Advertisement

ಬದ್ಧತೆಯಿದ್ರೆ ಟ್ರಿಬ್ಯುನಲ್‌ಗೆ ಪ್ರಮಾಣ ಪತ್ರ ಸಲ್ಲಿಸಿ

06:00 AM Dec 25, 2017 | Team Udayavani |

ಹುಬ್ಬಳ್ಳಿ: “ರಾಜ್ಯಕ್ಕೆ ಮಹದಾಯಿ ನೀರು ವಿಚಾರದಲ್ಲಿ ಗೋವಾ ಮಾತುಕತೆಗೆ ನಾಳೆಯೇ ಕರೆದರೂ ಹೋಗಲು ಸಿದ್ಧನಿದ್ದೇನೆ. ಬಿಜೆಪಿ ನಾಯಕರಿಗೆ ಬದ್ಧತೆ ಇದ್ದರೆ, ಗೋವಾ ಮುಖ್ಯಮಂತ್ರಿಯಿಂದ ಸಹಮತವಿದೆ ಎಂದು ನ್ಯಾಯಾಧಿಕರಣಕ್ಕೆ ಅಫಿಡೆವಿಟ್‌ ಸಲ್ಲಿಸುವಂತೆ ಮಾಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

Advertisement

ಇಲ್ಲಿನ ಸೆಟ್ಲಮೆಂಟ್‌ನ ಯಂಗ್‌ಸ್ಟಾರ್‌ ಕ್ರಿಕೆಟ್‌ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ, ಸೌಲಭ್ಯಗಳ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಬರೆದ ಪತ್ರದ ಆಧಾರದಲ್ಲಿ, ಶಿಷ್ಟಾಚಾರ, ಪ್ರತಿಷ್ಠೆ ಬದಿಗಿರಿಸಿ ರಾಜ್ಯದ ಹಿತದೃಷ್ಟಿಯಿಂದ ಮಾತುಕತೆಗೆ ನಾವು ಸಿದ್ಧ. ಪತ್ರದ ಹಿನ್ನೆಲೆಯಲ್ಲಿ ನಾನು ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಂದ ಪತ್ರ ಬರೆಯಲಾಗಿದೆ. ಶಿಷ್ಟಾಚಾರದಂತೆ ನನಗೆ ಅವರು ಪತ್ರ ಬರೆಯದಿದ್ದರೂ ಪರವಾಗಿಲ್ಲ. ನಮ್ಮ ಜನಕ್ಕೆ ನೀರು ಬಂದರೆ ಸಾಕು’ ಎಂದರು.

ಕುಡಿಯುವ ನೀರು ನೀಡಲು ಸಹಮತವಿದೆ ಎಂದು ಪತ್ರ ಬರೆಯುವ ಗೋವಾ ಮುಖ್ಯಮಂತ್ರಿ, ಮಾತುಕತೆಗೆ ದಿನ, ಸ್ಥಳ ನಿಗದಿಪಡಿಸಿ ಎಂದರೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ನಾವು ಯಾವುದೇ ಮಾತುಕತೆಗೆ ಸಿದ್ಧವಿಲ್ಲ ಎಂದು ಹೇಳಿದ್ದಾರೆ. ಇದು ರಾಜಕೀಯವಲ್ಲವೇ? ಬಿಜೆಪಿಯವರಿಗೆ ಜನರ ಸಮಸ್ಯೆ ಇತ್ಯರ್ಥಕ್ಕಿಂತ ರಾಜಕೀಯವೇ ಮುಖ್ಯ ಎಂಬುದು ತಿಳಿಯುತ್ತಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬರೆದ ಪತ್ರವನ್ನು ರಾಜ್ಯ ಸರಕಾರ ದಾಖಲೆಯೆಂದು ಪರಿಗಣಿಸಿ ನ್ಯಾಯಾಧಿಕರಣಕ್ಕೆ ನೀಡಲು ಮುಂದಾದರೆ ನ್ಯಾಯಾಧಿಕರಣ ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಕನಿಷ್ಠ ಜ್ಞಾನವೂ ಯಡಿಯೂರಪ್ಪ ಹಾಗೂ ಜಗದೀಶ್‌  ಶೆಟ್ಟರ್‌ ಅವರಿಗೆ ಇದ್ದಂತಿಲ್ಲ. ಎವಿಡೆನ್ಸ್‌ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದರು.

ಪರ್ರಿಕರ್‌ ಬರೆದ ಪತ್ರದಲ್ಲಿ 7.56ಟಿಎಂಸಿ ಅಡಿ ನೀರು ನೀಡುವುದಾಗಿ ಸಹಮತ ತೋರಿದ ಯಾವುದೇ ಉಲ್ಲೇಖವಿಲ್ಲ. ರಾಜ್ಯದ  ಬಿಜೆಪಿ ನಾಯಕರಿಗೆ ಮಹದಾಯಿ ವ್ಯಾಪ್ತಿಯ  ಜನರ ಕಾಳಜಿ ಹಾಗೂ ಬದ್ಧತೆ ಇದ್ದರೆ, ತಮ್ಮದೇ ಪಕ್ಷದ ಗೋವಾ ಮುಖ್ಯಮಂತ್ರಿ ಅವರಿಂದ ಕುಡಿಯುವ ಉದ್ದೇಶಕ್ಕೆ 7.56 ಟಿಎಂಸಿ ಅಡಿ ನೀರು ನೀಡಲು ಸಹಮತವಿದೆ ಎಂದು ನ್ಯಾಯಾಧಿಕರಣಕ್ಕೆ ನೇರವಾಗಿ ಅಫಿಡೆವಿಟ್‌ ಸಲ್ಲಿಸುವಂತೆ ಮಾಡಲಿ. ಫೆಬ್ರವರಿಯಲ್ಲಿ  ಮಹದಾಯಿ ನೀರು ವಿವಾದದ ನ್ಯಾಯಾಧಿಕರಣದಲ್ಲಿ ಅಂತಿಮ ವಿಚಾರಣೆಗೆ ಬರಲಿದ್ದು, ಅಷ್ಟರೊಳಗೆ ಬಿಜೆಪಿಯವರು ಜನರಿಗೆ ನೀರು ಒದಗಿಸುವ ಪ್ರಮಾಣಿಕತೆ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

Advertisement

ಆಡಳಿತ ವಿರೋಧಿ
ಅಲೆ ಇಲ್ಲವೇ ಇಲ್ಲ

ಕಾಂಗ್ರೆಸ್‌ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಹಾಗೂ  ಪ್ರಣಾಳಿಕೆಯಲ್ಲಿ ಇಲ್ಲದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅನ್ನಭಾಗ್ಯ ಇನ್ನಿತರೆ ಯೋಜನೆಯಡಿ ಸುಮಾರು 1.20 ಕೋಟಿ ಕುಟುಂಬಗಳಿಗೆ ಸೌಲಭ್ಯ ಹೋಗಿದ್ದು, 1.82ಲಕ್ಷ  ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ. ಬಿಜೆಪಿಯವರು 2008ರ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳಲ್ಲಿ  ಎಷ್ಟು ಈಡೇರಿಸಿದ್ದರು ಎಂಬುದರ ಲೆಕ್ಕ ಕೊಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.  ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲವೇ ಇಲ್ಲ. ಬಿಜೆಪಿಯವರು ಏನೇ ತಿಪ್ಪರಾಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ಅವರ ಮಿಷನ್‌ 150 ಠುಸ್‌ ಆಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next