Advertisement

Article: ಮಹಾಲಯ ಅಮಾವಾಸ್ಯೆ- ಹಿಂದಿನ ತಲೆಮಾರುಗಳಿಗೆ ಕೃತಜ್ಞತೆ

11:50 PM Oct 13, 2023 | Team Udayavani |

ಮಹಾಲಯ ಅಮಾವಾಸ್ಯೆಯು ದಸರೆಯ ಪ್ರಾರಂಭದ ದಿನವಾಗಿದೆ. ಈ ದಿನವು ನಮ್ಮ ಜೀವನ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಟ್ಟ ಹಿಂದಿನ ಎಲ್ಲ ತಲೆಮಾರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಮೀಸಲಾದ ವಿಶೇಷ ದಿನವಾಗಿದೆ.

Advertisement

ಈ ಭೂಮಿಯ ಮೇಲೆ ಮನುಷ್ಯರು ಮತ್ತು ಅವರ ಪೂರ್ವಜರು ಸುಮಾರು 20 ದಶಲಕ್ಷ ವರ್ಷಗಳಿಂದ ಜೀವಿಸಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಬಹಳ ದೀರ್ಘ‌ ಸಮಯ. ನಮಗಿಂತ ಈ ಹಿಂದೆ ಈ ಭೂಮಿಯ ಮೇಲೆ ಜೀವಿಸಿದ ಈ ಎಲ್ಲ ನೂರಾರು ಸಾವಿರಾರು ತಲೆಮಾರುಗಳು ನಮಗೆ ಒಂದಲ್ಲ ಒಂದು ಕೊಡುಗೆಯನ್ನು ನೀಡಿದ್ದಾರೆ. ನಾವು ಮಾತನಾಡುವ ಭಾಷೆ, ನಾವು ಕುಳಿತುಕೊಳ್ಳುವ ರೀತಿ, ನಮ್ಮ ವಸ್ತ್ರಗಳು, ನಮ್ಮ ಕಟ್ಟಡಗಳು – ನಮಗೆ ಇಂದು ಗೊತ್ತಿರುವ ಬಹುತೇಕ ಸಂಗತಿಗಳು ನಮ್ಮ ಹಿಂದಿನ ತಲೆಮಾರುಗಳಿಂದ ಬಂದಿವೆ.

ಈ ಭೂಮಿಯ ಮೇಲೆ ಪ್ರಾಣಿಗಳು ಮಾತ್ರ ಇದ್ದಾಗ, ಬದುಕುವುದು, ತಿನ್ನುವುದು, ನಿದ್ರಿಸುವುದು, ಸಂತಾನೋತ್ಪತ್ತಿ ಮಾಡುವುದು ಮತ್ತು ಒಂದು ದಿನ ಸಾಯುವುದೇ ಜೀವನ ಪ್ರಕ್ರಿಯೆ ಆಗಿತ್ತು. ಅನಂತರ ನಿಧಾನವಾಗಿ, ಬದುಕುಳಿಯು­ವುದನ್ನು ಮಾತ್ರ ತಿಳಿದಿದ್ದ ಈ ಪ್ರಾಣಿಯು ವಿಕಾಸಗೊಳ್ಳಲು ಆರಂಭಿಸಿತು. ಅಡ್ಡವಾಗಿ ನಡೆದಾಡುತ್ತಿದ್ದ ಅದು ನೇರವಾಗಿ ನಿಂತುಕೊಳ್ಳಲು ಕಲಿಯಿತು; ಮೆದುಳು ಬೆಳೆಯಲು ಪ್ರಾರಂಭಿಸಿತು ಮತ್ತು ಕೆಲಸಗಳನ್ನು ಮಾಡುವ ಸಾಮರ್ಥ್ಯ ಇದ್ದಕ್ಕಿದ್ದಂತೆಯೇ ವೃದ್ಧಿಸತೊಡಗಿತು. ಮನುಷ್ಯರ ವಿಶಿಷ್ಟತೆ­ಯೇ­ನೆಂದರೆ ನಾವು ಉಪಕರಣಗಳನ್ನು ಬಳಸಬಲ್ಲೆವು. ಉಪಕರಣ­ಗಳನ್ನು ಬಳಸುವ ನಮ್ಮ ಈ ಸರಳ ಸಾಮರ್ಥ್ಯ­ದಿಂದ, ನಾವು ತಂತ್ರಜ್ಞಾನಗಳನ್ನು ಸೃಷ್ಟಿಸಿ, ವೃದ್ಧಿಸಿಕೊಂಡಿ­ದ್ದೇವೆ. ವಾನರವೊಂದು ಕೇವಲ ತನ್ನ ಕೈಗಳನ್ನು ಉಪಯೋಗಿಸುವ ಬದಲಾಗಿ, ಮತ್ತೂಂದು ಪ್ರಾಣಿಯ ತೊಡೆಯ ಮೂಳೆಯನ್ನು ಎತ್ತಿ­ಕೊಂಡು ಹೋರಾಡಲು ಪ್ರಾರಂಭಿಸಿದ ದಿನ; ತನ್ನ ಜೀವನವನ್ನು ಸಾಗಿಸಲು ತನ್ನ ಶರೀರವನ್ನು ಉಪಯೋಗಿಸುವ ಬದಲಾಗಿ, ಉಪಕರಣ­ಗಳನ್ನು ಬಳಸಲು ಬೇಕಾದ ಬುದ್ಧಿಶಕ್ತಿ­ಯನ್ನು ಹೊಂದಿದಾಗ, ಒಂದು ರೀತಿಯಲ್ಲಿ ಭೂಮಿಯ ಮೇಲೆ ಮನುಷ್ಯನ ಜೀವನ ಪ್ರಾರಂಭವಾಯಿತು.

