Advertisement

Maha Kumbh Mela 2025: ಯಾರು ಈ ನಾಗಾ ಸಾಧ್ವಿಗಳು…ನಿಗೂಢ, ಕಠಿಣ ಸವಾಲಿನ ಹಾದಿ ಇವರದ್ದು!

12:11 PM Jan 16, 2025 | ನಾಗೇಂದ್ರ ತ್ರಾಸಿ |

ಜಗತ್ತಿನ ಅತೀ ದೊಡ್ಡ ಧಾರ್ಮಿಕ ಉತ್ಸವ ಎಂದೇ ಖ್ಯಾತಿ ಪಡೆದುಕೊಂಡಿರುವ ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಜನ ಸೇರುತ್ತಾರೆ ಎಂಬ ಕಾರಣಕ್ಕೆ ಜನಪ್ರಿಯತೆ ಪಡೆದುಕೊಂಡಿದೆ. ಅಷ್ಟೇ ಅಲ್ಲ ಪ್ರಯಾಗ್‌ ರಾಜ್‌ ನ ತ್ರಿವೇಣಿ ಸಂಗಮದಲ್ಲಿನ ಪವಿತ್ರ ಶಾಹಿ ಸ್ನಾನದಲ್ಲಿ ಭಾಗಿಯಾಗುವ ಸಾಧು, ಸಂತರು, ಅಘೋರಿಗಳು, ನಾಗಾ ಸಾಧುಗಳು ತಮ್ಮ ವಿಶೇಷ ವೇಷ ಭೂಷಣ, ಆಧ್ಯಾತ್ಮಿಕ ಶಕ್ತಿಯಿಂದಲೇ ಎಲ್ಲರ ಗಮನಸೆಳೆಯುವ ಕೇಂದ್ರ ಬಿಂದುವಾಗಿರುತ್ತಾರೆ. 13 ಅಖಾಡಗಳ ಸಂತರು, ನಾಗಾ ಸಾಧುಗಳು ಪ್ರಮುಖರಾಗಿದ್ದಾರೆ. ಆದರೆ ಇವರೊಂದಿಗೆ ನಾಗಾ ಸಾಧ್ವಿಗಳು ಇದ್ದಾರೆ ಎಂಬುದು ಗಮನಾರ್ಹ ವಿಚಾರ.

Advertisement

ಪ್ರಯಾಗ್‌ ರಾಜ್‌ ನಲ್ಲಿ ಜನವರಿ 13ರಿಂದ ಆರಂಭಗೊಂಡಿರುವ ಮಹಾಕುಂಭ ಮೇಳ ಫೆಬ್ರುವರಿ 25ರ ಮಹಾಶಿವರಾತ್ರಿಯಂದು ಸಮಾಪ್ತಿಗೊಳ್ಳಲಿದೆ. ಈ ಅವಧಿಯಲ್ಲಿ ನಾಗಾ ಸಾಧುಗಳಲ್ಲದೆ, ಮಹಿಳಾ ನಾಗಾ ಸಾಧುಗಳು ಕೂಡಾ ಮಹಾಮೇಳದಲ್ಲಿ ಪಾಲ್ಗೊಂಡು ಶಾಹಿ ಸ್ನಾನದಲ್ಲಿ ಭಾಗವಹಿಸುತ್ತಿರುವುದು ಹೆಚ್ಚಿನ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಈ ನಾಗಾ ಸಾಧ್ವಿಗಳು ಧ್ಯಾನ, ಯೋಗ ಮತ್ತು ಇತರ ಧಾರ್ಮಿಕ ಆಚರಣೆಗಳ ಮೂಲಕ ಜೀವನ ಸಾಗಿಸುತ್ತಿರುತ್ತಾರೆ. ಅಷ್ಟೇ ಅಲ್ಲ ಕಠೋರ ಬ್ರಹ್ಮಚರ್ಯ ವೃತ ಮತ್ತು ಉಪವಾಸ ಕೈಗೊಳ್ಳುವುದಕ್ಕೆ ನಾಗಾ ಸಾಧ್ವಿಗಳು ಹೆಸರುವಾಸಿಯಾಗಿದ್ದಾರೆ. ನಾಗಾ ಸಾಧ್ವಿಗಳು ಹೊರಪ್ರಪಂಚದಿಂದ ದೂರವಿದ್ದು ನಿಗೂಢವಾಗಿರುತ್ತಾರೆ. ಇವರು 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.

