Advertisement

ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದಿದ್ದ ಮಹಾದೇವ

03:23 PM Apr 01, 2022 | Team Udayavani |

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರ ತವರೂರು ಎಂದು ಕರೆಸಿಕೊಳ್ಳುತ್ತಿರುವ ಹಾವೇರಿಯಲ್ಲಿ ಬ್ರಿಟಿಷರ ವಿರುದ್ಧ ಹಲವಾರು ಹೋರಾಟಗಳನ್ನು ನಡೆಸಿ, ಮೈಲಾರ ಮಹಾದೇವ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರು ಹುತಾತ್ಮರಾದ ತಾಲೂಕಿನ ಹೊಸರಿತ್ತಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಕ್ಷಿಯಾಗಿದೆ.

Advertisement

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಜಿಲ್ಲೆಯ ಹೆಮ್ಮೆಯ ಸುಪುತ್ರ ಮೈಲಾರ ಮಹಾದೇವ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದು ಹೋರಾಟದ ಕಿಚ್ಚು ಹಚ್ಚಿದರು. ಬ್ರಿಟಿಷರಿಗೆ ಸಂಬಂಧಿಸಿದ ಟಪಾಲುಗಳನ್ನು (ಪತ್ರ)ಅಪಹರಿಸುವುದು, ರೈಲ್ವೆ ನಿಲ್ದಾಣಗಳಿಗೆ ಬೆಂಕಿ ಹಚ್ಚುವುದು, ಪೊಲೀಸರ ಬಂದೂಕುಗಳ ಅಪಹರಣ, ಪೊಲೀಸ್‌ ಠಾಣೆಗಳಿಗೆ ಬೆಂಕಿ ಹಚ್ಚುವುದು, ನ್ಯಾಯಾಲದ ಮೇಲೆ ದಾಳಿ ಹೀಗೆ ಸುಮಾರು 74ಕ್ಕೂ ಹೆಚ್ಚು ಯಶಸ್ವಿ ದಾಳಿಗಳನ್ನು ನಡೆಸಿ ಮೈಲಾರ ಮಹಾದೇವ ಬ್ರಿಟಿಷರ ನಿದ್ದೆಗೆಡಿಸಿದ್ದರು.

ಕಂದಾಯ ಕಚೇರಿ ಮೇಲೆ ದಾಳಿ: ಹೊಸರಿತ್ತಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರೈತರಿಂದ ಸಂಗ್ರಹಿಸಿಟ್ಟಿದ್ದ ಕಂದಾಯ ಹಣವನ್ನು ಲೂಟಿ ಮಾಡಿ, ರೈತರಿಗೆ ಹಿಂದಿರುಗಿಸುವ ಹೋರಾಟಕ್ಕೆ ಮೈಲಾರ ಮಹಾದೇವ ಮುಂದಾದರು.

1943ರ ಮಾ.31ರಂದು ಇದಕ್ಕಾಗಿ ತಮ್ಮ ತಂಡದೊಂದಿಗೆ ದಾಳಿ ಬಗ್ಗೆ ಚರ್ಚಿಸಿ ಬೆಳಗಿನ ವೇಳೆ ಯಾರಿಗೂ ಅನುಮಾನ ಬರದಂತೆ ಬ್ರಿಟಿಷರ ಮೇಲೆ ಮೂರು ಕಡೆಗಳಿಂದ ದಾಳಿ ನಡೆಸಲು ತೀರ್ಮಾನಿಸಿದ್ದರು. ಚೆನ್ನೂರ ಕಡೆಯಿಂದ ಕೊಲ್ಲಾರಿ ಚಕ್ಕಡಿಯಲ್ಲಿ ಮದುವೆಗೆ ಬರುವಂತೆ ಕೆಲವರು ಬರುವುದು, ಹಲವರು ನದಿ ಕಡೆಯಿಂದ ಮೈತೊಳೆದುಕೊಳ್ಳಲು ಹೋದವರಂತೆ ತಿರುಗಿ ಬರುವುದು ಹಾಗೂ ಇನ್ನು ಕೆಲವರು ನದಿಗೆ ಹೊಗುವವರಂತೆ ಊರೊಳಗಿನಿಂದ ಬಂದು ಕಂದಾಯ ಕಚೇರಿ ಮೇಲೆ ದಾಳಿ ನಡೆಸಲು ನಿರ್ಧರಿಸಲಾಗಿತ್ತು.ಆದರೆ, ಈ ದಾಳಿ ಮಹಾದೇವ ಅವರ ಕೊನೆಯುಸಿರು ನಿಲ್ಲಿಸುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ.

