Advertisement

ಕೊಲ್ಹಾಪುರದ ಕಳೆ ಮಹಾಲಕ್ಷ್ಮಿ…

10:11 AM Feb 09, 2020 | mahesh |

ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿರುವ ಕೊಲ್ಹಾಪುರದ ಮಹಾಲಕ್ಷ್ಮಿ ದೇವಾಲಯವು, ಭಾರತದ ಅತಿ ಪುರಾತನ ದೇವಾಲಯಗಳಲ್ಲಿ ಒಂದು. ಮಹಾರಾಷ್ಟ್ರದ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಈ ಮಂದಿರದ ಬಗ್ಗೆ ಸ್ಕಂದ ಪುರಾಣದಲ್ಲೂ ಉಲ್ಲೇಖವಿದೆ.

Advertisement

ಹಿಂದೆ, ಕೊಲ್ಲಾಸುರನೆಂಬ ರಾಕ್ಷಸನು, ದೇವತೆ ಮತ್ತು ಋಷಿಮನಿಗಳಿಗೆ ಉಪಟಳ ನೀಡುತ್ತಾ, ಲೋಕಕಂಟಕನಾಗಿದ್ದ. ಆಗ, ಸಕಲ ದೇವತೆಗಳು, ಕೊಲ್ಲಾಸುರನಿಂದ ಕಾಪಾಡು ತಾಯಿ ಎಂದು ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿದಾಗ, ದೇವಿಯು ಕೊಲ್ಲಾಸುರನ ಶಿರಚ್ಛೇದ ಮಾಡಿದಳು. ರಾಕ್ಷಸ ಸಂಹಾರವಾದ ಸ್ಥಳವೇ ಕೊಲ್ಲಾಪುರವೆಂದು ಖ್ಯಾತಿ ಪಡೆಯಿತು.

ಇನ್ನೊಂದು ಪುರಾಣ ಕಥೆಯ ಪ್ರಕಾರ, ಭೃಗು ಮಹರ್ಷಿಯು ವಿಷ್ಣುವಿನ ಎದೆಯ ಮೇಲೆ ಕಾಲಿಟ್ಟು ಅಪಮಾನ ಮಾಡಿದಾಗ, ವಿಷ್ಣುವಿನ ವಕ್ಷಸ್ಥಳವಾಸಿನಿಯಾದ ಲಕ್ಷ್ಮಿಗೆ ಎಲ್ಲಿಲ್ಲದ ಕೋಪ ಬಂತು. ಆದರೂ, ವಿಷ್ಣುವು ಭೃಗು ಮಹರ್ಷಿ ಮೇಲೆ ಸಿಟ್ಟು ಮಾಡಿಕೊಳ್ಳಲಿಲ್ಲ. ಅದರಿಂದ ಬೇಸರಗೊಂಡ ಲಕ್ಷ್ಮಿಯು ವೈಕುಂಠವನ್ನು ತೊರೆದು, ಕೊಲ್ಹಾಪುರಕ್ಕೆ ಬಂದು ನೆಲೆಸಿದಳು ಎಂಬ ಪ್ರತೀತಿಯಿದೆ.

ಚಾಲುಕ್ಯರ ಕಾಲದ ಮಂದಿರ
ಚಿಕ್ಕ ಗುಡಿಯಾಗಿದ್ದ ದೇವಾಲಯವನ್ನು, ಕ್ರಿ.ಶ. 600ರಲ್ಲಿ ಚಾಲುಕ್ಯರ ರಾಜ ಕರ್ಣದೇವನು ಪಿರಮಿಡ್‌ ಆಕಾರದಲ್ಲಿ ನಿರ್ಮಿಸಿದನು. ಕೆತ್ತನೆ ಕಂಬಗಳಿಂದಲೇ ಈ ದೇವಾಲಯವು ಹೆಸರುವಾಸಿಯಾಗಿದೆ. ಗೋಡೆಗಳ ಮೇಲೆ ನೃತ್ಯ ಭಂಗಿಗಳ, ಸಂಗೀತಗಾರರ ಕೆತ್ತನೆಗಳಿವೆ. ದೇವಾಲಯದ ಆವರಣ ವಿಶಾಲವಾಗಿದ್ದು, ನಾಲ್ಕು ದಿಕ್ಕುಗಳಲ್ಲಿಯೂ ದ್ವಾರಗಳಿವೆ. ಮುಖ್ಯದ್ವಾರ ಪಶ್ಚಿಮ ದಿಕ್ಕಿನಲ್ಲಿದ್ದು, ಎದುರಿಗೆ ಗರುಡ ಮಂಟಪವಿದೆ. ಕಲ್ಲಿನ ಮಂಟಪದಲ್ಲಿ ಗಣೇಶ, ಪ್ರಾಂಗಣದ ಮಧ್ಯೆ ಗರ್ಭಗುಡಿಯಲ್ಲಿ ಮಹಾಲಕ್ಷ್ಮಿ ಪಶ್ಚಿಮಾಭಿಮುಖವಾಗಿ ಕುಳಿತು ದರ್ಶನ ನೀಡುತ್ತಾಳೆ.

