ವಿಶ್ವದ ಅತೀದೊಡ್ಡ ಧಾರ್ಮಿಕ ಉತ್ಸವ ಎಂದೇ ಖ್ಯಾತಿ ಪಡೆದುಕೊಂಡಿರುವ ಕುಂಭಮೇಳ ಕೋಟ್ಯಂತರ ಜನ ಸೇರುತ್ತಾರೆ ಎಂಬ ಕಾರಣಕ್ಕೆ ಜನಪ್ರಿಯತೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಇಲ್ಲಿನ ಪವಿತ್ರ ಸ್ನಾನದಲ್ಲಿ ಭಾಗಿಯಾಗುವ ಸಾಧು-ಸಂತರಲ್ಲಿ ಅನೇಕರು ತಮ್ಮ ವೇಷ ಭೂಷಣಗಳಿಂದಲೇ ಮನೆಮಾತಾಗಿದ್ದಾರೆ. ಹೀಗೆ ವಿಶಿಷ್ಟವಾದ ವೇಷಭೂಷಣಗಳಿಂದ ಮನೆಮಾತಾದ ಬಾಬಾಗಳ ಒಂದಷ್ಟು ಪರಿಚಯ ಇಲ್ಲಿದೆ.
ಅಂಬಾಸಿಡರ್ ಬಾಬಾ: ಅಂಬಾಸಿಡರ್ ಬಾಬಾ ಎಂದೇ ಖ್ಯಾತರಾಗಿರುವ ಈ ಬಾಬಾ ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾಗಿದ್ದು, ಈಗಾಗಲೇ 50 ವರ್ಷ ವಯಸ್ಸು ದಾಟಿದೆ. 4 ಕುಂಭಮೇಳಗಳಲ್ಲಿ ಭಾಗಿಯಾಗಿರುವ ಇವರು, 1972ರ ಮಾದರಿಯ ಅಂಬಾಸಿಡರ್ ಕಾರಿನಲ್ಲಿ ಓಡಾಡುತ್ತಾರೆ.
ಪರಿಸರ ಬಾಬಾ: ಮಹಾಬಲೇಶ್ವರ ಅವಧೂತ ಬಾಬಾ ಅವರು ಪರಿಸರ ಬಾಬಾ ಎಂದೇ ಖ್ಯಾತರಾಗಿದ್ದಾರೆ. ಇವರು ಯಾವಾಗಲೂ 2 ಗಿಡ ನೆಡುವಂತೆ ಜನರಿಗೆ ಸಂದೇಶ ನೀಡುತ್ತಾರೆ. ಈವರೆಗೆ ಇವರ ಭಕ್ತರು ಸುಮಾರು 1 ಕೋಟಿಗೂ ಅಧಿಕ ಮರಗಳನ್ನು ನೆಟ್ಟಿದ್ದಾರೆ.
ರುದ್ರಾಕ್ಷ ಬಾಬಾ: ಗೀತಾನಂದ ಗಿರಿ ಬಾಬಾ ಅಥವಾ ರುದ್ರಾಕ್ಷ ಬಾಬಾ ಎಂದೇ ಖ್ಯಾತರಾದ ಇವರು ರುದ್ರಾಕ್ಷಿಯಿಂದ ಕಟ್ಟಲಾದ 45 ಕೆ.ಜಿ. ತೂಕದ ಕಿರೀಟವನ್ನು ಧರಿಸುತ್ತಾರೆ. ಅಲ್ಲದೇ ಇವರು ಒಟ್ಟಾರೆ 2.25 ಲಕ್ಷ ರುದ್ರಾಕ್ಷ ಮಣಿಗಳನ್ನು ಧರಿಸಿದ್ದಾರೆ.
ರಬ್ಡಿ ಬಾಬಾ: ಶ್ರೀ ಮಹಾಂತ ದೇವಗಿರಿ ಅಥವಾ ರಬ್ಡಿ ಬಾಬಾ ಈ ಬಾರಿ ಕುಂಭಮೇಳದ ಆಕರ್ಷಣೆ ಯಾಗಿದ್ದಾರೆ. ಇವರು ದೊಡ್ಡ ಪಾತ್ರೆಯೊಂದರಲ್ಲಿ ಹಾಲು ಕಾಯಿಸುತ್ತಾ ರಬ್ಡಿ (ಹಾಲಿನಿಂದ ತಯಾರಿಸುವ ಸಿಹಿ ಖಾದ್ಯ) ತಯಾರು ಮಾಡುತ್ತಾರೆ. ಅಲ್ಲದೇ ಇದನ್ನು ಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರಿಗೆ ವಿತರಣೆ ಮಾಡುತ್ತಾರೆ.
