Advertisement

Mahalakshmi Temple Uchila: ಅ. 3- 12; ಉಚ್ಚಿಲ ದಸರಾ -2024 ವೈಭವ

12:46 AM Sep 26, 2024 | Team Udayavani |

ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಮೂರನೇ ವರ್ಷದ ಉಡುಪಿ ಉಚ್ಚಿಲ ದಸರಾ-2024 ಕಾರ್ಯಕ್ರಮವು ಅ. 3ರಿಂದ 12ರ ವರೆಗೆ ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್‌ ಸಭಾಂಗಣದಲ್ಲಿ ಜರಗಲಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್‌ ಹೇಳಿದರು.

Advertisement

ಉಚ್ಚಿಲ ಮೊಗವೀರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಆಕರ್ಷಕ ಮಂಟಪದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಪೂಜಿಸಲಾಗುವುದು. ಅ. 12ರಂದು ವೈಭವದ ಶೋಭಾಯಾತ್ರೆಯೊಂದಿಗೆ ಜಲಸ್ತಂಭನ ನಡೆಯಲಿದೆ ಎಂದರು.

ಎಂಆರ್‌ಜಿ ಗ್ರೂಫ್‌ ಅಧ್ಯಕ್ಷ ಡಾ| ಕೆ. ಪ್ರಕಾಶ್‌ ಶೆಟ್ಟಿ ಬಂಜಾರ ಅವರ ಪ್ರಾಯೋಜಕತ್ವದಲ್ಲಿ ಪಡುಬಿದ್ರಿ ಯಿಂದ ಕಾಪು ಸಮುದ್ರ ತೀರದ ದೀಪಸ್ತಂಭದವರೆಗೆ ನಡೆಸಲಾಗುವ ವಿದುದ್ದೀಪಾಲಂಕಾರವು ಅ.2ರಂದು ಸಂಜೆ 6.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ದಸರಾ ಉದ್ಘಾಟನೆ
ಅ.3ರಂದು ಬೆಳಗ್ಗೆ 9ಕ್ಕೆ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಮತ್ತು ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.

10 ಗಂಟೆಗೆ ಜಿಲ್ಲಾಧಿಕಾರಿ ಸಹಿತ ಗಣ್ಯರು ಮತ್ತು ದಾನಿಗಳ ಉಪಸ್ಥಿತಿಯಲ್ಲಿ ಉಚ್ಚಿಲ ದಸರಾ ಉದ್ಘಾಟಿಸಲಾಗುವುದು. ಬಳಿಕ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕೆ ಪ್ರಾತ್ಯಕ್ಷಿಕೆ, ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕೆ ಪರಿಕರಗಳ ಪ್ರದರ್ಶನ ಮುಂತಾದವುಗಳ ಪ್ರದರ್ಶನ ಉದ್ಘಾಟನೆ, ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಶುಭಾರಂಭಗೊಳ್ಳಲಿದೆ. ಸಂಜೆ 5ಕ್ಕೆ 10 ದಿನಗಳ ಕಾಲ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದರು.

Advertisement

ಶ್ರೀ ಶರನ್ನವರಾತ್ರಿ ಮಹೋತ್ಸವ ಮತ್ತು ದಸರಾ ಉತ್ಸವ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಪ್ರತೀ ದಿನ ಬೆಳಗ್ಗೆ ಚಂಡಿಕಾಹೋಮ, ಭಜನೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಲಘು ಉಪಾಹಾರ, ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಧಾರ್ಮಿಕ ಪ್ರಚವನ, ಕಲೊ³àಕ್ತ ಪೂಜೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಚ್ಚಿಲ ದಸರಾ ಮಹೋತ್ಸವದ ಮಹತ್ವದ ಬಗ್ಗೆ ವಿಶೇಷ ಲೇಸರ್‌ ಶೋ ನಡೆಯಲಿದೆ.

ಅ. 12ರಂದು ವಿಜಯ ದಶಮಿಯಂದು ಸಾಮೂಹಿಕ ಮಹಾಚಂಡಿಕಾ ಯಾಗ ಹಾಗೂ ಪೂರ್ಣಾಹುತಿ ನಡೆಯಲಿದೆ.

ಅ.12ರಂದು ಶೋಭಾಯಾತ್ರೆ
ಅ. 12ರಂದು ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ, ಮಧ್ಯಾಹ್ನ 3ಕ್ಕೆ ಶೋಭಾಯಾತ್ರೆಗೆ ಚಾಲನೆ, ಸಂಜೆ 5 ಗಂಟೆಗೆ ಶೋಭಾಯಾತ್ರೆ ಹೊರಟು ಕಾಪು ದೀಪಸ್ತಂಭದ ಬಳಿಯಲ್ಲಿ ವಿಸರ್ಜನೆಗೊಳ್ಳಲಿದೆ.

ಆಗ ಬೋಟುಗಳಿಂದ ಸಮುದ್ರ ಮಧ್ಯೆ ಭವ್ಯ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ ಹಾಗೂ ನವದುರ್ಗೆಯರಿಗೆ, ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡ್ರೋನ್‌ ಮೂಲಕ ಪುಷ್ಪಾರ್ಚನೆ, ರಾತ್ರಿ ಸುಮಂಗಲೆಯ ವರಿಂದ ಸಾಮೂಹಿಕ ಮಂಗಳಾರತಿ, ಅರ್ಚಕರಿಂದ ಗಂಗಾರತಿ ನಡೆಯಲಿದೆ ಎಂದರು.

ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್‌ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ್‌ ಕರ್ಕೇರ ಮಲ್ಪೆ, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್‌ ಬೇಂಗ್ರೆ, ಪ್ರ. ಕಾರ್ಯದರ್ಶಿ, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್‌, ಜ. ಕಾರ್ಯದರ್ಶಿ ಸುಜಿತ್‌ ಸಾಲ್ಯಾನ್‌, ಪ್ರಬಂಧಕ ಸತೀಶ್‌ ಅಮೀನ್‌ ಪಡುಕೆರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next