ಹೆಬ್ಬುಲಿಯಂತೆ ನುಗ್ಗಿದ ಮಹಾದೇವ: 1943ರ ಏ.1ರಂದು ಬೆಳಗಿನ ಜಾವ ಮೊದಲೇ ಯೋಜಿಸಿದಂತೆಯೇ ಎಲ್ಲರೂ ಬಂದು ಅಲ್ಲಲ್ಲಿ ಮರೆಯಾಗಿ ಕುಳಿತಿದ್ದರು. ಕಂದಾಯ ಕಚೇರಿ ಕಾವಲು ಪೊಲೀಸರ ಮೇಲೆರಗಲು ಮಹಾದೇವ ಅವರು ತಮ್ಮ ಸಹಚರರಿಗೆ ಸೂಚನೆ ನೀಡಿದರು. ಆಗ ಸಹಚರರು ಅಸಹಾಯಕರಾದ ಕಾರಣ ಮಹಾದೇವ ಅವರು ತಾವೇ ಸ್ವತಃ ಹೆಬ್ಬುಲಿಯಂತೆ ನುಗ್ಗಿದರು. ಆಗ ಉಳಿದವರೂ ಬಂದು ಸೇರಿದರು. ಅಷ್ಟರಲ್ಲಿ ಮಹಾದೇವ ಕಂದಾಯ ಸಂಗ್ರಹಿಸಿಟ್ಟಿದ್ದ ಗುಡಿಯ(ದೇವಸ್ಥಾನ)ಕಟ್ಟೆ ಏರಿದ್ದರು.

Advertisement

ಆಗ ಪೊಲೀಸನೊಬ್ಬ ತನ್ನ ಕೈಯಲ್ಲಿದ್ದ ಬಂದೂಕನ್ನು ಜೋರಾಗಿ ಮಹಾದೇವ ಅವರತ್ತ ಬೀಸಿದ್ದರಿಂದ ಬಂದೂಕು ಅವರ ಹೊಟ್ಟೆ ಸೇರಿತು. ಮತ್ತೂಬ್ಬ ಪೊಲೀಸ್‌ ಮಹಾದೇವರ ಎದೆಗೆ ಗುರಿಯಿಟ್ಟು ಗುಂಡು ಹಾರಿಸಿದ. ಒಂದರ ಮೇಲೊಂದರಂತೆ ನಾಲ್ಕು ಗುಂಡುಗಳು ಅವರ ಎದೆ ಸೇರಿದವು. ಆಗ ಮಹಾದೇವ ಅವರು “ಹೇ ಬಾಪು’ ಎನ್ನುತ್ತ ನೆಲಕ್ಕುರುಳಿದರು. ಮತ್ತಿಬ್ಬರು ಪೊಲೀಸರು ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಮೇಲೆ ಗುಂಡಿನ ಮಳೆಗರೆದರು. ಮಹಾದೇವ ಹಾಗೂ ತಿರಕಪ್ಪ ಸ್ಥಳದಲ್ಲಿಯೇ ವೀರ ಮರಣ ಹೊಂದಿದರು. ತೀವ್ರ ಗಾಯಗೊಂಡಿದ್ದ ವೀರಯ್ಯ ಹಾವೇರಿಗೆ ಕರೆತಂದ ನಂತರ ಪ್ರಾಣ ಬಿಟ್ಟರು. ಮೈಲಾರ ಮಹಾದೇವ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರು ಕೊನೆಯುಸಿರೆಳೆದ ಸ್ಮರಣಾರ್ಥ ಹೊಸರಿತ್ತಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹುತಾತ್ಮರ ವೀರಗಲ್ಲು ನಿಲ್ಲಿಸಲಾಗಿದೆ.

ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next