ವಿಟ್ಲ : ಗುರುವಿಗೆ ಗುಲಾಮನಾಗಿರಬೇಕು. ಕಣ್ಣಿಗೆ ಕಾಣುವ ದೇವರಾದ ತಂದೆ, ತಾಯಿ ಮತ್ತು ಗುರುಗಳಿಗೆ ಪ್ರೀತಿ ಗೌರವ ತೋರಿಸಬೇಕು. ಮಾತೆಯರು ಮಕ್ಕಳಿಗೆ ಭಕ್ತಿ ನಂಬಿಕೆಯನ್ನು ಮೂಡಿಸುವ ಕಾರ್ಯ ಮಾಡಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ರವಿವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ಒಂದು ಮಂಡಲ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಶ್ರೀನಿವಾಸ ಪುಂಡಲೀಕ ಶೇಟ್, ಸದಾನಂದ ಪುಂಡಲೀಕ ಶೇಟ್, ಬೆಂಗಳೂರು ಓಂಕಾರ ಎಂಜಿನಿಯರಿಂಗ್ ವರ್ಕ್ಸ್ ಮಾಲಕ ದೇವದಾಸ ಮತ್ತಿತರರು ಭಾಗವಹಿಸಿದ್ದರು.
ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಮಚ್ಛೇಂದ್ರನಾಥ್ ಸಾಲ್ಯಾನ್ ಪ್ರಸ್ತಾವನೆಗೈದರು. ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಸ್ವಾಗತಿಸಿದರು. ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಕಾರ್ಯದರ್ಶಿ ಗೀತಾ ಪುರುಷೋತ್ತಮ್ ನಿರೂಪಿಸಿದರು. ಸದಸ್ಯೆ ವಸಂತಿ ಶೆಟ್ಟಿ ವಂದಿಸಿದರು.
ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರುಪೂಜೆ, ಬಾಲಭೋಜನ, ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಶ್ರೀ ದುರ್ಗಾ ಪೂಜೆ, ಆಶ್ಲೇಷ ಬಲಿ, ಶ್ರೀ ವಿಠೋಭರುಕ್ಮಿಣಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ, ಶ್ರೀ ಲಕ್ಷ್ಮೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.