Advertisement

ಕಾನೂನು ಸಮರದಲ್ಲಿ ಸದಸ್ಯತ್ವ ಉಳಿಸಿಕೊಂಡ ಮಹಾಲಿಂಗಪುರ ಪುರಸಭೆ 3 ಸದಸ್ಯೆಯರು

04:18 PM Dec 23, 2022 | Team Udayavani |

ಮಹಾಲಿಂಗಪುರ: ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿಗಳಿಂದ ಎರಡು ಬಾರಿ ಸದಸ್ಯತ್ವ ರದ್ದಾಗಿದ್ದರು ಸಹ, ಒಂದು ಬಾರಿ ತಡೆಯಾಜ್ಞೆ ತಂದು ಎರಡು ವರ್ಷಗಳ ಕಾನೂನು ಸಮರ ನಡೆಸಿದ್ದ ಪುರಸಭೆಯ ಮೂವರು ಮಹಿಳಾ ಸದಸ್ಯೆಯರ ವಿಫ್ ಉಲ್ಲಂಘನೆ ಪ್ರಕರಣದಲ್ಲಿ ಇದೆ ಡಿ.17 ರಂದು ಧಾರವಾಡ ಹೈಕೋರ್ಟ್ ನ ಏಕ ಸದಸ್ಯ ಪೀಠವು ವಿಫ್ ಉಲ್ಲಂಘನೆ ಮತ್ತು ಸದಸ್ಯತ್ವ ರದ್ದು ಪ್ರಕರಣಗಳಲ್ಲಿ ಇಡಿ ರಾಜ್ಯಕ್ಕೆ ಮಾದರಿಯಾದ ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿದೆ.

Advertisement

2020 ನವೆಂಬರ್ 9 ರಂದು ನಡೆದ ಸ್ಥಳೀಯ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ವೇಳೆ ತೇರದಾಳ ಶಾಸಕ ಸಿದ್ದು ಸವದಿಯವರು ಮಹಿಳಾ ಸದಸ್ಯೆಯರನ್ನು ಎಳೆದಾಡಿದ ಘಟನೆಯು ಅಂದು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು.

ಈ ಮೂಲಕ ಮಹಾಲಿಂಗಪುರ ಪುರಸಭೆಯ ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಗೋದಾವರಿ ಬಾಟ ಸೇರಿ ಮೂವರು ಸದಸ್ಯೆಯರು ವಿಪ್ ಉಲ್ಲಂಘನೆ ಆರೋಪದಡಿಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿಗಳಿಂದ ಎರಡು ಬಾರಿ ಸದಸ್ಯತ್ವದಿಂದ ಅನರ್ಹವಾಗಿಯೂ ಸಹ, ಕಾನೂನು ಹೋರಾಟದ ಮೂಲಕ ಸದಸ್ಯತ್ವದ ಮಾನ್ಯತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2020 ನವೆಂಬರ 9 ರಂದು ಜರುಗಿದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿದ್ದಾರೆಂಬ ಆರೋಪದಡಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ನೀಡಿದ್ದ ದೂರಿನ ವಿಚಾರಣೆ ನಡೆಸಿದ ಬಾಗಲಕೋಟೆ ಜಿಲ್ಲಾಧಿಕಾರಿಗಳು ಮಹಾಲಿಂಗಪುರ ಪುರಸಭೆಯ ಮೂವರು ಮಹಿಳಾ ಸದಸ್ಯೆಯರಾದ ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಗೋದಾವರಿ ಬಾಟ ಅವರ ಸದಸ್ಯತ್ವವನ್ನು ರದ್ದುಗೊಳಿಸಿ 2021 ಏಪ್ರಿಲ್ 8 ರಂದು ಆದೇಶ ಹೊರಡಿಸಿದ್ದರು.

ನಂತರ ಮೂವರು ಮಹಿಳಾ ಸದಸ್ಯೆಯರು ನಾವು ವಿಫ್ ಉಲ್ಲಂಘಿಸಿಲ್ಲ ಹಾಗೂ ಜಿಲ್ಲಾಧಿಕಾರಿಗಳ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. 3 ಅಗಷ್ಟ್ 2021 ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣಕುಮಾರ ಅವರಿದ್ದ ನ್ಯಾಯಪೀಠವು, ವಿಪ್ ಉಲ್ಲಂಘನೆ ಆರೋಪದಡಿ ಮಹಾಲಿಂಗಪುರ ಪುರಸಭೆಯ ಮೂವರು ಮಹಿಳಾ ಸದಸ್ಯೆಯರ ಸದಸ್ಯತ್ವ ರದ್ದುಗೊಳಿಸಿರುವ ಜಿಲಾಧಿಕಾರಿಗಳ ಆದೇಶವನ್ನು ಅನೂರ್ಜಿತಗೊಳಿಸಿ, ಸದಸ್ಯತ್ವ ರದ್ದುಗೊಳಿಸಿದ ಜಿಲ್ಲಾಧಿಕಾರಿಗಳ ಕ್ರಮ ಸರಿಯಲ್ಲ, ಪ್ರಕರಣದ ಮರುವಿಚಾರಣೆ ಅಗತ್ಯವಿದೆ ಆದೇಶಿಸಿತ್ತು. ಈ ಮೂಲಕ ಕಾನೂನು ಹೋರಾಟದಲ್ಲಿ ಪ್ರಥಮ ಬಾರಿಗೆ ಮೂರು ಮಹಿಳಾ ಸದಸ್ಯೆಯರು ತಮ್ಮ ಸದಸ್ಯತ್ವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Advertisement

