Advertisement

ಮಹದಾಯಿ ನದಿ ನೀರು ತಿರುಗಿಸುವುದರಿಂದ ಜನಜೀವನದ ಮೇಲೆ ಪರಿಣಾಮ: ಮಧು ಗಾಂವಕರ್

05:41 PM Jan 24, 2023 | Team Udayavani |

ಪಣಜಿ: ಕರ್ನಾಟಕದ ಕಳಸಾ ಉಪನದಿಯಾದ ಮಹದಾಯಿಯನ್ನು ತಿರುಗಿಸುತ್ತಿರುವುದರಿಂದ ಜನಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಪರಿಸರವಾದಿ ಮಧು ಗಾಂವಕರ್ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಪಣಜಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು- ಮಹದಾಯಿಯ ಉಪನದಿಯಾದ ಹಲ್ತಾರಾದಲ್ಲಿ ಕರ್ನಾಟಕ ಅಣೆಕಟ್ಟು ಅಥವಾ ಬ್ಯಾರೇಜ್ ನಿರ್ಮಿಸಿದರೆ, ಈ ಭಾಗದಿಂದ ಬರುವ ನೀರಿಗೆ ತೊಂದರೆಯಾಗುತ್ತದೆ. ನೀರು ಕಡಿಮೆಯಾದರೆ ಭವಿಷ್ಯದಲ್ಲಿ ಗೋವಾದ ವಜರಾ-ಸಕಾಲ ಜಲಪಾತ ಕಣ್ಮರೆಯಾಗುತ್ತದೆ. ಏಕೆಂದರೆ ಹಲ್ತಾರ್ ನಿಂದ ಬರುವ ನೀರು ವಿರ್ಡಿ ಪ್ರದೇಶಕ್ಕೆ ಬರುತ್ತದೆ. ಇದು ಕಟ್ಟಿಕಾ ನಾಲೆಯಲ್ಲಿ ಸಂಗ್ರಹಗೊಂಡು, ನಂತರ ಇತರ ನಾಲೆಗಳನ್ನು ಸೇರಿ ಮುಂದೆ ವಾಳವಂಟಿ ನದಿಗೆ ಹರಿಯುತ್ತದೆ. ಅದೇ ವಾಳವಂಟಿ ನದಿಯು ಕೇರಿ, ಘೋಟೆಲಿ, ಚೆಝಾ ಮೂಲಕ ಹರಿಯುತ್ತದೆ ಮತ್ತು ಅಮೋನಾ ಪ್ರದೇಶದಲ್ಲಿ ಮಹದಾಯಿ (ಮಾಂಡವಿ) ನದಿಯನ್ನು ಸೇರುತ್ತದೆ.

ಹಲ್ತಾರ್ ಮೇಲೆ ಅಣೆಕಟ್ಟು ನಿರ್ಮಿಸಿದರೆ ಈ ಎಲ್ಲ ಪ್ರದೇಶಗಳಿಗೆ ನೀರಿನ ತೊಂದರೆಯಾಗಲಿದೆ. ಮಹಾರಾಷ್ಟ್ರದ ವಿರ್ಡಿ ಗ್ರಾಮಸ್ಥರು ಕರ್ನಾಟಕದ ಈ ನಡೆಯನ್ನು ಅರಿತು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ ಹಲ್ತಾರ್ ಮೇಲೆ ಅಣೆಕಟ್ಟು ನಿರ್ಮಿಸಿದರೆ ಏನಾಗಬಹುದು ಎಂಬ ಬಗ್ಗೆ ಈ ಭಾಗದ ಅನೇಕ ಜನರಿಗೆ ಇನ್ನೂ ತಿಳಿದಿಲ್ಲ. ಈ ಗ್ರಾಮಗಳಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ. ಗೋವಾ ಮತ್ತು ಮಹಾರಾಷ್ಟ್ರದ ಈ ಪ್ರದೇಶದ ಅನೇಕ ಹಳ್ಳಿಗಳು ನೀರಿನ ಮೂಲವನ್ನು ಅವಲಂಬಿಸಿವೆ ಎಂದು ಪರಿಸರವಾಧಿ ಮಧು ಗಾಂವಕರ್ ಹೇಳಿದರು.

ಗೋವಾದಲ್ಲಿ ನೀರು ಕಡಿಮೆಯಾದರೆ ಕೃಷಿ, ತೋಟಗಾರಿಕೆ ಜತೆಗೆ ಜೀವ ವೈವಿಧ್ಯಕ್ಕೂ ಬಿಕ್ಕಟ್ಟು ಎದುರಾಗಲಿದೆ. ಆ ನಿಟ್ಟಿನಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ವಿರ್ಡಿಯಿಂದ ಶಿರೋಳಿ, ಕೇರಿ, ಘೋಟೇಲಿ, ತಾಳೇಖೋಲ್, ಪರ್ಯೆ ಪ್ರದೇಶಗಳಲ್ಲಿ ನೀರು ಕಡಿಮೆಯಾಗಲಿದೆ. ಸಿಹಿ ನೀರು ಕಡಿಮೆಯಾದರೆ ಉಪ್ಪು ನೀರು ನುಗ್ಗುವ ಸಂಭವ ಖಂಡಿತ. ಇದು ಸಿಹಿನೀರಿನ ಮೀನುಗಾರಿಕೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಗಾಂವ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಶ್ರದ್ದಾ ವಾಲ್ಕರ್ ಕೇಸ್; ಪೂನಾವಾಲಾ ವಿರುದ್ಧ 6,629 ಪುಟಗಳ ಚಾರ್ಜ್ ಶೀಟ್ ದಾಖಲು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next