Advertisement

ಮೈಸೂರು ಚಾಮುಂಡಿ ಬೆಟ್ಟದ ಮಹಾನಂದಿಗೆ ಮಹಾಭಿಷೇಕ

09:47 PM Nov 13, 2022 | Team Udayavani |

ಮೈಸೂರು: ಕಾರ್ತಿಕ ಮಾಸದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿರುವ ನಂದಿ ವಿಗ್ರಹಕ್ಕೆ 17ನೇ ವರ್ಷದ ಮಹಾಭಿಷೇಕ ಭಾನುವಾರ ಸರಳವಾಗಿ ನೆರವೇರಿತು.

Advertisement

ಭಾನುವಾರ ಮುಂಜಾನೆ ಬೆಟ್ಟದ ಬಳಗ ಚಾರಿಟಬಲ್‌ ಟ್ರಸ್ಟ್‌ನಿಂದ ಆಯೋಜಿಸಿದ್ದ ಪೂಜಾ ಮಹೋತ್ಸವದಲ್ಲಿ ಖಾದ್ಯ, ಮಧುಪರ್ಕ, ಖರ್ಜೂರ, ಅರಿಶಿಣ, ಕುಂಕುಮ, ಹಾಲು, ತುಪ್ಪ, ಜೇನುತುಪ್ಪ ಸೇರಿ 38 ಬಗೆಯ ವಸ್ತುಗಳಿಂದ ವಿಗ್ರಹಕ್ಕೆ ವೇದಘೋಷಗಳೊಂದಿಗೆ ಅಭಿಷೇಕ ಮಾಡಲಾಯಿತು. ನಂದಿ ವಿಗ್ರಹಕ್ಕೆ ಹೊಂದಿಕೊಂಡಿರುವ ಬೆಟ್ಟದ ರಸ್ತೆ ದುರಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿತ್ತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸ ಮಠದ ಶ್ರೀ ಚಿದಾನಂದ ಸ್ವಾಮೀಜಿ ನಂದಿಯ ಮಹಾಮಜ್ಜನಕ್ಕೆ ಚಾಲನೆ ನೀಡಿದರು. ನಂತರ ಹಾಲು, ಮೊಸರು ಹಾಗೂ ಭಸ್ಮಗಳಿಂದ ಅಭಿಷೇಕ ಮಾಡುತ್ತಿದ್ದಂತೆ ಕಪ್ಪು ಶಿಲಾನಂದಿ ವಿಗ್ರಹ ಶ್ವೇತವರ್ಣಕ್ಕೆ ಬದಲಾದರೆ, ಅರಿಶಿಣ ಹಾಗೂ ಚಂದನದ ಅಭಿಷೇಕದ ಸಮಯದಲ್ಲಿ ವಿಗ್ರಹ ಹಳದಿ ಬಣ್ಣಕ್ಕೆ ತಿರುಗಿತು. ಕುಂಕುಮದ ಅಭಿಷೇಕದಲ್ಲಿ ವಿಗ್ರಹ ಕೆಂಪು ಬಣ್ಣಕ್ಕೆ ತಿರುಗಿದ್ದನ್ನು ಕಂಡು ಜನರು ಸಂತಸಗೊಂಡರು.

ಮೆಟ್ಟಿಲು ಮೂಲಕ ಬಂದ ಭಕ್ತರು: ನಂದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದಲ್ಲಿ ಭೂಕುಸಿತವಾಗಿದ್ದು, ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಕಳೆದ ಒಂದು ವರ್ಷದಿಂದ ಈ ರಸ್ತೆಯಲ್ಲಿ ವಾಹನ ಸಂಚಾರ, ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆ ನಂದಿ ವಿಗ್ರಹಕ್ಕೆ ಮುಖ್ಯ ದಾರಿ ಆಗಿರುವ ಮೆಟ್ಟಿಲು ಮೂಲಕ ಭಕ್ತರು ಆಗಮಿಸಿದರು. ಇದನ್ನು ಹೊರತುಪಡಿಸಿ ತಾವರೆಕಟ್ಟೆ, ಉತ್ತನಹಳ್ಳಿ ರಸ್ತೆ ಕಡೆಯಿಂದ ವಾಹನಗಳಲ್ಲಿ ಆಗಮಿಸಿ ಮಹಾಭಿಷೇಕದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next