ದ್ವಿತೀಯ ಬಾರಿಗೆ ಅನರ್ಹ
ಪ್ರಕರಣದ ಮರುವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಪ್ರಸ್ತುತ ನಡುವಳಿಕೆಯು ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ 4 ರಡಿ ಸಲ್ಲಿಸಿದ ದೂರಿಗೆ ಸಂಬಂಸಿದ್ದು ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು ಪಕ್ಷಾಂತರ ನಿಷೇದ ಕಾಯ್ದೆಯಡಿ ಪಕ್ಷಾಂತರ ಆಧಾರದ ಅನರ್ಹತೆ ಉಪಬಂಧವನ್ನು ಆಕರ್ಷಿಸುತ್ತಾರೆ ಎಂದು ದೂರುದಾರರಾದ ಅರ್ಜಿದಾರರು ನಿರೂಪಿಸಿದ್ದಾರೆ. ಹೀಗಾಗಿ ಈ ಮೂವರು ಮಹಿಳಾ ಸದಸ್ಯೆಯರು ಅವರಿಗೆ ಅಧಿಕೃತವಾಗಿ ನೀಡಿದ ವಿಪ್‌ನ್ನು ಉಲ್ಲಂಘಿಸಿದ್ದಾರೆಂದು ತೀರ್ಮಾನಿಸಿ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆಯೆಂದು ಅಂದಿನ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು 2021 ಅಗಷ್ಟ್ 28 ರಂದು ದ್ವಿತೀಯ ಬಾರಿಗೆ ಮೂವರು ಮಹಿಳಾ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದರು. ಎರಡನೇ ಬಾರಿಗೆ ಅನರ್ಹವಾದರೂ ಹಿಂಜರಿಯದ ಸದಸ್ಯೆಯರು ಮತ್ತೇ ಧಾರವಾಡ ಹೈಕೋರ್ಟ ಕದತಟ್ಟಿದ್ದರು.

ತಡೆಯಾಜ್ಞೆ ತಂದಿದ್ದ ಸದಸ್ಯೆಯರು
ಪ್ರಕರಣದ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್  ನ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ನ್ಯಾಯಪೀಠವು ಕಳೆದ ವರ್ಷ 2021 ಡಿ.9ರಂದು ಮೂವರು ಮಹಿಳಾ ಸದಸ್ಯೆಯರ ಅನರ್ಹತೆ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ನೀಡಿತ್ತು. ಆ ಮೂಲಕ ಜಿಲ್ಲಾಧಿಕಾರಿಗಳಿಂದ ಎರಡು ಬಾರಿ ಅನರ್ಹವಾದರೂ ಸಹ ಕಾನೂನು ಹೋರಾಟ ಮೂಲಕ ದ್ವಿತೀಯ ಬಾರಿಗೆ ತಮ್ಮ ಸದಸ್ಯತ್ವವನ್ನು ಉಳಿಸಿಕೊಳ್ಳುವಲ್ಲಿ ಮೂವರು ಸದಸ್ಯೆಯರು ಜಯಶಾಲಿಯಾಗಿದ್ದರು.

ಅಂತಿಮ ತೀರ್ಪಿನಲ್ಲಿಯೂ ಜಯ

ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟನ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ನ್ಯಾಯಪೀಠವು ಬಿಜೆಪಿ ಅರ್ಜಿದಾರರಿಗೆ ನೀಡಿದ ವಿಪ್ ಅನ್ನು 1987ರ ಮುನ್ಸಿಪಲ್ ಕಾಯಿದೆಯ ನಿಯಮಗಳ ಅಡಿಯಲ್ಲಿ ಕಾನೂನು ರೀತಿ ವಿಪ್ ನೀಡದ ಕಾರಣ, ಹೈಕೋರ್ಟ ಅಂತಿಮ ತೀರ್ಪಿನಲ್ಲಿಯೂ ಮೂವರು ಮಹಿಳಾ ಸದಸ್ಯೆಯರು ಜಯಶಾಲಿಯಾಗಿ ಬಿಜೆಪಿ ಜಿಲ್ಲಾಧ್ಯಕ್ಷರು ನೀಡಿದ್ದ ದೂರು ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳು ನೀಡಿದ್ದ ಸದಸ್ಯತ್ವ ಆದೇಶದ ವಿರುದ್ಧ ಕಾನೂನು ಸಮರದಲ್ಲಿ ಗೆದ್ದು ಬೀಗಿದಲ್ಲದೇ, ಸದರಿ ಪ್ರಕರಣದ ಆದೇಶವು ವಿಪ್ ಉಲ್ಲಂಘನೆ-ಸದಸ್ಯತ್ವ ರದ್ದತಿ ಪ್ರಕರಣಗಳಲ್ಲಿ ಇಡಿ ರಾಜ್ಯಕ್ಕೆ ಮಾರ್ಗದರ್ಶನ ಆಗುವಂತಹ ಮಹತ್ವದ ಪ್ರಕರಣದ ತೀರ್ಪು ಇದಾಗಿದ್ದು ವಿಶೇಷ. ಸದರಿ ಪ್ರಕರಣದಲ್ಲಿ ರಾಜಕೀಯ ಪಕ್ಷದ ಪರ ಎಸ್.ಎ.ಪಶ್ಛಾಪೂರೆ ವಾದ ಮಂಡಿಸಿದ್ದರು.