ಅನಂತರ ಮನುಷ್ಯರು ತಾವು ಪ್ರಾಣಿಗಳಿಗಿಂತ ಉತ್ತಮ­ವಾಗಿ ಜೀವಿಸಬಹುದೆಂಬುದನ್ನು ತಿಳಿದು ತಮ್ಮ ಜೀವನವನ್ನು ರೂಪಿಸಿಕೊಳ್ಳತೊಡಗಿದರು. ಮನೆಗಳು, ಕಟ್ಟಡಗಳು ನಿರ್ಮಿಸಲ್ಪಟ್ಟವು, ಬಟ್ಟೆಗಳನ್ನು ತಯಾರಿಸಲಾಯಿತು ಮನುಷ್ಯರಿಂದ ಭೂಮಿಯ ಮೇಲೆ ಇನ್ನೂ ಅನೇಕ ಸಂಗತಿಗಳು ಸಂಭವಿಸಿದವು. ಬೆಂಕಿಯನ್ನು ಸೃಷ್ಟಿಸುವುದ­ರಿಂದ ಹಿಡಿದು ಚಕ್ರವನ್ನು ಕಂಡು ಹಿಡಿಯುವವರೆಗೆ ಮತ್ತು ಇನ್ನೂ ಅಸಂಖ್ಯ ಸಂಗತಿಗಳೂ ಸೇರಿ, ಈ ಬಳುವಳಿಯು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಾ ಬಂದಿದೆ. ಆ ಬಳುವಳಿಯೇ ಇಂದು ನಾವು ಏನಾಗಿದ್ದೇವೋ ಅದಕ್ಕೆ ಕಾರಣ. ಮನುಷ್ಯರು ಇದುವರೆಗೂ ಬಟ್ಟೆಯನ್ನೇ ಹಾಕಿಕೊಂಡಿಲ್ಲ ಎಂದುಕೊಳ್ಳೋಣ ಮತ್ತು ಒಂದು ಅಂಗಿಯನ್ನು ಹೊಲಿಯಬೇಕಾದ ಮೊದಲ ವ್ಯಕ್ತಿ ನೀವೇ ಎಂದುಕೊಳ್ಳಿ, ಅದೇನೂ ಅಷ್ಟು ಸುಲಭವಲ್ಲ; ಒಂದು ಅಂಗಿಯನ್ನು ಹೇಗೆ ಹೊಲಿಯಬೇಕೆನ್ನುವುದನ್ನು ಕಂಡುಕೊಳ್ಳಲು ಅನೇಕ ವರ್ಷಗಳು ಬೇಕಾಗುತ್ತದೆ.

ಪಿತೃಪಕ್ಷ: ಕೃತಜ್ಞತೆಗಳ ಅಭಿವ್ಯಕ್ತಿ

Advertisement

ಇಂದು ನಾವು ನಮಗೆ ಸಿಗುವ ಎಲ್ಲವನ್ನೂ ಸಾರಾ­ಸಗಟಾಗಿ ನಮ್ಮದೇ ಎಂದು ಭಾವಿಸಿಕೊಂಡಿದ್ದೇವೆ. ಆದರೆ ಹಿಂದಿನ ತಲೆಮಾರುಗಳಿಲ್ಲದೇ ಹೋದರೆ, ಮೊದಲನೆಯ­ದಾಗಿ ನಾವೇ ಇರುತ್ತಿರಲಿಲ್ಲ; ಎರಡನೆಯದಾಗಿ ಅವರ ಕೊಡುಗೆಯಿಲ್ಲದೇ ಇದ್ದಿದ್ದರೆ, ಈಗ ನಮ್ಮ ಬಳಿ ಇಷ್ಟೆಲ್ಲ ಇರುತ್ತಿರಲಿಲ್ಲ. ಹಾಗಾಗಿ ಅವೆಲ್ಲವನ್ನೂ ನಮ್ಮದೇ ಎಂದು ಭಾವಿಸದೇ, ಈ ದಿನ ನಾವು ಅವರೆಲ್ಲರಿಗೂ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಅದನ್ನು ಮೃತರಾದ ತಂದೆ ತಾಯಿಗಳಿಗೆ ಮಾಡುವ ಧಾರ್ಮಿಕ ಕ್ರಿಯೆ ಎಂಬಂತೆ ಮಾಡಲಾಗುತ್ತಿದೆ; ಆದರೆ ವಾಸ್ತವವಾಗಿ ಅದು ಹಿಂದಿನ ತಲೆಮಾರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿದೆ.

ಈ ಸಮಯದಲ್ಲಿ, ಭಾರತೀಯ ಉಪಖಂಡದಲ್ಲಿ, ಹೊಸ ಬೆಳೆಗಳು ಫಲನೀಡಲು ಪ್ರಾರಂಭಿಸಿರುತ್ತವೆ. ಹಾಗಾಗಿ ಗೌರವ ಮತ್ತು ಕೃತಜ್ಞತೆಯ ಸೂಚಕವಾಗಿ ಮೊದಲ ಫಸಲನ್ನು ಪಿಂಡದ ರೂಪದಲ್ಲಿ ಪೂರ್ವಜರಿಗೆ ಸಲ್ಲಿಸಲಾಗುತ್ತದೆ. ಅನಂತರ ನವರಾತ್ರಿ, ವಿಜಯ ದಶಮಿ ಮತ್ತು ದೀಪಾವಳಿ ಮೊದಲಾದ ಇನ್ನಿತರ ಹಬ್ಬಗಳನ್ನು ಆಚರಿಸಿ ಸಂಭ್ರಮಿಸಲಾಗುತ್ತದೆ.

~ ಸದ್ಗುರು

Advertisement

Udayavani is now on Telegram. Click here to join our channel and stay updated with the latest news.

Next