾಲಿಕ ಬಸ್‌ ನಿಲುಗಡೆಗಾಗಿ ಪುರಸಭೆಯ ಖಾಲಿ ಜಾಗ ಬಳಸಿಕೊಳ್ಳಲು ಏನು ತೊಂದರೆಯಿಲ್ಲ. ಆದರೆ ಅಲ್ಲಿನ ಗಿಡಗಂಟಿ ತೆರವು ಮತ್ತು ತಾಜ್ಯ ನೀರು ನಿಂತ ಕಾರಣ ಮರಳು ಹಾಕಬೇಕು. ಈ ಕುರಿತು ಪುರಸಭೆ ಆಡಳಿತಾ ಧಿಕಾರಿಗಳು ಮತ್ತು ಶಾಸಕರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ.
ಬಾಬುರಾವ್‌ ಕಮತಗಿ,
ಮುಖ್ಯಾಧಿಕಾರಿಗಳು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next