ಉಳಿದ ಪ್ರಕರಣಗಳಿಗೆ ಹೊಸ ತಿರುವು? 

2020 ನವೆಂಬರ್ 9ರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಗಲಾಟೆ ಪ್ರಕರಣಗಳು ಬಾಗಲಕೋಟೆ ಜಿಲ್ಲಾ ನ್ಯಾಯಾಲಯ, ಬೆಂಗಳೂರು ಸಿಆಯ್‌ಡಿಯಲ್ಲಿಯೂ ವಿಚಾರಣೆ ಹಂತದಲ್ಲಿ ಇವೆ. ಸಿಆಯ್‌ಡಿ ಪ್ರಕರಣದಲ್ಲಿ ಪರಸ್ಪರ ಎರಡು ಪಕ್ಷಗಳ ತಲಾ 35 ಕ್ಕೂ ಅಧಿಕ ಜನರನ್ನು ಎರಡೆರಡು ಬಾರಿ ವಿಚಾರಣೆ ನಡೆಸಲಾಗಿದೆ. ಕೆಲವರು ಜಾಮೀನು ಪಡೆದುಕೊಂಡಿದ್ದಾರೆ. ಆದರೆ ಪ್ರಕರಣಗಳು ಇನ್ನು ವಿಚಾರಣೆ ಹಂತದಲ್ಲಿವೆ. ಅದಕ್ಕಾಗಿ ಧಾರವಾಡ ಹೈಕೋರ್ಟನಲ್ಲಿನ ವಿಫ್ ಉಲ್ಲಂಘನೆ ಪ್ರಕರಣದ ತೀರ್ಪು ಮೂವರು ಸದಸ್ಯೆಯರ ಪರವಾಗಿ ಬಂದಿರುವ ಕಾರಣ, ಉಳಿದ ಪ್ರಕರಣಗಳಿಗೆ ಮತ್ತೇ ಹೊಸ ತಿರವು ಪಡೆಯುವ ಸಾಧ್ಯತೆಗಳು ದಟ್ಟವಾಗಿವೆ.

ಹಲವರಿಗೆ ನಿರಾಶೆ
ಈ ಪ್ರಕರಣದಲ್ಲಿ ಮೂವರು ಮಹಿಳಾ ಸದಸ್ಯೆಯರ ಸದಸ್ಯತ್ವ ರದ್ದಾಗಿ ಉಪಚುನಾವಣೆಯು ನಡೆಯುವದು ಶತಸಿದ್ದ ಎಂಬ ವಿಶ್ವಾಸದೊಂದಿಗೆ ಮೂರು ವಾರ್ಡಗಳಲ್ಲಿ ಉಪಚುನಾವಣೆಯ ಸಿದ್ದತೆಯಲ್ಲಿ ತೊಡಗಿದ್ದ ಬಿಜೆಪಿ ಪಕ್ಷದ ಆಕಾಂಕ್ಷಿತರಿಗೆ ನಿರಾಶೆಯಾಗಿದೆ. ಸದರಿ ಪ್ರಕರಣದ ಕಾನೂನು ಹೋರಾಟದಲ್ಲಿ ಬಿಜೆಪಿ ಪಕ್ಷ ಮತ್ತು ಶಾಸಕ ಸಿದ್ದು ಸವದಿಯವರಿಗೆ ಹಿನ್ನಡೆಯಾಗಿದೆ.

ಕಳೆದ ಎರಡು ವರ್ಷಗಳಿಂದ ಗಲಾಟೆ, ಕೋರ್ಟ್ ಕೇಸ್, ಸಿಐಡಿ ಕೇಸ್ ಗಳಿಂದಾಗಿ ಬಾಗಲಕೋಟೆ, ಧಾರವಾಡ, ಬೆಂಗಳೂರಿಗೆ ಅಲೆದಾಡುತ್ತಾ, ತಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆ ಎಂಬ ಚಿಂತೆ ಮತ್ತು ಗೊಂದಲದಲ್ಲಿದ್ದ ಮೂವರು ಮಹಿಳಾ ಸದಸ್ಯೆಯರು ಈಗ ಕಾನೂನು ಸಮರದಲ್ಲಿ ಗೆದ್ದು, ಮತ್ತೆ ತಮ್ಮ ತಮ್ಮ ವಾರ್ಡ್ ಗಳಲ್ಲಿನ ಸಾರ್ವಜನಿಕ ಕೆಲಸಗಳಿಗೆ ಅಣಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next