ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರದ ದೇವಸ್ಥಾನವೊಂದರಲ್ಲಿ ಭಯೋತ್ಪಾದಕರಂತೆ ಪೋಸು ಕೊಡುತ್ತಿದ್ದ ಸಿಬಂದಿ ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿದ ನಂತರ ಪೊಲೀಸರ ಅಣಕು ಡ್ರಿಲ್ ವಿವಾದಕ್ಕೆ ಸಿಲುಕಿತು.
ಈ ಕುರಿತು ವಕೀಲರ ಗುಂಪು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಇಂತಹ ತಪ್ಪು ಮರುಕಳಿಸದಂತೆ ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರಸಿಂಗ್ ಪರದೇಶಿ ಭಾನುವಾರ ಹೇಳಿದ್ದಾರೆ.
ಇಲ್ಲಿನ ಹೆಸರಾಂತ ಮಹಾಕಾಳಿ ದೇವಸ್ಥಾನದಲ್ಲಿ ಜನವರಿ 11 ರಂದು ನಡೆಸಲಾದ ಅಣಕು ಡ್ರಿಲ್‌ನಲ್ಲಿ ಭಯೋತ್ಪಾದಕರ ಗುಂಪೊಂದು ಪೂಜಾ ಸ್ಥಳವನ್ನು ವಶಪಡಿಸಿಕೊಂಡು ಭಕ್ತರನ್ನು ಒತ್ತೆಯಾಳಾಗಿ ಇರಿಸುವ ದೃಶ್ಯವನ್ನು ಭದ್ರತಾ ಪಡೆಗಳಿಂದ ಮಾಡಲಾಯಿತು. “ಅಣಕು ಡ್ರಿಲ್‌ನಲ್ಲಿ ಭಯೋತ್ಪಾದಕರ ಪಾತ್ರವನ್ನು ನಿರ್ವಹಿಸಿದ ಸಿಬಂದಿ ನಿರ್ದಿಷ್ಟ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ಡ್ರಿಲ್‌ನ ವಿಡಿಯೋಗಳು ಒಂದು ಸಮುದಾಯವನ್ನು ನಕಾರಾತ್ಮಕವಾಗಿ ಚಿತ್ರಿಸುತ್ತದೆ ಮತ್ತು ಎಲ್ಲಾ ಭಯೋತ್ಪಾದಕರು ಈ ಸಮುದಾಯದಿಂದ ಬಂದವರು ಎಂದು ನಂಬುವಂತೆ ಮಾಡುತ್ತದೆ ”ಎಂದು ಇಲ್ಲಿನ ವಕೀಲರ ಗುಂಪಿನ ಫರತ್ ಬೇಗ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.