Advertisement

ವೈದ್ಯರ ಕಿತ್ತಾಟ… 30 ಬೆಡ್ ಗಳ ಸರ್ಕಾರಿ ಆಸ್ಪತ್ರೆಯಲ್ಲಿ ಇರುವುದು ಮೂರೇ ರೋಗಿಗಳು

09:25 PM Mar 12, 2024 | Team Udayavani |

ಮಹಾಲಿಂಗಪುರ: ಬಡರೋಗಿಗಳಿಗಾಗಿ ಇರುವ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿನ ಮುಖ್ಯವೈದ್ಯಾಧಿಕಾರಿ ಸಿ.ಎಂ.ವಜ್ಜರಮಟ್ಟಿ, ವೈದ್ಯರಾದ ಅಭಿನಂದನ ಡೋರ್ಲೇ, ಡಾ.ಸಂಜಯಕುಮಾರ ತೇಲಿ ಅವರ ನಡುವಿನ ಕಿತ್ತಾಟದಿಂದಾಗಿ ಇಂದು 30 ಹಾಸಿಗೆಯ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 3 ರೋಗಿಗಳು ಮಾತ್ರ ಇದ್ದಾರೆ ಎಂದರೆ ಆಸತ್ರೆಯಲ್ಲಿನ ಅವ್ಯವಸ್ಥೆಯು ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ನೀವೇ ಊಹಿಸಿರಿ!

Advertisement

ಶಾಸಕರ ದಿಢೀರ ಭೇಟಿ :
ಆಸ್ಪತ್ರೆಯಲ್ಲಿನ ವೈದ್ಯರ ಪ್ರತಿಷ್ಠೆಯ ಕಿತ್ತಾಟದಿಂದ ಬಡರೋಗಿಗಳಿಗೆ ತೊಂದರೆಯಾಗಿ, ಸಾರ್ವಜನಿಕ ದೂರುಬಂದ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಏಕಾಏಕಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಸಿದ್ದು ಸವದಿಯವರು ವೈದ್ಯರ ದಿನಚರಿ ಮತ್ತು ರೋಗಿಗಳ ತಪಾಸಣೆ, ಶಸ್ತ್ರಚಿಕಿತ್ಸೆಯ ಮಾಹಿತಿ ಪಡೆದುಕೊಂಡು ವೈದ್ಯರ ನಡುವಿನ ಕಿತ್ತಾಟವನ್ನು ಇಲ್ಲಿಗೆ ನಿಲ್ಲಿಸಿ, ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ನಂಬಿ ಬರುವ ಬಡವರಿಗೆ ಸೇವೆ ಮಾಡರಿ. ವೈದ್ಯರು ಸರಿಯಾಗಿ ಕೆಲಸ ಮಾಡರಿ ಎಂದರು.

ಮುಖ್ಯವೈದ್ಯರ ಮೇಲೆ ಆರೋಪಗಳ ಸರಮಾಲೆ :
ಸ್ತ್ರೀರೋಗ ತಜ್ಞ ಡಾ.ಅಭಿನಂದನ ಡೋರ್ಲೆ ಹಾಗೂ ವೈದ್ಯ ಸಂಜೀವಕುಮಾರ ತೇಲಿ ಅವರು ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡುತ್ತಿದ್ದೇವೆ. ಮುಖ್ಯವೈದ್ಯರಾದ ಸಿ.ಎಂ.ವಜ್ಜರಮಟ್ಟಿಯವರು ಆಸ್ಪತ್ರೆಗೆ ರೋಗಿಗಳು ಬರುವ ಮುನ್ನವೇ ಕಾಲ ಮಾಡುವದು, ಖಾಸಗಿ ವ್ಯಕ್ತಿಗಳ ಕಡೆಯಿಂದ ಕಾಲ ಮಾಡಿಸಿ ತೊಂದರೆ ಕೊಡುವದು, ಆಶಾ ಕಾರ್ಯಕರ್ತೆಯರನ್ನು ಎತ್ತಿಕಟ್ಟಿ ಜಗಳ ಮಾಡಲು ಪ್ರೇರೇಪಿಸುತ್ತಿದ್ದಾರೆ. ಆಸ್ಪತ್ರೆಯ ಸಂಪೂರ್ಣ ಜವಾಬ್ದಾರಿ ಇರುವ ವೈದ್ಯರು ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಕೇವಲ ಒಬ್ಬ ವೈದ್ಯರಿಂದ ಆಸ್ಪತ್ರೆ ತುಂಬಲು ಸಾಧ್ಯವಿಲ್ಲ. ಎಲ್ಲಾ ವೈದ್ಯರು ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಮಾತ್ರ ಆಸ್ಪತ್ರೆಗೆ ರೋಗಿಗಳು ಬರಲು ಸಾಧ್ಯ ಎಂದು ಶಾಸಕರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಆಸ್ಪತ್ರೆಯಲ್ಲಿ ರಾಜಕೀಯ ಬೇಡ :
ಮೂವರು ವೈದ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತು ಆಂತರಿಕ ಕಿತ್ತಾಟ, ಹೊಂದಾಣಿಕೆಯ ಕೊರತೆಯನ್ನು ಕಣ್ಣಾರೆ ಕಂಡ ಶಾಸಕರು ಸರ್ಕಾರಿ ಆಸ್ಪತ್ರೆಯನ್ನು ನಂಬಿಕೊಂಡು ಬಡರೋಗಿಗಳು ಬರುತ್ತಾರೆ. ನಿಮ್ಮ ನಡುವಿನ ವೈಮನಸ್ಸು ಬಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಿ. ಬಡವರಿಗಾಗಿ ಸರ್ಕಾರ ಲಕ್ಷಾಂತರ ಖರ್ಚು ಮಾಡುತ್ತಿದೆ. ನಾಲ್ವರು ವೈದ್ಯರು, 10 ನರ್ಸ, ಸಿಬ್ಬಂದಿ ಸೇರಿ 30 ಜನರು ಕೆಲಸ ಮಾಡುವ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 3 ರೋಗಿಗಳು ಮಾತ್ರ ಇದ್ದಾರೆ ಎಂದರೆ ಏನು ಅರ್ಥ?

