ಉಡುಪಿ:ರಾಷ್ಟ್ರೀಯ ಪತ್ರಿಕೆಗಳು, ಚಾನೆಲ್ ಗಳು, ಗ್ರಾಮೀಣ ಸಮಸ್ಯೆಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತಿಲ್ಲ. ದೆಹಲಿ, ಮುಂಬೈ, ಚಿನಿವಾರ ಪೇಟೆ, ಬಾಲಿವುಡ್ ಗೆ ಸೀಮಿತವಾಗಿ ಸುದ್ದಿಯನ್ನು ಮಾಡುತ್ತಿರುತ್ತವೆ. ಈ ಪ್ರವೃತ್ತಿ ಪತ್ರಿಕೋದ್ಯಮಕ್ಕೆ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೆ ಮಾರಕ, ನಮ್ಮ ಮಕ್ಕಳಿಗೆ ಮಾರಕ, ನಮ್ಮ ಯುವ ಸಮೂಹಕ್ಕೆ ಮಾರಕ. ನಾವು ಜ್ಞಾನವನ್ನು ಬೆಳೆಸಬೇಕಾಗಿದೆ. ಇತಿಹಾಸದ ಪ್ರಜ್ಞೆಯನ್ನು ಹೆಚ್ಚಿಸಬೇಕಾಗಿದೆ ಎಂದು ಹಿರಿಯ ಪತ್ರಕರ್ತ, ಮ್ಯಾಗ್ಸಸೆ ಪುರಸ್ಕೃತ ಪಾಲಗುಮ್ಮಿ ಸಾಯಿನಾಥ್ ಹೇಳಿದರು.
ಅವರು ಭಾನುವಾರ ಉಡುಪಿ ಅಜ್ಜರಕಾಡಿನ ಟೌನ್ ಹಾಲ್ ನಲ್ಲಿ ಏಷ್ಯನ್ ಭಾಷೆಗಳ ಸೇವೆಯಲ್ಲಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ ನಡೆದ ತಲ್ಲೂರು ನುಡಿಮಾಲೆ ಕರಾವಳಿ ಕಟ್ಟು ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಖರೋಪನ್ಯಾಸ ನೀಡಿ ಮಾತನಾಡಿದರು.
ಇವತ್ತಿನ ಯುವ ಸಮೂಹಕ್ಕೆ ಸ್ವಾತಂತ್ರ್ಯ ಹೋರಾಟವನ್ನು ಕಂಡ ಅನುಭವವಿಲ್ಲ. ಅವೆಲ್ಲವೂ ಪಠ್ಯ ಪುಸ್ತಕದಿಂದ ಬಂದ ಜ್ಞಾನವಾಗಿದೆ. ಸ್ವಾತಂತ್ರ್ಯ ಹೋರಾಟದ ಯಾವುದೇ ಸಂಪರ್ಕವೂ ಇಲ್ಲ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನಮ್ಮ ನಡುವೆ ಒಬ್ಬರೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಬದುಕುಳಿದಿರುವುದಿಲ್ಲ. ಹಾಗಾಗಿ ಈಗ ಜೀವಂತ ಇರುವ ಸ್ವಾತಂತ್ರ್ಯ ಹೋರಾಟಗಾರರ ಅನುಭವಗಳನ್ನು ದಾಖಲಿಸಿಕೊಳ್ಳಬೇಕಾಗಿದೆ ಎಂದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಉಪನ್ಯಾಸದ ಸಂದರ್ಭದಲ್ಲಿ ಸಾಯಿನಾಥ್ ಅವರು ಹಲವು ಕಿರು ವಿಡಿಯೋಗಳನ್ನು ಪ್ರದರ್ಶಿಸಿ ಗ್ರಾಮೀಣ ಬದುಕು, ಗ್ರಾಮೀಣ ಬದುಕಿನಲ್ಲಿರುವ ಕಲೆ, ಸಂಸ್ಕೃತಿ, ಹಾಡು, ಜನಜೀವನದ ಬಗ್ಗೆ ಮಾಹಿತಿ ನೀಡಿದರು.
ಉಪನ್ಯಾಸದ ನಂತರ ಹಿರಿಯ ಪತ್ರಕರ್ತರಾದ ಜಿಎನ್ ಮೋಹನ್, ಪ್ರೊ.ಎಂಎಸ್ ಶ್ರೀರಾಮ್, ಅಜೀಂ ಪ್ರೇಮ್ ಜೀ ವಿವಿ ಉಪನ್ಯಾಸಕ ಡಾ.ಎ.ನಾರಾಯಣ. ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಸಂವಾದ ನಡೆಸಿದರು.
ಉಪನ್ಯಾಸ ಕಾರ್ಯಕ್ರಮಕ್ಕೂ ಮುನ್ನ ರಾಜಾರಾಂ ತಲ್ಲೂರಯ ಅವರ ಅಂಕಣ ಬರಹಗಳ ನುಣ್ಣನ್ನ ಬೆಟ್ಟ ಪುಸ್ತಕವನ್ನು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು ಬಿಡುಗಡೆಗೊಳಿಸಿದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ರಾಜಾರಾಂ ತಲ್ಲೂರು ಅತಿಥಿಗಳನ್ನು ಸ್ವಾಗತಿಸಿದರು. ರಾಮಕೃಷ್ಣ ಹೇರ್ಳೆ ವಂದಿಸಿದರು.