ನವದೆಹಲಿ: ಅಚ್ಚರಿಯ ಬೆಳವಣಿಗೆಯೆಂಬಂತೆ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ಈಗ ರೀಓಪನ್ ಮಾಡಿದೆ.
ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದು ಬಿಹಾರದಲ್ಲಿ ಮತ್ತೂಂದು ಹಂತದ ರಾಜಕೀಯ ಬಿರುಗಾಳಿ ಎಬ್ಬಿಸುವ ಸುಳಿವು ನೀಡಿದೆ.
ಯುಪಿಎ-1 ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಲಾಲು ಅವರು ರೈಲ್ವೆ ಯೋಜನೆಗಳ ಹಂಚಿಕೆ ವೇಳೆ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಸಂಬಂಧ 2018ರಲ್ಲಿ ಸಿಬಿಐ ತನಿಖೆ ಆರಂಭಿಸಿತ್ತು. ಆದರೆ, ಕಳೆದ ವರ್ಷದ(2021) ಮೇ ತಿಂಗಳಲ್ಲಿ “ಈ ಆರೋಪಕ್ಕೆ ಸಂಬಂಧಿಸಿ ಯಾವುದೇ ಸಾಕ್ಷ್ಯಾಧಾರ ಸಿಗದ ಕಾರಣ ಪ್ರಕರಣವನ್ನು ಸಮಾಪ್ತಿಗೊಳಿಸುತ್ತಿದ್ದೇವೆ’ ಎಂದು ಸಿಬಿಐ ಹೇಳಿತ್ತು.
ಆದರೆ, ಈಗ ಏಕಾಏಕಿ ಸಿಬಿಐ ಈ ಪ್ರಕರಣವನ್ನು ಮತ್ತೆ ತನಿಖೆಗೆ ಕೈಗೆತ್ತಿಕೊಂಡಿರುವುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
Related Articles
ಮಹಾಘಟಬಂಧನ ಆಕ್ರೋಶ:
ಕೇಸ್ ರೀಓಪನ್ ವಿರುದ್ಧ ಮಹಾಘಟಬಂಧನ್ ಮೈತ್ರಿಕೂಟ ಸಿಡಿದುಬಿದ್ದಿದೆ. “ಕೇಂದ್ರ ಸರ್ಕಾರವು ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.
ಕಳೆದ ವರ್ಷ ಸಮಾಪ್ತಿಯಾಗಿದ್ದ ಕೇಸನ್ನು ಈಗ ಮರುತನಿಖೆ ಮಾಡುತ್ತಿದ್ದಾರೆ. ಆದರೆ, ಲಾಲು ಅವರು ಎಲ್ಲ ಪ್ರಕರಣಗಳಲ್ಲೂ ದೋಷಮುಕ್ತರಾಗಿ ಬರುತ್ತಾರೆ’ ಎಂದು ಆರ್‌ಜೆಡಿ ನಾಯಕ ವಿಜಯ್ ಪ್ರಕಾಶ್ ಹೇಳಿದ್ದಾರೆ.
ಬಿಜೆಪಿಯನ್ನು ಯಾರು ವಿರೋಧಿಸುತ್ತಾರೋ ಅವರ ಹಿಂದೆ ಸಿಬಿಐ ಹೋಗುತ್ತದೆ. ಬಿಜೆಪಿ ನಾಯಕರ ಮೇಲೆ ಸಿಬಿಐ ದಾಳಿಯಾಗಿದ್ದು ಎಲ್ಲಾದರೂ ನೋಡಿದ್ದೀರಾ ಎಂದು ಜೆಡಿಯು ನಾಯಕ ವಿಜಯ್ ಕುಮಾರ್ ಚೌಧರಿ ಪ್ರಶ್ನಿಸಿದ್ದಾರೆ.