ಪಣಜಿ: ಗೋವಾ ವಿಧಾನಸಭಾ ಅಧಿವೇಶನ ಕಲಾಪದಲ್ಲಿ ಮಹದಾಯಿ ಕುರಿತ ವಿಷಯದ ಚರ್ಚೆ ಮುಂದುವರೆದಿದೆ. ಗುರುವಾರ ಸದನದಲ್ಲಿ ಮಹದಾಯಿ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಶಾಸಕ ವೀರೇಶ್ ಬೋರ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರವನ್ನು ಓದಲು ಆರಂಭಿಸಿದರು. ಇದೇ ವೇಳೆ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಬೋರ್ಕರ್ ಅವರ ಮೈಕ್ ಬಂದ್ ಮಾಡಿದರು. ಬೋರ್ಕರ್ ಅವರು ಪತ್ರದೊಂದಿಗೆ ಸ್ಪೀಕರ್ ಆಸನಕ್ಕೆ ಹೋದರು, ಈ ವೇಳೆ ಹಾಲ್ ಮಾರ್ಷಲ್‍ಗಳು ಅವರನ್ನು ತಡೆದು ಸಭಾಂಗಣದಿಂದ ಹೊರಗೆ ಕರೆದೊಯ್ದರು.
ಮಹದಾಯಿಗಾಗಿ ವಿಧಾನಸಭೆಯಲ್ಲಿ ಮಹಿಳಾ ಶಾಸಕರ ಧ್ವನಿ..
ಮಹದಾಯಿ ಕುರಿತು ಮಾತನಾಡಿದ ತಾಲಿಗಾಂವ ಶಾಸಕಿ ಜೆನ್ನಿಫರ್ ಮೊನ್ಸೆರಾಟ್, ಪರ್ಯೆ ಶಾಸಕಿ ದಿವ್ಯಾ ರಾಣೆ ಮತ್ತು ಶಿವೋಲಿ ಶಾಸಕಿ ದಿಲಾಯ್ಲಾ ಲೋಬೋ ಅವರು ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸಬೇಕು ಮತ್ತು ಮಹದಾಯಿಗಾಗಿ ಒಂದಾಗಬೇಕು ಎಂದು ಪ್ರತಿಪಕ್ಷಗಳನ್ನು ಒತ್ತಾಯಿಸಿದರು.
ವಿರೋಧಿಗಳು ರಾಜಕೀಯ ಮಾಡುವ ಮೂಲಕ ಸ್ವಾರ್ಥ ಸಾಧಿಸಲು ಯತ್ನಿಸುತ್ತಿದ್ದಾರೆ: ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ಗುರುವಾರ ಅಧಿವೇಶನದಲ್ಲಿ ಮಹದಾಯಿ ವಿಚಾರವಾಗಿ ವಿಧಾನಸಭೆಯಲ್ಲಿ ಕೆಲಕಾಲ ವಾದ ಮಂಡಿಸಿದ ಸಚವ ವಿಶ್ವಜಿತ್ ರಾಣೆ ಪ್ರತಿಪಕ್ಷಗಳನ್ನು ಸಮಾಧಾನಪಡಿಸಲು ಯತ್ನಿಸಿದರು. ಗೋವಾ ರಾಜಕೀಯದಲ್ಲಿ ಸದ್ಯ ಗೊಂದಲ ಸ್ಥಿತಿ ನಿರ್ಮಾಣವಾಗಿದ್ದು, ಸಮಸ್ಯೆ ಬಗೆಹರಿಸುವ ಬದಲು ಪ್ರತಿಪಕ್ಷಗಳು ತಮ್ಮ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿವೆ. ನಮ್ಮ ಸರ್ಕಾರ ಮಹದಾಯಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಚರ್ಚಿಸಲು ಸರ್ಕಾರ ಸಭೆ ಕರೆದರೆ, ಪ್ರತಿಪಕ್ಷಗಳ ಶಾಸಕರು ಯಾರೂ ಸಭೆಗೆ ಹಾಜರಾಗಲಿಲ್ಲ. ಗೋವಾದ ನಾಗರಿಕರು ಮತ್ತು ಸಮಸ್ಯೆಗಳ ಬಗ್ಗೆ ನಿಮಗೆ ನಿಜವಾಗಿಯೂ ಕಾಳಜಿ ಇದ್ದರೆ, ನೀವು ಮುಖ್ಯಮಂತ್ರಿಗೆ ಸಹಾಯ ಮಾಡಿ ಮತ್ತು ಈ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡಬೇಕು ಎಂದು ಸಚಿವ ವಿಶ್ವಜಿತ್ ರಾಣೆ ಹೇಳಿದರು.