ಬೆಂಗಳೂರು: ಬಿಜೆಪಿ ಪ್ರಧಾನ ಕಚೇರಿ ಮುಂಭಾಗದಲ್ಲಿ ಮಹದಾಯಿ ಹೋರಾಟಗಾರರು ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿರುವ ಧರಣಿ ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು, ಏತನ್ಮಧ್ಯೆ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆಯಬೇಕಿದ್ದ ಕೋರ್ ಕಮಿಟಿ ಸಭೆಯನ್ನು ದಿಢೀರ್ ಆಗಿ ಬಿಎಸ್ ವೈ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.
ಮಹದಾಯಿ ವಿಚಾರದಲ್ಲಿ ಬಿಎಸ್ ಯಡಿಯೂರಪ್ಪನವರು ತಮ್ಮ ಸ್ಪಷ್ಟ ನಿಲುವನ್ನು ತಿಳಿಸಬೇಕೆಂದು ಆಗ್ರಹಿಸಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರು ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ 11ಗಂಟೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಲು ಬಿಜೆಪಿ ತೀರ್ಮಾನಿಸಿತ್ತು, ಆದರೆ ಮಹದಾಯಿ ಹೋರಾಟಗಾರರ ಧರಣಿ ಹಾಗೂ ಹೋರಾಟಗಾರರಿಗೆ ಸ್ಯಾಂಡಲ್ ವುಡ್ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್:
ಬಿಜೆಪಿ ಕೋರ್ ಕಮಿಟಿ ಸಭೆಗೆ ಆಗಮಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಮುತ್ತಿಗೆ ಹಾಕಲು ಮಹದಾಯಿ ಹೋರಾಟಗಾರರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಹೋರಾಟಗಾರರು ಮುತ್ತಿಗೆ ಹಾಕದಂತೆ ತಪ್ಪಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ದಿಢೀರ್ ಸ್ಥಳ ಬದಲಾವಣೆ:
ಮಹದಾಯಿ ಹೋರಾಟಗಾರರಿಂದ ನುಣುಚಿಕೊಳ್ಳಲು ಬಿಜೆಪಿ ಮುಖಂಡರು ಕೊನೆ ಕ್ಷಣದಲ್ಲಿ ಕೋರ್ ಕಮಿಟಿ ಸಭೆಯನ್ನು ಬಿಜೆಪಿ ಕಚೇರಿಯಿಂದ ಬಿಎಸ್ ವೈ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಪಿಯೂಷ್ ಗೋಯಲ್, ಅರವಿಂದ ಲಿಂಬಾವಳಿ, ಮುರಳೀಧರ ರಾವ್, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ.