ಕಾಸರಗೋಡು: ನಾಡಿನಾ ದ್ಯಂತ ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಶಿವರಾತ್ರಿ ಮಹೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾ ಯಿತು. ಶಿವರಾತ್ರಿ ಮಹೋತ್ಸವದ ಅಂಗವಾಗಿ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ, ಧಾರ್ಮಿಕ ಕಾರ್ಯಕ್ರಮಗಳು ನvದವು. ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ಭಕ್ತರು ನೆರೆದಿದ್ದು, ವಿಶೇಷ ಪೂಜೆ ಸಲ್ಲಿಸಿದರು. ಅಭಿಷೇಕ, ಶಿವಸ್ತುತಿ ಮೊದಲಾದವುಗಳನ್ನು ನಡೆಸಿದರು.
ಭಕ್ತರು ಉಪವಾಸವಿದ್ದು, ಶಿವನ ಧ್ಯಾನದಲ್ಲಿ ತೊಡಗಿದ್ದರು. ದೇವಸ್ಥಾನ, ಮಂದಿರಗಳಿಗೆ ಭೇಟಿ ನೀಡಿದ ಭಕ್ತಾದಿಗಳು ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥತೆಯನ್ನು ಅನುಭವಿಸಿದರು.
ಇತಿಹಾಸ ಪ್ರಸಿದ್ಧ ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳ ಸಂದಣಿ ನೆರೆದಿತ್ತು. ವಿಶೇಷ ಪ್ರಾರ್ಥನೆ ಸಲ್ಲಿಸಿದ ಭಕ್ತಾದಿಗಳು ಅಭಿಷೇಕ ನಡೆಸಿದರು.
ನುಳ್ಳಿಪ್ಪಾಡಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋ ತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬೆಳಗ್ಗೆ ಗಣಪತಿ ಹೋಮ, ಸಂಜೆ ದೀಪ ಪ್ರತಿಷ್ಠೆ ಹಾಗು ವಿವಿಧ ಭಜನಾ ಸಂಘಗಳಿಂದ ಭಜನೆ, ರಾತ್ರಿ ಶ್ರೀ ಸನ್ನಿಧಿಯಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಕಾಸರಗೋಡು ಜಿಲ್ಲೆಯ ಪರಕ್ಕಿಲ ಶ್ರೀ ಮಹಾದೇವ ದೇವಸ್ಥಾನ, ದೇವರಗುಡ್ಡೆ ಶ್ರೀ ಶೈಲ ಮಹಾದೇವ ದೇವಸ್ಥಾನ, ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನ, ಚಿಗುರುಪಾದೆ ಮಹಾಲಿಂಗೇಶ್ವರ ದೇವಸ್ಥಾನ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ, ಪುತ್ತಿಗೆ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವರ್ಕಾಡಿಯ ಪಾತೂರು ಶ್ರೀ ಸೂಯೇìಶ್ವರ ದೇವಸ್ಥಾನ, ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶಿರಿಯ ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ, ಕಿದೂರು ಶ್ರೀ ಮಹಾದೇವ ದೇವಸ್ಥಾನ, ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನ ಮೊದಲಾದೆಡೆಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದ ಶಿವರಾತ್ರಿ ಮಹೋತ್ಸವ ಜರಗಿತು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾಸರಗೋಡು ಸೇವಾ ಕೇಂದ್ರ ದಲ್ಲಿ 84 ನೇ ವರ್ಷದ ಶಿವ ಜಯಂತಿಯನ್ನು ಶಾಂತಿ ಸೌಹಾರ್ದ ಯಾತ್ರೆ ಯೊಂದಿಗೆ ಆಚರಿಸಲಾಯಿತು. ನಗರದ ಮುಖ್ಯ ರಸ್ತೆಯಲ್ಲಿ ಶಾಂತಿ ಯಾತ್ರೆ ಜರಗಿತು.
ಶಿವನು ಸ್ವಯಂಭೂಲಿಂಗ ರೂಪದಲ್ಲಿ ಉದ್ಭವಿಸಿದ ದಿನವಿದು. ಹಾಲಾಹಲ ವಿಷಪಾನ ಮಾಡಿದ ಸಂದರ್ಭ ಶಿವ ತಾಂಡವವಾಡಿದ ಸುದಿನವೂ ಹೌದು. ಈ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಶಿವರಾತ್ರಿ ಮಹೋತ್ಸವವನ್ನು ಜನರು ಭಕ್ತಿ ಸಡಗರದಿಂದ ಆಚರಿಸಿಕೊಂಡು ಬರುತ್ತಿರುವುದು ರೂಢಿ ಯಾಗಿದೆ. ಮಹಾಶಿವರಾತ್ರಿ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಶಿವರಾತ್ರಿ ಯಂದು ಶಿವನನ್ನು ಪೂಜಿಸುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿಯಾಗುವುದಾಗಿ ಪ್ರತೀತಿಯಿದೆ.