Advertisement

ಮಹಾವಿಕಾಸ್‌ ಆಘಾಡಿ ಸರಕಾರ ಐದು ವರ್ಷ ಪೂರ್ಣಗೊಳಿಸಲಿದೆ : ಶರದ್‌ ಪವಾರ್‌

09:46 AM Feb 17, 2020 | Team Udayavani |

ಜಲ್ಗಾಂವ್‌:ಮಹಾವಿಕಾಸ್‌ ಆಘಾಡಿಯ ಸರಕಾರವು ಕುಸಿಯುತ್ತದೆ ಎಂಬ ಭವಿಷ್ಯವಾಣಿಯನ್ನು ಬಿಜೆಪಿ ನಾಯಕರು ಅದೆಷ್ಟೋ ಸಾರಿ ಹೇಳಿದರೂ ಕೂಡ ಮಹಾವಿಕಾಸ್‌ ಆಘಾಡಿ ನೇತೃತ್ವದ ಸರಕಾರ ಮಾತ್ರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹೇಳಿದ್ದಾರೆ.

Advertisement

ನಾವು ಗ್ರಾಮೀಣ ಭಾಗದವರು, ನಮಗೆ ಜ್ಯೋತಿಷ್ಯ ಅರ್ಥವಾಗುವುದಿಲ್ಲ. ಜ್ಯೋತಿಷ್ಯ ತಿಳಿದಿರುವ ಬಹುಸಂಖ್ಯೆಯ ಜನರು ಬಿಜೆಪಿಯಲ್ಲಿದ್ದಾರೆ. ಆದರೆ ಅವರ ಭವಿಷ್ಯವು ಇಲ್ಲಿಯ ತನಕ ನಿಜವಾಗಿಲ್ಲ ಮತ್ತು ಇನ್ನೂ ನಾಲ್ಕು ವರ್ಷಗಳವರೆಗೆ ಭವಿಷ್ಯವು ನಿಜವಾಗುವುದಿಲ್ಲ ಎಂದು ಶರದ್‌ ಪವಾರ್‌ ಹೇಳಿದ್ದಾರೆ.

ಜೈನ ಇರಿಗೇಶ್‌ ಆಯೋಜಿಸಿದ್ದ ಪ್ರಶಸ್ತಿ ವಿತರಣಾ ಸಮಾರಂಭದ ಜೊತೆಗೆ ಮಹಾವಿಕಾಸ್‌ ಆಘಾಡಿಯ ರೈತರ ಸಮ್ಮೇಳನದ ಎರಡನೇ ದಿನ ಶರದ್‌ ಪವಾರ್‌ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ  ಅವರು, ಬಿಜೆಪಿ ವಿರುದ್ಧ ಟೀಕೆ ವ್ಯಕ್ತಪಡಿಸಿದರು. ಈಗ ಬಿಜೆಪಿ ‘ಮಿಷನ್‌ ಲೋಟಸ್‌’ ಎಂಬ ಅಭಿಯಾನವನ್ನು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದ ಯಾವುದೇ ಸಮಸ್ಯೆ ನಮಗಾಗುವುದಿಲ್ಲ.

ಮಧ್ಯಂತರ ಚುನಾವಣೆಗಳೂ ನಡೆಯಲಿವೆ ಎಂಬ ಚರ್ಚೆಯಿದೆ. ಆದರೆ ಈ ಚರ್ಚೆಯನ್ನು ಯಾರು ತಂದರು ಎಂಬುದು ನನಗೆ ತಿಳಿದಿಲ್ಲ. ಈ ಮಧ್ಯಂತರ ಚರ್ಚೆ ನನಗೆ ಅರ್ಥಹೀನವಾಗಿದೆ ಎಂದು ಪವಾರ್‌ ಹೇಳಿದ್ದಾರೆ.

ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಇದು ದುರದೃಷ್ಟಕರವಾಗಿದೆ ಯಾವ ಸರಕಾರವೇ ಇರಲಿ, ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರವನ್ನು ತಡೆಯಲು ಪ್ರಯತ್ನಿಸಬೇಕು, ಇಂತಹ ಅರಹಿತಕರ ಘಟನೆಗಳು ಯಾವುದೇ ಸರಕಾರಕ್ಕೆ ಶೋಭಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಈ ಮಧ್ಯೆ, ಸಿಎಎ ಮತ್ತು ಎನ್‌ಆರ್‌ಸಿ ಕಾನೂನಿನ ಕುರಿತು ಸರಕಾರದ ನಿರ್ಧಾರ ಬಗ್ಗೆ ಮಾತನಾಡಿದ ಶರದ್‌ ಪವಾರ್‌ ಎನ್‌ಸಿಪಿಯು ಕೇಂದ್ರದ ನಿರ್ಣಯವನ್ನು ವಿರೋಧಿಸುತ್ತಿದೆ. ಸಂಸತ್ತಿನಲ್ಲಿ ನಾವು ಈ ಕಾನೂನಿನ ವಿರುದ್ಧ ಮತ ಚಲಾಯಿಸಿದ್ದೇವೆ ಎಂದು ಹೇಳಿದರು.

ಈ ವೇಳೆ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನಾಯಕತ್ವವನ್ನು ಪವಾರ್‌ ಟೀಕಿಸಿದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎಂಟು ಸ್ಥಾನಗಳು ಮಾತ್ರ ದೊರೆತಿವೆ. ಇಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ನಡೆಸಿತು.

ಈ ಚುನಾವಣೆಗಾಗಿ ಬಿಜೆಪಿಯು ತನ್ನ ಸಂಪೂರ್ಣ ಶಕ್ತಿ, ಹಣವನ್ನು ಹೂಡಿಕೆ ಮಾಡಿತ್ತು. ದೇಶಾದ್ಯಂತದ ಮಾಜಿ ಸಚಿವರು, ನಾಯಕರನ್ನು ದಿಲ್ಲಿಯ ಚುನಾವಣೆಯ ಕೆಲಸದಲ್ಲಿ ತೊಡಗಿದ್ದರು. ಆದರೆ, ಕೇಜ್ರಿವಾಲ್‌ ಅವರು ಬಹುಮತದಿಂದ ಗೆದ್ದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಿಂದೂ-ಮುಸ್ಲಿಂ ವಾತಾವರಣವನ್ನು ಸೃಷ್ಟಿಸಿತ್ತು. ದಿಲ್ಲಿಯ ಮತದಾರರು ಬಿಜೆಪಿಯ ಈ ಪಿತೂರಿಯನ್ನು ತಳ್ಳಿಹಾಕಿದ್ದಾರೆ. ಎಲ್ಲಾ ಧರ್ಮದ ಜನರು, ದಿಲ್ಲಿಯಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ದಿಲ್ಲಿ ನಗರವನ್ನು ಮಿನಿ ಇಂಡಿಯಾ ಎಂದು ಕರೆಯಲಾಗುತ್ತದೆ. ಈ ಮಿನಿ ಇಂಡಿಯಾವು ಬಿಜೆಪಿ ವಿರುದ್ಧ ತನ್ನ ನಿಲುವು ತೋರಿದೆ. ಆದ್ದರಿಂದ, ನಾನು ದಿಲ್ಲಿ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದು ಪವಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next