ಚಾಯ್‌ವಾಲಾ ಬಾಬಾ: ಟೀ ಮಾರುತ್ತಿದ್ದ ವ್ಯಕ್ತಿ ಈಗ ಬಾಬಾ ಆಗಿ ಬದಲಾಗಿದ್ದು, ಇವರು ಕಳೆದ ಸುಮಾರು ವರ್ಷಗಳಿಂದ ಊಟ, ತಿಂಡಿ ಎಲ್ಲವನ್ನೂ ತ್ಯಜಿಸಿ ದಿನಕ್ಕೆ ಕೇವಲ 10 ಕಪ್ ಟೀ ಕುಡಿಯುತ್ತಲೇ ಬದುಕಿದ್ದಾರೆ. ಇಷ್ಟೇ ಅಲ್ಲದೇ ಮೌನಿಯಾಗಿರುವ ಇವರು ವಾಟ್ಸ್‌ಆ್ಯಪ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಾರೆ.
ಚೋಟು ಬಾಬಾ: ಇವರು ಕುಬ್ಜ(ಕುಳ್ಳ) ಬಾಬಾ ಆಗಿದ್ದು, ಕಳೆದ 32 ವರ್ಷಗಳಿಂದ ಸ್ನಾನವನ್ನೇ ಮಾಡದೇ ಕುಂಭಮೇಳಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೇವಲ 3 ಅಡಿ 8 ಇಂಚು ಇರುವ ಇವರು, ಮನಸ್ಸು ಶುದ್ಧವಾಗಿರಬೇಕು ಎಂದು ಪ್ರತಿಪಾದಿಸುತ್ತಾ ಸ್ನಾನವನ್ನೇ ತ್ಯಜಿಸಿದ್ದಾರೆ.
ನೈಲ್ ಬಾಬಾ: ಮಹಾಂತ್ ಗಿರಿ ಬಾಬಾ ಕಳೆದ 9 ವರ್ಷಗಳಿಂದ ತನ್ನ ಎಡಗೈ ಯನ್ನು ಮೇಲೆತ್ತಿಕೊಂಡೇ ಇದ್ದಾರೆ. ಅವತ್ತಿನಿಂದ ಉಗುರೂ ತೆಗೆದಿಲ್ಲ. ಗೋವು ರಕ್ಷಣೆಗಾಗಿ ಈ ಹಠಯೋಗ ಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ಕೈಗೆ ರಕ್ತ ಸಂಚಾರವೇ ನಿಂತಿದೆಯಂತೆ.
ಗೋಧಿ ಬಾಬಾ: ಅಮರ್ಜಿತ್ ಹೆಸರಿನ ಬಾಬಾ ಗೋಧಿ ಬಾಬಾ ಎಂದೇ ಜನಪ್ರಿಯರಾಗಿದ್ದಾರೆ. ಪ್ರಕೃತಿ ಮೇಲಾಗುತ್ತಿರುವ ಅನ್ಯಾಯ ಖಂಡಿಸಿ ಇವರು ತಲೆಯ ಮೇಲೆ ಗೋಧಿ ಗಿಡ ಬೆಳೆಸಿಕೊಂಡಿದ್ದಾರೆ.
ಕಂಪ್ಯೂಟರ್ ಬಾಬಾ: ಗ್ಯಾಜೆಟ್ ಹಾಗೂ ಟೆಕ್ನಾಲಜಿ ಬಗ್ಗೆ ಇರುವ ಜ್ಞಾನದಿಂದಲೇ ಇವರು ಕಂಪ್ಯೂಟರ್ ಬಾಬಾ ಎಂದೇ ಖ್ಯಾತರಾಗಿದ್ದಾರೆ. ದಾಸ್ ತ್ಯಾಗಿ ಬಾಬಾ ಆಧುನಿಕ ತಂತ್ರಜ್ಞಾನದ ಬಗ್ಗೆ ಇವರು ಸಂಪೂರ್ಣವಾಗಿ ತಿಳಿವಳಿಕೆ ಹೊಂದಿದ್ದು, ಸಾಕಷ್ಟು ಗ್ಯಾಜೆಟ್ ಗಳನ್ನು ಸಹ ಹೊಂದಿದ್ದಾರೆ.
ಪಾರಿವಾಳ ಬಾಬಾ: ಮಹಾಂತ್ ರಾಜ್‌ಪುರಿ ಜಿ ಮಹಾರಾಜ್ ಅಥವಾ ಪಾರಿವಾಳ ಬಾಬಾ ಎಂದೇ ಹೆಸರಾದ ಇವರು, ಕಳೆದ 9 ವರ್ಷಗಳಿಂದ ಪಾರಿವಾಳವನ್ನು ಜತೆಗೆ ಕೊಂಡೊಯ್ಯುತ್ತಿ ದ್ದಾರೆ. ಇವರು ಎಲ್ಲೇ ಹೋದರೂ ಇವರ ಜತೆಗೆ ಪಾರಿವಾಳ ಇದ್ದೇ ಇರುತ್ತದೆ.