ಶೃಂಗೇರಿ: ಶರನ್ನವರಾತ್ರಿಯ ಮುನ್ನಾದಿನ ಮಹಾಲಯ ಅಮಾವಾಸ್ಯೆಯಂದು ದಕ್ಷಿ ಣಾಮ್ನಾಯ ಶೃಂಗೇರಿ ಪೀಠದ ಅಧಿದೇವತೆ ಶ್ರೀಶಾರದಾಂಬೆಯ ಮಹಾಭಿಷೇಕ ಹಾಗೂ 34ನೇ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಿತು. ಶಾರದಾ ಪೀಠದಲ್ಲಿ ಶನಿವಾರ ಬೆಳಗ್ಗೆ ಶಾರದೆಗೆ ಪಂಚಾಮೃತ ಅಭಿಷೇಕ, 108 ಶ್ರೀ ಸೂಕ್ತ ಪಠಣ ಹಾಗೂ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ ನಡೆಯಿತು.
ಶಾರದಾ ಪೀಠದ ಕುಂಭಾಭಿಷೇಕ ಮಹೋತ್ಸವದ ದಿನ, ಮಹಾಲಯ ಅಮಾವಾಸ್ಯೆ ಹಾಗೂ ಭೂಮಿ ಹುಣ್ಣಿಮೆ ಹೀಗೆ ತಾಯಿ ಶಾರದೆಗೆ ವರ್ಷದಲ್ಲಿ ಮೂರು ದಿನ ಮಾತ್ರ ಮಹಾಭಿಷೇಕ ನಡೆಯಲಿದೆ. ಮಹಾಲಯ ಅಮಾವಾಸ್ಯೆ ದಿನದಂದು ಶಾರದೆಯ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ. ಹೀಗಾಗಿ, ನವರಾತ್ರಿ ಉತ್ಸವದ ಮುನ್ನಾದಿನ ನಡೆಯುವ ಮಹಾಭಿಷೇಕದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಇಂದಿನಿಂದ ನವರಾತ್ರಿ ಉತ್ಸವ: ಶಾರದಾ ಪೀಠದ ಆರಾಧ್ಯ ದೇವತೆ ಶ್ರೀ ಶಾರದಾಂ ಬೆಯ ಶರನ್ನವರಾತ್ರಿ ಉತ್ಸವ ಭಾನುವಾರ ದಿಂದ ಆರಂಭಗೊಂಡು ಅ.9 ರಂದು ಶ್ರೀ ಶಾರದಾಂಬಾ ಮಹಾರಥೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.
ಭಾನುವಾರದ ಕಾರ್ಯಕ್ರಮ: ಶ್ರೀ ಶಾರದಾಂಬೆಗೆ ಹಂಸವಾಹಿನಿ ಅಲಂಕಾರ, ವೇದಪುರೇಣೇತಿಹಾಭಾಷ್ಯ ಪಾರಾಯಣ, ಉಭಯ ಶ್ರೀಗಳಿಂದ ಶ್ರೀ ಶಾರಾದೆಗೆ ವಿಶೇಷ ಪೂಜೆ, ಸಂಜೆ ಅಮ್ಮನವರ ಬೀದಿ ಉತ್ಸವ, ರಾತ್ರಿ ಮಠದ ಒಳ ಪ್ರಾಂಗಣದಲ್ಲಿ ಜಗದ್ಗುರುಗಳ ದರ್ಬಾರ್, ದೇವಿಗೆ ಬಂಗಾರದ ದಿಂಡೀ ಉತ್ಸವ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ನಡೆಯಲಿವೆ.
ಆರಾಧನಾ ಮಹೋತ್ಸವ: ಶಾರದಾ ಪೀಠದ 34ನೇ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳ ಆರಾಧನಾ ಮಹೋತ್ಸವ ನರಸಿಂಹವನದ ಅ ಧಿಷ್ಠಾನ ಮಂದಿರದಲ್ಲಿ ಶನಿವಾರ ನಡೆಯಿತು. ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಪರಮ ಗುರುಗಳಾದ ಚಂದ್ರಶೇಖರ ಭಾರತೀ ಸ್ವಾಮಿಗಳು 1954ರ ಭಾದ್ರಪದ ಬಹುಳ ಅಮಾವಾಸ್ಯೆಯಂದು ಬ್ರಹ್ಮೈಕ್ಯರಾಗಿದ್ದು, ಮಹಾಸ್ವಾಮಿಗಳ 65ನೇ ಆರಾಧನೆಯ ದಿನ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮಿಗಳು ಚಂದ್ರಶೇಖರ ಭಾರತೀ ಅಧಿಷ್ಠಾನ ಮಂದಿರದಲ್ಲಿ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸಿದರು. ಕಿರಿಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಉಪಸ್ಥಿತರಿದ್ದರು.