ಪಣಜಿ: ‘ಗೋವಾದ ಜನರು ಅನ್ನ-ಪಾನೀಯದಿಂದ ಸಂತಸಗೊಂಡಿದ್ದಾರೆ, ಮಹದಾಯಿಗಾಗಿ ಯಾವುದೇ ಆಂದೋಲನವಿಲ್ಲ. ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, 450 ವರ್ಷಗಳ ಕಾಲ ಆಳಿದ ಪೋರ್ಚುಗೀಸರನ್ನು ಗೋವಾದ ಜನರು ಹೊರಹಾಕಿದ್ದು ಅವರಿಗೆ ಗೊತ್ತಿಲ್ಲ ಎಂದು ಮಹದಾಯಿ ಹೋರಾಟಗಾರ ಹೃದಯನಾಥ್ ಶಿರೋಡ್ಕರ್ ಕಿಡಿ ಕಾರಿದ್ದಾರೆ.
ಮಹದಾಯಿ ಉಳಿಸಲು ಗೋವಾದ ವಿರ್ಡಿಯಲ್ಲಿ ಜನಾಂದೋಲನ ನಡೆಯಿತು. ಈ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಇಂದಿನ ಮಹಾದಾಯಿ ಬಚಾವೋ ಚಳವಳಿಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಿದರೂ ಆಡಳಿತಾರೂಢ ಬಿಜೆಪಿ ಬೆಂಬಲಿಸಲಿಲ್ಲ.ಗಾಬರಿ ಪಡುವ ಅಗತ್ಯವಿಲ್ಲ ಎಂದ ಮುಖ್ಯಮಂತ್ರಿಗಳೇ ಹೆದರಿದ್ದಾರೆ ಎಂದರು.
ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪರಿಸರವಾದಿಗಳು, ಸಮಾಜಸೇವಕರು ಆಯೋಜಿಸಿದ್ದ ಈ ಸಭೆಯಲ್ಲಿ ರಾಜ್ಯದ ವಿರೋಧ ಪಕ್ಷಗಳ ಶಾಸಕರೂ ಪಾಲ್ಗೊಂಡಿದ್ದರು. ಸಾರ್ವಜನಿಕ ಚಳವಳಿಯ ಸಭೆಯಲ್ಲಿ ಹಿರಿಯ ಸಾಹಿತಿ ದಾಮೋದರ್ ಮಾವ್ಜೋ ಮಹದಾಯಿ ಮಹತ್ವವನ್ನು ವಿವರಿಸಿದರು. ಅಲ್ಲದೆ, ಮಹದಾಯಿ ರಕ್ಷಣೆಗೆ ಗೋವಾದ ಎಲ್ಲ ಜನರೂ ಒಗ್ಗೂಡಬೇಕು ಎಂದು ಮನವಿ ಮಾಡಿದರು.
ಹದಿನೈದು ದಿನಗಳಲ್ಲಿ ಡಿಪಿಆರ್ ಹಿಂಪಡೆಯದಿದ್ದರೆ ರಾಜೀನಾಮೆ ನೀಡಿ
ಹದಿನೈದು ದಿನಗಳಲ್ಲಿ ಕೇಂದ್ರದಿಂದ ಅನುಮೋದನೆ ಪಡೆದ ಡಿಪಿಆರ್ ಹಿಂಪಡೆಯದಿದ್ದರೆ ಗೋವಾ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಅವರು ಡಿಪಿಆರ್ ಹಿಂತೆಗೆದುಕೊಳ್ಳದಿದ್ದರೂ ರಾಜೀನಾಮೆ ನೀಡಿದರೆ, ಗೌರವಯುತವಾಗಿ ಇರುತ್ತದೆ. ಈ ನಿಟ್ಟಿನಲ್ಲಿ ನಾವು ನಿಮ್ಮೊಂದಿಗಿದ್ದೇವೆ. ಗೋವಾದ ಏಕತೆಯನ್ನು ಇಡೀ ದೇಶಕ್ಕೆ ತೋರಿಸೋಣ. ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ ಹೇಳಿದರು.
Related Articles
ಅಲ್ಲದೆ 15 ದಿನದೊಳಗೆ ಈ ಹೋರಾಟ ಯಶಸ್ವಿಯಾಗದಿದ್ದರೆ ಗೋವಾ ಬಂದ್‍ಗೆ ಕರೆ ನೀಡುತ್ತೇವೆ ಎಂದು ಸರ್ದೇಸಾಯಿ ಕೂಡ ಹೇಳಿದರು.
ರಾಜ್ಯದ 40 ಶಾಸಕರ ಪೈಕಿ 06 ಶಾಸಕರ ಹಾಜರಿ
ಮಹದಾಯಿ ಜನ ಆಂದೋಲನ ಸಭೆಯಲ್ಲಿ ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ, ಎಎಪಿ ಶಾಸಕ ಕ್ರೂಜ್ ಸಿಲ್ವಾ, ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವ್, ಎಎಪಿ ಪಕ್ಷದ ನಾಯಕ ವೆಂಜಿ ವಿಗಾಸ್ ಮತ್ತು ಕಾಂಗ್ರೆಸ್ ಶಾಸಕರಾದ ಆಲ್ಟನ್ ಡಿಕೋಸ್ಟಾ ಮತ್ತು ಕಾರ್ಲೋಸ್ ಫೆರೇರಾ ಉಪಸ್ಥಿತರಿದ್ದರು. ಈ ಸಭೆಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಇತರ ಸಚಿವರು, ಶಾಸಕರನ್ನೂ ಆಮಂತ್ರಿಸಲಾಗಿತ್ತು ಎನ್ನಲಾಗಿದೆ. ಈ ಮಹದಾಯಿ ಬಚಾವೋ ಆಂದೋಲನಕ್ಕೆ ಗೋವಾದ ಜನರಿಂದ ಸ್ವಯಂಪ್ರೇರಿತ ಸ್ಪಂದನೆ ಸಿಕ್ಕಿದ್ದು, ಮಹದಾಯಿ ಉಳಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂತು.