ಮಹಾಲಿಂಗಪುರ: ಪಟ್ಟಣದ ಅಷ್ಟಗಿ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ದಿ.ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಹಾಗೂ ನಾಡಿನ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಕುರಿತು ಸಾಮಾಜಿಕ ಸಂದೇಶಯುಳ್ಳ ಗಂಧದಗುಡಿ ಚಿತ್ರವನ್ನು ಪಟ್ಟಣದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಾಗಿ ನೋಡಲಿ ಎಂಬ ಉದ್ದೇಶದಿಂದ ಮಹಾಲಿಂಗಪುರ ಪುರಸಭೆ ಮಾಜಿ ಅಧ್ಯಕ್ಷರು, ಪುನೀತ್ ರಾಜ್‍ಕುಮಾರ್ ಅಪ್ಪಟ ಅಭಿಮಾನಿಯಾದ ಬಸವರಾಜ ದುಂಡಪ್ಪ ರಾಯರ ಅವರು ನವೆಂಬರ್ 14 ರಿಂದ 17 ನೇ ತಾರೀಖಿನವರೆಗೆ ನಾಲ್ಕು ದಿನಗಳ ಕಾಲ ಉಚಿತ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ.
ಪ್ರತಿದಿನ ಮಧ್ಯಾಹ್ನ 12 ಮತ್ತು 3ರ ಪ್ರದರ್ಶನಗಳು ವಿದ್ಯಾರ್ಥಿಗಳಿಗೆ, ಸಂಜೆ 6 ಮತ್ತು ರಾತ್ರಿ 9ರ ಪ್ರದರ್ಶನಗಳಲ್ಲಿ ಮಹಿಳೆಯರು ಮತ್ತು ಸಾರ್ವಜನಿಕರಿಗೆ ಅವಕಾಶವಿದೆ. ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಮೊದಲ ಆದ್ಯತೆ ಇದೆ. ಮಹಾಲಿಂಗಪುರ ಪಟ್ಟಣದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರು ಚಿತ್ರವನ್ನು ವೀಕ್ಷಿಸಬೇಕೆಂದು ಚಿತ್ರ ಪ್ರದರ್ಶಕರಾದ ಈರಪ್ಪ ಜಾನಕೂನವರ, ವಿನೋದ(ಪಪ್ಪು) ಹುರಕಡ್ಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಬಸವರಾಜ ರಾಯರ ಅವರು ದಿ. ಪುನೀತ್ ರಾಜ್‍ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಸಿನಿಮಾ ನಟನೆಯ ಜೊತೆಗೆ ತೆರೆಮರೆಯಲ್ಲಿ ಮಾಡಿದ ಸಾವಿರಾರು ಸಾಮಾಜಿಕ ಕೆಲಸಗಳ ಮೂಲಕ, ಅವರ ಸಾವಿನ ನಂತರವೂ ನಾಡಿನ ಕೋಟ್ಯಾಂತರ ಅಭಿಮಾನಿಗಳ ಹೃದಯ, ಮನೆ, ಮನಗಳಲ್ಲಿ ಜೀವಂತವಾಗಿದ್ದಾರೆ. ಅವರು ಅಗಲಿ ವರ್ಷ ಕಳೆದರೂ ಅವರ ನೆನಪು ನಿತ್ಯ ನಮ್ಮೆಲ್ಲರನ್ನು ಕಾಡುತ್ತಿದೆ. ಅವರ ಕೊನೆಯ ಚಿತ್ರ ಹಾಗೂ ನಮ್ಮ ನಾಡಿನ ಅರಣ್ಯ ಸಂಪತ್ತು,ಪ್ರಾಣಿ, ಪಕ್ಷಿ, ಪರಿಸರ ರಕ್ಷಣೆಯ ಕುರಿತಾದ ಗಂಧದ ಗುಡಿ ಚಿತ್ರವನ್ನು ಶಾಲಾ ಮಕ್ಕಳು ಮತ್ತು ಮಹಿಳೆಯರು ಹೆಚ್ಚಾಗಿ ನೋಡಲು ಎಂಬ ಉದ್ದೇಶದಿಂದ ನ.14 ರಿಂದ ನ.17 ವರೆಗೆ ಉಚಿತ ಪ್ರದರ್ಶನ ಏರ್ಪಡಿಸಿದ್ದೇವೆ. ಮಹಾಲಿಂಗಪುರ ಪಟ್ಟಣದ ಎಲ್ಲಾ ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರು ಗಂಧದ ಗುಡಿ ಚಿತ್ರವನ್ನು ನೋಡಿ, ಪರಿಸರ ರಕ್ಷಣೆಯ ಪಣ ತೋಡಿರಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಇದನ್ನೂ ಓದಿ : ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಜನನಿಬಿಡ ಪ್ರದೇಶದಲ್ಲಿ ಭಾರಿ ಸ್ಫೋಟ: ಹಲವರಿಗೆ ಗಾಯ