ಸಿಂಹವಾಹಿನಿ ಲಕ್ಷ್ಮಿ
ಗರ್ಭಗುಡಿಯಲ್ಲಿ ಆರು ಅಡಿ ಎತ್ತರದ ವೇದಿಕೆಯ ಮೇಲೆ, ಎರಡು ಅಡಿಯ ಪೀಠದಲ್ಲಿ, ಮೂರು ಅಡಿಯ ಕಪ್ಪು ಶಿಲೆಯಿಂದ ಕೆತ್ತಿರುವ ಮಹಾಲಕ್ಷ್ಮಿ ವಿಗ್ರಹ ಆಕರ್ಷಕವಾಗಿದೆ. ಕೌಮೋದಕಿ, ಕೇತಕ, ಫ‌ಲ, ರಸಪಾತ್ರೆ ಧರಿಸಿ ಸಿಂಹವಾಹಿನಿಯಾಗಿದ್ದಾಳೆ ದೇವಿ. ಆಕೆಯ ಮುಕುಟದಲ್ಲಿ ಶೇಷನಾಗವಿದ್ದು, ಅಸಂಖ್ಯಾತ ನೆರಿಗೆಗಳಿಂದ ಕೂಡಿದ ಸೀರೆಯನ್ನುಟ್ಟು, ಸರ್ವಾಲಂಕಾರ ಭೂಷಿತಳಾಗಿದ್ದಾಳೆ. ಮಹಾಲಕ್ಷ್ಮಿ ಗರ್ಭಗುಡಿ ಪಕ್ಕದಲ್ಲಿ ಮಹಾಕಾಳಿ ಮತ್ತು ಸರಸ್ವತಿಯರಿದ್ದಾರೆ. ನವಗ್ರಹ, ಸೂರ್ಯ, ಮಹಿಷಾಸುರ ಮರ್ದಿನಿ ಕಾತ್ಯಾಯಿನಿ, ಭವಾನಿ, ಶಿವಲಿಂಗ, ನಂದಿ ಮುಂತಾದ ವಿಗ್ರಹಗಳೂ.

Advertisement

ಸೂರ್ಯ ಸ್ಪರ್ಶ
ವರ್ಷದಲ್ಲಿ ಮೂರು ದಿನಗಳಂತೆ, ಎರಡು ಬಾರಿ ಸೂರ್ಯ ಕಿರಣಗಳು ನೇರವಾಗಿ ಮಹಾಲಕ್ಷ್ಮಿ ವಿಗ್ರಹವನ್ನು ಸ್ಪರ್ಶಿಸುತ್ತವೆ. ಇದನ್ನು ಕಿರಣೋತ್ಸವೆಂದು ಆಚರಿಸಲಾಗುತ್ತದೆ. ಮೊದಲನೆಯ ದಿನ ದೇವಿಯ ಪಾದಾರವಿಂದಗಳ ಮೇಲೆ, ಎರಡನೆಯ ದಿನ ಮಧ್ಯ ಭಾಗ ಹಾಗೂ ಮೂರನೆಯ ದಿನ ಮುಖದ ಮೇಲೆ ಸೂರ್ಯನ ಬೆಳಕಿನಾರತಿ ಸಲ್ಲುತ್ತದೆ. ಈ ಅಚ್ಚರಿಯು ಪ್ರತಿ ವರ್ಷ, ಜನವರಿ 31, ಫೆಬ್ರುವರಿ 1 ಮತ್ತು 2 ಹಾಗೂ ನವಂಬರ್‌ 9, 10 ಮತ್ತು 11ರಂದು ಜರುಗುತ್ತವೆ.

ಜನ ಪ್ರೀತಿಯ ಅಂಬಾಬಾಯಿ
ಪ್ರತಿದಿನ ಸೂರ್ಯೋದಯದ ಮುಂಚೆ ದೇವಿಗೆ ಅಭಿಷೇಕ ಮಾಡಲಾಗುತ್ತದೆ. ಪ್ರತಿದಿನ, ಐದು ಸಾರಿ ಅರ್ಚನೆಯಾಗುತ್ತದೆ. ಶುಕ್ರವಾರ ವಿಶೇಷ ಪೂಜೆ, ನವರಾತ್ರಿ ವೇಳೆ ದೇವಿಯನ್ನು ವಿವಿಧ ರೂಪದಲ್ಲಿ ಅಲಂಕರಿಸುವುದು ವಿಶೇಷ. ಇಲ್ಲಿನ ಜನರು, ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಅಂಬಾಬಾಯಿ ಎಂದು ಕರೆಯುತ್ತಾರೆ. ದೇವಿಗೆ, ಕಮಲ ಪುಷ್ಪಗಳನ್ನು ವಿಶೇಷವಾಗಿ ಸಮರ್ಪಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 4.30 ರಿಂದ ರಾತ್ರಿ 10 ರವರೆಗೆ ದೇವಾಲಯ ತೆರೆದಿರುತ್ತದೆ.

ದರುಶನಕೆ ದಾರಿ…
ಬೆಂಗಳೂರು ಮತ್ತು ಪುಣೆ (ಎನ್‌ಎಚ್‌-4) ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲ್ಹಾಪುರವಿದ್ದು, ಬೆಂಗಳೂರಿನಿಂದ 796 ಕಿ.ಮೀ ಹಾಗೂ ಬೆಳಗಾವಿಯಿಂದ 114 ಕಿ.ಮೀ ಅಂತರದಲ್ಲಿದೆ. ರೈಲು ಮತ್ತು ಬಸ್‌ ಸೌಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next