ನಾಗಾ ಸಾಧುಗಳ ಬಗ್ಗೆ ಅವರ ಸಾಧನೆ, ಬದುಕಿನ ಬಗೆಗಿನ ಕುರಿತ ವಿವರ ಎಲ್ಲರಿಗೂ ತಿಳಿದಿದೆ. ಆದರೆ ಈ ನಾಗಾ ಸಾಧ್ವಿಗಳ ಬದುಕು, ಅವರ ಆಚರಣೆ ರಹಸ್ಯವಾಗಿದೆ. ಆದರೂ ನಾಗಾ ಸಾಧ್ವಿಗಳ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚು ತಿಳಿದಿಲ್ಲ. ಈ ಮಹಿಳಾ ಸಾಧುಗಳು ಯಾರು? ಅವರನ್ನು ತ್ಯಾಗದ ಜೀವನಕ್ಕೆ ಸೆಳೆಯುವ ಅಂಶ ಯಾವುದು? ನಾಗಾ ಸಾಧ್ವಿಗಳ ಆಕರ್ಷಕ ಪ್ರಪಂಚದ ಮೇಲೆ ಬೆಳಕು ಚೆಲ್ಲುವ ಕೆಲವು ಮಹತ್ವದ ಅಂಶಗಳು ಇಲ್ಲಿವೆ…

Advertisement

ಯಾರು ಈ ನಾಗಾ ಸಾಧ್ವಿಗಳು?

ನಾಗಾ ಸಾಧ್ವಿಗಳು ಅಥವಾ ಮಹಿಳಾ ನಾಗಾ ತಪಸ್ವಿಗಳು…ಇವರು ಆಧ್ಯಾತ್ಮಿಕ ಜ್ಞಾನೋದಯ ಪಡೆಯುವ ನಿಟ್ಟಿನಲ್ಲಿ ಲೌಕಿಕ ಜೀವನ ತ್ಯಜಿಸಿರುವ ಮಹಿಳಾ ಸನ್ಯಾಸಿನಿಯರಾಗಿದ್ದಾರೆ. ನಾಗಾ ಸಾಧ್ವಿಗಳು ಕಠಿಣವಾದ ದೀಕ್ಷೆಯ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಕಠಿಣ ಬ್ರಹ್ಮಚರ್ಯ ಪಾಲನೆ, ಕಠಿಣ ಧ್ಯಾನ ಮತ್ತು ಭೌತಿಕ ಸಂಪತ್ತು, ಆಸ್ತಿಗಳನ್ನು ತ್ಯಜಿಸಬೇಕಾಗುತ್ತದೆ.

ಪುರುಷ ಸಹವರ್ತಿ(ನಾಗಾ ಸಾಧು)ಗಳಿಗಿಂತ ಭಿನ್ನವಾಗಿರುವ ನಾಗಾ ಸಾಧ್ವಿಗಳು ಸಾಂಪ್ರದಾಯಿಕವಾದ ಸರಳ ಉಡುಗೆಯನ್ನು ತೊಟ್ಟುಕೊಳ್ಳುತ್ತಾರೆ. ಹೊಲಿಯದ ಕೇಸರಿ ಬಟ್ಟೆಯನ್ನು ಧರಿಸುವ ನಾಗಾ ಸಾಧ್ವಿಗಳು ಹಣೆಗೆ ವಿಶಿಷ್ಟವಾದ ತಿಲಕ ಮತ್ತು ತಮ್ಮ ತಲೆಯ ಕೇಶದ ಮೂಲಕ ಗಮನಸೆಳೆಯುತ್ತಾರೆ.

1)ನಾಗಾ ಸಾಧ್ವಿಗಳಾಗಲು ಕಠಿಣ ಹಾದಿಯ ಸವಾಲು!

ನಾಗಾ ಸಾಧ್ವಿ ಆಗುವುದು ಸಾಮಾನ್ಯ ಸಾಧನೆಯಲ್ಲ…ಇದಕ್ಕೆ ಹಲವು ವರ್ಷಗಳ ಅಚಲ ಸಮರ್ಪಣೆ, ಶಿಸ್ತು, ಬ್ರಹ್ಮಚರ್ಯೆ ಮತ್ತು ಆಧ್ಯಾತ್ಮಿಕ ತರಬೇತಿಯ ಅಗತ್ಯವಿರುತ್ತದೆ. ನಾಗಾ ಸಾಧ್ವಿಯಾಗಲು ದೀಕ್ಷೆ ಪಡೆಯುವ ಮೊದಲು ತಮ್ಮ ಹಿಂದಿನ ಜೀವನದಿಂದ ಸಂಪೂರ್ಣ ತ್ಯಜಿಸುವ ಸಂಕೇತವಾಗಿ ತಮ್ಮದೇ ಪಿಂಡ ಪ್ರದಾನ ಮಾಡುವ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಕಠಿಣ ಧ್ಯಾನ, ಉಪವಾಸ ಮತ್ತು ತಪಸ್ಸಿನ ಅಭ್ಯಾಸಗಳ ಪಾಂಡಿತ್ಯ ಪಡೆದ ನಂತರವೇ ಅವರನ್ನು ಔಪಚಾರಿಕವಾಗಿ ಅಖಾಡ(Akhara)ಕ್ಕೆ ಸೇರಿಸಿಕೊಳ್ಳಲಾಗುತ್ತದೆ.

2) ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಸಮಾನತೆ:

ಪುರುಷ ಸನ್ಯಾಸಿಗಳೇ ಹೆಚ್ಚು ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ನಾಗಾ ಸಾಧ್ವಿಗಳು ಸಾಂಪ್ರದಾಯಿಕ ಲಿಂಗ ಮಾನದಂಡದ ಸಮಸ್ಯೆ ಎದುರಿಸುವುದು ಸಹಜ. ಆದರೆ ತಮ್ಮದೇ ಅಖಾದೊಳಗೆ ನಾಗಾ ಸಾಧ್ವಿಗಳು ಸಮಾನ ಹಕ್ಕನ್ನು ಹೊಂದಿರುತ್ತಾರೆ. ಅಲ್ಲದೇ ಧಾರ್ಮಿಕ ಚರ್ಚೆ, ಸಂಪ್ರದಾಯ ಮತ್ತು ಶಾಹಿ ಸ್ನಾನದ ಪ್ರಕ್ರಿಯೆಯಲ್ಲಿ ನಾಗಾ ಸಾಧ್ವಿಗಳು ಸಕ್ರಿಯರಾಗಿ ಭಾಗವಹಿಸುತ್ತಾರೆ. ಅವರ ಉಪಸ್ಥಿತಿ ಕೇವಲ ಲಿಂಗ ಸಮಾನತೆಯನ್ನು ಬಲಪಡಿಸುವುದಲ್ಲದೇ, ಭಾರತದಲ್ಲಿನ ಆಧ್ಯಾತ್ಮಿಕ ಸಂಪ್ರದಾಯದಲ್ಲಿನ ನಾಗಾ ಸಾಧ್ವಿಗಳ ಒಳಗೊಳ್ಳುವಿಕೆಯನ್ನು ತೋರ್ಪಡಿಸುತ್ತದೆ.