ರಾಜಕೀಯ ಮಾಡುವದಿದ್ದರೆ ನೌಕರಿಗೆ ರಾಜೀನಾಮೆ ನೀಡಿ ರಾಜಕೀಯ ಮಾಡರಿ. ಆದರೆ ಬಡವರ ಸರ್ಕಾರಿ ಆಸ್ಪತ್ರೆಯಲ್ಲಿ ರಾಜಕೀಯ ಮಾಡಿ ಬಡರೋಗಿಗಳಿಗೆ ಅನ್ಯಾಯ ಮಾಡಬೇಡಿ. ಸರಿಯಾಗಿ ಕರ್ತವ್ಯ ನಿರ್ವಹಿಸಿ, ಆಸ್ಪತ್ರೆಗೆ ರೋಗಿಗಳು ಬರುವಂತೆ ಕೆಲಸ ಮಾಡರಿ, ಇಲ್ಲವೇ ವರ್ಗಾವಣೆ ಪಡೆದುಕೊಂಡು ಬೇರೆಕಡೆ ಹೋಗಿ ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ವೈದ್ಯರೊಂದಿಗೆ ಅಸಭ್ಯವಾಗಿ ವರ್ತಿಸುವ ಮತ್ತು ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಬರದ ಆಶಾ ಕಾರ್ಯಕರ್ತೆಯರ ಹೆಸರು ಕೊಡಿ ಎಂದರು.

Advertisement

ಲಕ್ಷಾಂತರ ಸಂಬಳ ವ್ಯರ್ಥ :
ಮುಖ್ಯವೈದ್ಯಾಧಿಕಾರಿ ಸಿ.ಎಂ.ವಜ್ಜರಮಟ್ಟಿ ಅವರಿಗೆ 1.53 ಲಕ್ಷ, ಡಾ.ಸಂಜೀವಕುಮಾರ ತೇಲಿ ಅವರಿಗೆ 1.24ಲಕ್ಷ, ಡಾ.ಅಭಿನಂದನ ಡೋರ್ಲೆ ಅವರಿಗೆ 1.17ಲಕ್ಷ ಸಂಬಳವಿದೆ. ನರ್ಸ ಮತ್ತು ಸಿಬ್ಬಂದಿ ಸೇರಿ 30 ನೌಕರರ ಸಂಬಳ, ಔಷಧಾಲಯದ ಖರ್ಚು ಸೇರಿ ತಿಂಗಳಿಗೆ ಕನಿಷ್ಠ 10 ಲಕ್ಷ ರೂಗಳನ್ನು ಸರ್ಕಾರ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಗೆ ಖರ್ಚು ಮಾಡುತ್ತಿದ್ದರು ಸಹ, ವೈದ್ಯರ ನಡುವಿನ ಕಿತ್ತಾಟ, ಹೊಂದಾಣಿಕೆ ಕೊರತೆ, ರಾಜಕೀಯ ವ್ಯಕ್ತಿಗಳ ಪ್ರಭಾವದಿಂದಾಗಿ ಆಸ್ಪತ್ರೆಗೆ ಬರುವ ವೈದ್ಯರಿಗೆ ಮಾತ್ರ ಉತ್ತಮವಾದ ಚಿಕಿತ್ಸೆ ಸಿಗುತ್ತಿಲ್ಲ ಹಾಗೂ ರೋಗಿಗಳು ಸಂಖ್ಯೆಯು ಇಳಿಮುಖವಾಗುತ್ತಿದೆ ಎನ್ನುವದು ವಿಷಾದನೀಯ ಸಂಗತಿಯಾಗಿದೆ.

ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಸಿ.ಎಂ.ವಜ್ಜರಮಟ್ಟಿಯವರು ಮಕ್ಕಳ ತಜ್ಞರು, ಆಸ್ಪತ್ರೆಯಲ್ಲಿ ಒಂದು ಮಗು ಚಿಕಿತ್ಸೆಗೆ ದಾಖಲಾಗಿಲ್ಲ. ಜೊತೆಗೆ ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ, ಇತರ ವೈದ್ಯರುಗಳ ಜೊತೆಗೆ ಹೊಂದಾಣಿಕೆಯ ಕೊರತೆಯಿಂದಾಗಿಯೇ ಇಂದು ಆಸ್ಪತ್ರೆಯ ಸ್ಥಿತಿಯು ಈ ಹಂತಕ್ಕೆ ತಲುಪಿದೆ. ಜಿಲ್ಲಾ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿನ ಸ್ಥಿತಿಗತಿಯನ್ನು ಅರಿತು ಮುಖ್ಯವೈದ್ಯಾಧಿಕಾರಿಗಳ ಬದಲಾವಣೆ ಮಾಡಬೇಕು ಎಂದು ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರಿಬ್ಬರು ಒತ್ತಾಯಿಸಿದ್ದಾರೆ.

ವರದಿ: ಚಂದ್ರಶೇಖರ ಮೋರೆ.

ಇದನ್ನೂ ಓದಿ: State Govt,ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌ಗೆ ಹೈಕೋರ್ಟ್‌ ನೋಟಿಸ್‌

Advertisement

Udayavani is now on Telegram. Click here to join our channel and stay updated with the latest news.

Next