ಧಾರವಾಡ: ಕುಮಾರೇಶ್ವರ ನಗರದಲ್ಲಿ ಮಾ. 19ರಂದು ನಡೆದಿದ್ದ ಕಿಲ್ಲರ್ ಕಟ್ಟಡ ದುರಂತ ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆ ಒಂದು ತಿಂಗಳೊಳಗೆ ಮುಗಿಯಲಿದ್ದು, ಆ ಬಳಿಕ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ಕಟ್ಟಡ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟಡದ ತನಿಖೆಯೂ ಈಗಾಗಲೇ ಮುಕ್ತಾಯ ಹಂತವನ್ನು ತಲುಪಿದ್ದು, ಸರಕಾರಿ ಹಾಗೂ ಖಾಸಗಿ ಜಾಗೆಯಲ್ಲಿದ್ದ ಕಟ್ಟಡದ ಅವಶೇಷಗಳನ್ನು ಶೀಘ್ರದಲ್ಲಿ ಜಿಲ್ಲಾಡಳಿತ ಹರಾಜು ಹಾಕಲಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಪ್ರಕ್ರಿಯೆ ನಡೆಸಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಡಿಸಿ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರಕಾರ ಆದೇಶ ನೀಡಿತ್ತು. ಅದರನ್ವಯ ಈಗಾಗಲೇ ತನಿಖೆ ಕೊನೆ ಹಂತಕ್ಕೆ ತಲುಪಿದ್ದು, ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಕಟ್ಟಡದ ಮಾಲೀಕರು, ಗಾಯಾಳುಗಳು, ಸಂತ್ರಸ್ತರು, ಬಾಡಿಗೆದಾರರು, ಪಾಲಿಕೆ ಅ ಧಿಕಾರಿಗಳು ಸೇರಿದಂತೆ ಇನ್ನಿತರ ಸಾಕ್ಷಿದಾರರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಒಟ್ಟಿನಲ್ಲಿ ತನಿಖೆ ಕೊನೆಯ ಹಂತಕ್ಕೆ ಬಂದು ನಿಂತಿದ್ದು, ಒಂದು ತಿಂಗೊಳಗೆ ತನಿಖೆ ಮುಗಿದು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಕಟ್ಟಡದ ಕುಸಿತದಿಂದ ಮೃತರಾದ ಕುಟುಂಬಗಳಿಗೆಮತ್ತು ಗಾಯಾಳುಗಳಿಗೆ ಸರಕಾರದಿಂದ ಮಾನವೀಯತೆಯ ಅಧಾರದ ಮೇಲೆ ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿ ವತಿಯಿಂದ ಪರಿಹಾರ ನೀಡಲಾಗಿದೆ. ಇನ್ನುಳಿದಂತೆ ಖಾಸಗಿ ಮಳಿಗೆ ಮಾಲೀಕರು ಪ್ರತ್ಯೇಕವಾಗಿ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿಕೊಂಡು ಪರಿಹಾರ ಪಡೆದುಕೊಳ್ಳಬೇಕು ಎಂದರು.
ಭೇಟಿ-ಪರಿಶೀಲನೆ: ಮ್ಯಾಜಿಸ್ಟ್ರೇಟ್ ವಿಚಾರಣೆ ಭಾಗವಾಗಿ ಡಿಸಿ ದೀಪಾ ಚೋಳನ್ ಅವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ಕಟ್ಟಡ ಕುಸಿತ ಸ್ಥಳಕ್ಕೆ ಹಾಗೂ ಕಟ್ಟಡದ ಅವಶೇಷಗಳನ್ನು ಇಟ್ಟಿರುವ ಸ್ಥಳಗಳಿಗೆ ಡಿಸಿ ದೀಪಾ ಭೇಟಿ ನೀಡಿ ಸ್ಥಳೀಯರು ಹಾಗೂ ಅಂಗಡಿ ಮಾಲೀಕರಿಂದ ಮಾಹಿತಿ ಪಡೆದರು. ಮಳೆ ಹೆಚ್ಚಾಗುತ್ತಿರುವುದರಿಂದ ನೀರು ನಿಲ್ಲುತ್ತಿದೆ. ಇದರಿಂದ ಡೆಂಘೀ ಸೇರಿದಂತೆ ಇನ್ನಿತರ ರೋಗಗಳು ಬರುತ್ತಿವೆ ಎಂದು ಸ್ಥಳೀಯರು ಡಿಸಿ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಡಿಸಿ, ನೀರನ್ನು ಹೊರ ಹಾಕಲು ಪಾಲಿಕೆ ಅ ಧಿಕಾರಿಗಳಿಗೆ ಸೂಚನೆ ನೀಡಿದರು. ಇದಲ್ಲದೇ ಕಟ್ಟಡ ಕುಸಿತದ ಸ್ಥಳದಲ್ಲಿ
ಸಂಗ್ರಹವಾಗುತ್ತಿರುವ ನೀರು ರೇವಣಕರ ಮೋಟರ್ ನ ಬಿಲ್ಡಿಂಗ್‌ಗೆ ಹೋಗುತ್ತಿದೆ ಎಂದು ಬಿಲ್ಡಿಂಗ್ ಮಾಲೀಕರು ಡಿಸಿ ಅವರಿಗೆ ಮಾಹಿತಿ ನೀಡಿದರು. ಈ ಕುರಿತು ಪರಿಶೀಲನೆ ನಡೆಸುವುದಾಗಿ ಡಿಸಿ ದೀಪಾ ತಿಳಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ತಹಶೀಲ್ದಾರ್ ಪ್ರಕಾಶ ಕುದರಿ ಸೇರಿದಂತೆ ಯೋಜನಾ ಇಲಾಖೆ, ಭೂ ಮಾಪನ ಇಲಾಖೆ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಇದ್ದರು.
ಕಟ್ಟಡ ಕುಸಿತ ತೆರವು ಕಾರ್ಯಾಚರಣೆಗೆ ವೆಚ್ಚ ಮಾಡಲಾಗಿದ್ದ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ತೆರವು ಕಾರ್ಯಚರಣೆಯಲ್ಲಿ ವಿವಿಧ ಸಾಧನ, ವಾಹನ ಸೇರಿದಂತೆ ಉಪಕರಣಗಳನ್ನು ಬಾಡಿಗೆ ನೀಡಿದ್ದ ಮಾಲೀಕರು ಮತ್ತು ಏಜೆನ್ಸಿಗಳಿಗೆ ನೀಡಲಾಗಿದೆ
. –ದೀಪಾ ಚೋಳನ್, ಜಿಲ್ಲಾಧಿಕಾರಿ