3)ತ್ಯಾಗದ (ವೈರಾಗ್ಯ) ವಿಶಿಷ್ಟ ಜೀವನಶೈಲಿ:

ನಾಗಾ ಸಾಧ್ವಿಗಳು ತೀರಾ ಸರಳ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. ನಾಗಾ ಸಾಧ್ವಿಗಳು ಎಲ್ಲಾ ಭೌತಿಕ ಆಸ್ತಿ ಮತ್ತು ಕೌಟುಂಬಿಕ ಸಂಬಂಧಗಳನ್ನು ತ್ಯಜಿಸಿ ಸರಳ ಜೀವನ ಶೈಲಿ ಅನುಸರಿಸುತ್ತಾರೆ. ನಾಗಾ ಸನ್ಯಾಸಿನಿಯರು ಸರಳತೆ ಮತ್ತು ನಮ್ರತೆಯ ಪ್ರತೀಕ. ಅವರ ಜೀವನವೆಲ್ಲಾ ಧ್ಯಾನ, ಯೋಗ ಮತ್ತು ಆಧ್ಯಾತ್ಮಿಕ ಜ್ಞಾನೋದಯ ಪಡೆದುಕೊಳ್ಳುವುದರಲ್ಲಿ ಕಳೆಯುತ್ತಾರೆ. ಜೊತೆಗೆ ಲೌಕಿಕ ಮೋಹ ಹಾಗೂ ಸಾರ್ವಜನಿಕ ಸಂಪರ್ಕದಿಂದ ದೂರವೇ ಉಳಿದಿರುತ್ತಾರೆ.

4)ಮಹಾ ಕುಂಭಮೇಳದಲ್ಲಿ ನಾಗಾ ಸಾಧ್ವಿಗಳ ಪಾತ್ರವೇನು?
ಮಹಾ ಕುಂಭಮೇಳದಲ್ಲಿ ನಾಗಾ ಸಾಧ್ವಿಗಳು ಅದ್ದೂರಿಯ ವೇದಿಕೆಯಲ್ಲಿ ತಮ್ಮ ಭಕ್ತಿ ಮತ್ತು ಧಾರ್ಮಿಕ ಶಕ್ತಿಯ ಪ್ರದರ್ಶನವನ್ನು ಅನಾವರಣಗೊಳಿಸುತ್ತಾರೆ. ಶಾಹಿ ಸ್ನಾನದ ಮೆರವಣಿಗೆ ಪ್ರಕ್ರಿಯೆ ಮತ್ತು ಆಚರಣೆಗಳಲ್ಲಿ ನಾಗಾ ಸಾಧ್ವಿಗಳು ಪಾಲ್ಗೊಳ್ಳುವುದು ಕೇವಲ ಸಾರ್ವಜನಿಕ ಪ್ರದರ್ಶನವಲ್ಲ ಆದರೆ ಭಾರತದ ಪ್ರಾಚೀನ ಸಂಪ್ರದಾಯದ ಪಾವಿತ್ರ್ಯ ಕಾಪಾಡುವ ಧಾರ್ಮಿಕ ಯೋಧರ ಶಕ್ತಿಯನ್ನು ನಿರ್ವಹಿಸುವ ಅವರ ಪಾತ್ರವನ್ನು ನೆನಪಿಸುತ್ತದೆ.

5)ಶಕ್ತಿ ಮತ್ತು ನಿಗೂಢತೆಯ ಸಂಕೇತ!

ನಾಗಾ ಸಾಧ್ವಿಗಳನ್ನು ಸಾಮಾನ್ಯವಾಗಿ ಮಾತೆ ಎಂದೇ ಗೌರವಿಸಲ್ಪಡುತ್ತಾರೆ. ಅವರು ತಮ್ಮ ಆರಾಧನಾ ಶಕ್ತಿಯನ್ನು ಸಾಕಾರಗೊಳಿಸುತ್ತಾರೆ. ಅಲ್ಲದೇ ತಮ್ಮ ಭಯಾನಕ ಕೂದಲುಗಳು, ಭಸ್ಮಲೇಪಿತ ಹಣೆ, ಆಧ್ಯಾತ್ಮಿಕ ತೇಜಸ್ಸಿನ ಕುತೂಹಲದ ಜತೆಗೆ ಎರಡನ್ನೂ ಸೆಳೆಯುವ ನಿಗೂಢತೆ ನಾಗಾ ಸಾಧ್ವಿಗಳದ್ದಾಗಿದೆ!

Advertisement

Udayavani is now on Telegram. Click here to join our channel and stay updated with the latest news.