ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮಂಗಳವಾರ ನಡೆಯಲಿರುವಂತೆಯೇ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಸೃಷ್ಟಿಸಿರುವ ಮಹಾದೇವ ಬೆಟ್ಟಿಂಗ್ ಆ್ಯಪ್ ಅನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಬಾರಿ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿಯುವ ಸಂಕಲ್ಪ ತೊಟ್ಟಿರುವ ಬಿಜೆಪಿಗೆ ಈ ಹಗರಣ ವರದಾನವಾಗಿ ಪರಿಣಮಿಸಿದ್ದರೆ, ಆಡಳಿತಾರೂಢ ಕಾಂಗ್ರೆಸ್ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ, ಮಹಾದೇವ ಬೆಟ್ಟಿಂಗ್ ಆ್ಯಪ್ ವಿಚಾರದಲ್ಲಿ ಕೇಂದದ ನಿರ್ಲಕ್ಷ್ಯ ಧೋರಣೆ ಮತ್ತಿತರ ವಿಷಯಗಳನ್ನು ಮುಂದಿಟ್ಟು ಬಿಜೆಪಿ ವಿರುದ್ಧ ಮುಗಿಬಿದ್ದಿದೆ.
ಈ ಆರೋಪ, ಪ್ರತ್ಯಾರೋಪಗಳ ನಡುವೆ ಇ.ಡಿ. ಮನವಿಯಂತೆ ಕೇಂದ್ರ ಸರ್ಕಾರ ಮಹಾದೇವ ಬೆಟ್ಟಿಂಗ್ ಆ್ಯಪ್ ಸಹಿತ ಒಟ್ಟು 22 ಅಕ್ರಮ ಬೆಟ್ಟಿಂಗ್ ಆ್ಯಪ್ ಮತ್ತು ವೆಬ್‌ಸೈಟ್‌ಗಳನ್ನು ನಿಷೇಧಿಸಿದೆ. ಮಹಾದೇವ ಬೆಟ್ಟಿಂಗ್ ಆ್ಯಪ್‌ನ ಅಕ್ರಮಗಳು ಬಯಲಾಗಿ ಒಂದೂವರೆ ವರ್ಷ ಕಳೆದರೂ ರಾಜ್ಯ ಸರ್ಕಾರ ತನ್ನ ಅಧಿಕಾರ ಬಳಿಸಿ ಈ ಆ್ಯಪ್‌ನ ವಿರುದ್ಧ ಯಾವುದೇ ಕ್ರಮಕೈಗೊಂಡಿರಲಿಲ್ಲ. ಕನಿಷ್ಠ ಪಕ್ಷ ಈ ಅಕ್ರಮ ಆ್ಯಪ್ ಮತ್ತು ವೆಬ್‌ಸೈಟ್‌ಗಳನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಿರಲಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇದೇ ವೇಳೆ ದೂರಿದ್ದಾರೆ.
ಕೇಂದ್ರ ಸಚಿವರ ಈ ಹೇಳಿಕೆಯಿಂದ ಕ್ರುದ್ಧರಾಗಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಅಕ್ರಮ ಬೆಟ್ಟಿಂಗ್ ಆ್ಯಪ್, ವೆಬ್‌ಸೈಟ್‌ಗಳಿಂದ ಜಿಎಸ್‌ಟಿ ವಸೂಲು ಮಾಡಿಕೊಂಡು ದೇಶದಲ್ಲಿ ಅವುಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಟ್ಟಿದ್ದ ಕೇಂದ್ರ ಸರ್ಕಾರ ರಾಜ್ಯದಲ್ಲಿ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡ ಬಳಿಕ ಇವುಗಳನ್ನು ನಿಷೇಧಿಸುವ ನಾಟಕವಾಡಿದೆ. ಈ ಅಕ್ರಮ ಆ್ಯಪ್‌ಗ್ಳ ಬಗೆಗೆ ಸಂಪೂರ್ಣ ಅರಿವಿದ್ದರೂ ಕೇಂದ್ರ ಸರಕಾರ ಈವರೆಗೆ ಮೌನ ವಹಿಸಿದ್ದುದು ಏಕೆ ಎಂದು ಮರುಪ್ರಶ್ನಿಸುವ ಮೂಲಕ ತಿರಗೇಟು ನೀಡಿದ್ದಾರೆ.
ಮಹಾದೇವ ಬೆಟ್ಟಿಂಗ್ ಹಗರಣದ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತೋರಿದ ನಿರ್ಲಕ್ಷ್ಯ ಮನೋಭಾವ ಮತ್ತು ಅವುಗಳ ಕಾರ್ಯವೈಖರಿ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಭಾರೀ ಅಕ್ರಮಗಳು ತಮ್ಮ ಮೂಗಿನ ನೇರಕ್ಕೆ ನಡೆಯುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೂಕಪ್ರೇಕ್ಷಕನಂತೆ ವರ್ತಿಸಿರುವುದು, ಚುನಾವಣೆ ಘೋಷಣೆಯಾದ ಬಳಿಕ ಇ.ಡಿ. ದಾಳಿ, ತನಿಖೆ, ಆರೋಪಪಟ್ಟಿ ಸಲ್ಲಿಕೆ, ಪರಸ್ಪರ ದೋಷಾರೋಪಣೆ ಮತ್ತಿತರ ಕಾರ್ಯಗಳಲ್ಲಿ ನಿರತವಾಗಿರುವುದನ್ನು ಕಂಡಾಗ ಈ ಹಗರಣದ ಹಿಂದೆ ಭಾರೀ ಕುಳಗಳ ಕೈವಾಡವಿರುವುದು ಸ್ಪಷ್ಟವಾಗುತ್ತದೆ. ಇಂತಹ ವಂಚನೆ, ಅಕ್ರಮಗಳು ಕೇವಲ ಹಣಕಾಸಿನ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೆ ದೇಶದ ಸುರಕ್ಷೆಯ ದೃಷ್ಟಿಯಿಂದಲೂ ಅತ್ಯಂತ ಗಂಭೀರ ವಿಷಯವಾಗಿರುವುದರಿಂದ ಈ ಹಗರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ಸಮಗ್ರ ಮತ್ತು ನಿಷ್ಪಕ್ಷ ತನಿಖೆ ನಡೆಸುವ ಅಗತ್ಯವಿದೆ.