ಉದಯವಾಣಿ ಸಮಾಚಾರ
ಮಹಾಲಿಂಗಪುರ: ಪಟ್ಟಣದ ಜಯಲಕ್ಷ್ಮೀನಗರದ ಕವಿತಾ ಬಾಡನವರ ಮನೆಯಲ್ಲಿ ನಡೆದ ಭ್ರೂಣಹತ್ಯೆ (ಗರ್ಭಪಾತ)ಪ್ರಕರಣ ಜಿಲ್ಲೆಯನ್ನೇ ತಲ್ಲಣಗೊಳಿಸಿದೆ. ಪ್ರಮುಖ ಆರೋಪಿ ಕವಿತಾ ಬಾಡನವರ ಅವರ ಮೊಬೈಲ್ ಪರಿಶೀಲನೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದು ಬಂದಿದ್ದು, ಯಾವ ಪ್ರಭಾವಿಗಳ ನೆರಳಿನಲ್ಲಿ ಈ ದಂಧೆ ನಡೆಸುತ್ತಿದ್ದರು ಎಂಬ ಸಂಪೂರ್ಣ ಮಾಹಿತಿ ತಿಳಿದು ಬರಲಿದೆ.
ಅವರ ಮೊಬೈಲ್ ಕರೆಗಳು, ವಾಟ್ಸ್‌ಆ್ಯಪ್ ಸಂದೇಶಗಳು, ಪೋನ್ ಪೇ ಮತ್ತು ಗೂಗಲ್ ಪೇ ಹಿಸ್ಟರಿಯನ್ನು ಪರಿಶೀಲಿಸಿದರೆ ದೊಡ್ಡ ದೊಡ್ಡ ಕುಳಗಳು ಬಲೆಗೆ ಬೀಳಲಿವೆ ಎನ್ನಲಾಗುತ್ತಿದೆ.
ಆರೋಪಿ ಬ್ಯಾಂಕ್ ಖಾತೆಗಳ ಫ್ರೀಜ್: ಆರೋಪಿ ಕವಿತಾ ಬಾಡನವರ ಅವರ ವಿಚಾರಣೆ ವೇಳೆ ಅವರ ಹೆಸರಿನಲ್ಲಿ ಐದು ಬ್ಯಾಂಕ್ ಖಾತೆಗಳಿರುವ ವಿಷಯ ತಿಳಿದು ಬಂದಿದೆ. ಕೆನರಾ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಮಗನ ಖಾತೆ ಜತೆಗೆ ಜಂಟಿ ಖಾತೆ ಹೊಂದಿದ ಕೆನರಾ ಬ್ಯಾಂಕ್, ಬಸವೇಶ್ವರ ಸಹಕಾರಿ ಬ್ಯಾಂಕ್ ಸೇರಿ ಐದು ಖಾತೆಗಳನ್ನು ಫ್ರೀಜ್ ಮಾಡಲು ಪೊಲೀಸರು ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ನೀಡಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.
ಹಣದ ವ್ಯವಹಾರ?: ಭ್ರೂಣಹತ್ಯೆ ಪ್ರಕರಣದ ಆರೋಪಿ ಕವಿತಾ ಹಿರಿಯ ಅಧಿಕಾರಿ ಜತೆಗೆ ಹಣದ ವ್ಯವಹಾರ ಮಾಡಿದ ಆರೋಪ ಕೇಳಿ ಬಂದಿದೆ. ಹಣ ಯಾಕೆ ವರ್ಗಾವಣೆಯಾಗಿದೆ ಎಂಬುದರ ಕುರಿತು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಆ ಅಧಿಕಾರಿ ಸಿಕ್ಕಿ ಬಿದ್ದರೆ ಪ್ರಕರಣ ಮತ್ತೂಂದು ಸ್ವರೂಪ ಪಡೆಯಲಿದೆ ಎನ್ನಲಾಗಿದೆ.
ಮೃತ ಸೋನಾಲಿ ಭ್ರೂಣಹತ್ಯೆಗೆ 40 ಸಾವಿರ: ಪ್ರಕರಣದ ಹೆಚ್ಚಿನ ತನಿಖೆಗೆ ಬನಹಟ್ಟಿ ಸಿಪಿಐ ಸಂಜೀವ ಬಳಗಾರ ನೇತೃತ್ವದಲ್ಲಿ ನಾಲ್ಕು ಜನರ ಪೊಲೀಸ್ ತಂಡ ನೇಮಕಗೊಳಿಸಲಾಗಿದೆ. ರವಿವಾರ ಕವಿತಾಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಆಕೆಯ ಸಮೇತ ಮನೆಯ ಸ್ಥಳವನ್ನು ಪೊಲೀಸರು ಮಹಜರು ಮಾಡಿ ಠಾಣೆಯಲ್ಲಿ ನಡೆಸಿದ ವಿಚಾರಣೆ ವೇಳೆ ವಾಟ್ಸ್‌ಆ್ಯಪ್ ಮೂಲಕವೇ ಗರ್ಭಪಾತ ದಂಧೆಯ ಮಾತುಕತೆ ನಡೆಸುತ್ತಿದ್ದ ಕವಿತಾ, ಸೋನಾಲಿ ಕದಂ ಪ್ರಕರಣದಲ್ಲಿ 40 ಸಾವಿರ ಹಣ ಪಡೆದಿದ್ದಾರೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.
ಆರೋಪಿ ಮೊಬೈಲ್ ವಶಕ್ಕೆ ಪಡೆದು ವಿಚಾರಣೆಗಾಗಿ ಮೊಬೈಲ್‌ನ್ನು ಪೊರೆನ್ಸಿಕ್ ಲ್ಯಾಬ್(ಎಫ್ ಎಸ್‌ಎಲ್)ಗೆ ಕಳಿಸಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ಅವರುಗಳ ಬ್ಯಾಂಕ್ ಖಾತೆ, ಫೋನ್ ಪೇ, ಗೂಗಲ್ ಪೇ, ಮೊಬೈಲ್ ಕರೆಗಳು ಸೇರಿದಂತೆ ಎಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಖಚಿತ. ಅಮರನಾಥ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಾಗಲಕೋಟೆ.
*ಚಂದ್ರಶೇಖರ ಮೋರೆ