ನಾಣ್ಯವನ್ನು ಮಾಯ ಮಾಡುವ ಕಲೆ ಗೊತ್ತಿದೆಯಾ? ಅಯ್ಯೋ, ಹಾಗಂದ್ರೆ ದುಡ್ಡನ್ನು ಕದಿಯೋದಲ್ಲ. ಬಟ್ಟೆಯ ಚೂರಿನಲ್ಲಿ ನಾಣ್ಯವನ್ನಿಟ್ಟು ಮಡಚಿ “ಉಫ್’ ಅಂತ ಕೈಮೇಲೆ ಊದಿ ಮಾಯ ಮಾಡುವುದು. ಸಿನಿಮಾಗಳಲ್ಲಿ ನಾಯಕರು ಹೀಗೆ ಮಾಡುವುದನ್ನು ನೋಡಿರುತ್ತೀರಿ. ಈ ಜಾದೂವನ್ನು ನೀವೂ ಮಾಡಬಹುದು.
ಬೇಕಾಗುವ ವಸ್ತು: ಬಟ್ಟೆ ಚೂರು, ನಾಣ್ಯ, ಸಿಲ್ವರ್ ಪೇಪರ್, ಕತ್ತರಿ
ಪ್ರದರ್ಶನ: ಜಾದೂಗಾರನ ಕೈಯಲ್ಲಿ ಕೆಂಪು ಬಟ್ಟೆ ಚೂರು ಹಾಗೂ ಒಂದು ನಾಣ್ಯ ಇದೆ. ಆತ ಅದನ್ನು ಎಲ್ಲರಿಗೂ ಎತ್ತಿ ತೋರಿಸುತ್ತಾನೆ. ನಂತರ ನಾಣ್ಯವನ್ನು, ಬಟ್ಟೆಯ ಒಳಗಿಟ್ಟು ಮಡಚುತ್ತಾನೆ. ಬಾಯಲ್ಲಿ ಏನೇನೋ ಮಂತ್ರ ಪಠಿಸುತ್ತಾ, ಬಟ್ಟೆ ಚೂರಿನ ಮುದ್ದೆಯನ್ನು ಬಿಡಿಸಿದರೆ ಅದರೊಳಗೆ ನಾಣ್ಯವೇ ಇಲ್ಲ! ಹಾಗಾದ್ರೆ ಆ ನಾಣ್ಯ ಎಲ್ಲಿ ಹೋಯ್ತು? ಜಾದೂಗಾರ ಹೇಳಿದ ಮಂತ್ರ ಯಾವುದು?
ತಯಾರಿ: ಅಚ್ಚರಿಯ ವಿಷಯ ಏನು ಎಂದರೆ ಜಾದೂಗಾರ ಜನರಿಗೆ ತೋರಿಸುವ ನಾಣ್ಯ ನಿಜವಾದ ನಾಣ್ಯವೇ ಅಲ್ಲ. ಅದು ನಾಣ್ಯವನ್ನೇ ಹೋಲುವ, ಅದೇ ಆಕಾರದ ಸಿಲ್ವರ್ ಪೇಪರ್! ಪ್ರದರ್ಶನಕ್ಕೆ ಮೊದಲು, ಸಿಲ್ವರ್ ಪೇಪರ್‌ಅನ್ನು ತೆಗೆದುಕೊಂಡು ನಾಣ್ಯದ ಆಕಾರಕ್ಕೆ ಕತ್ತರಿಸಿ. ನಂತರ ಪೇಪರ್‌ಅನ್ನು ನಾಣ್ಯದ ಮೇಲಿಟ್ಟು ಒತ್ತಿದರೆ, ನಾಣ್ಯದ ಮೇಲಿರುವ ಅಚ್ಚು ಸಿಲ್ವರ್ ಪೇಪರ್ ಮೇಲೆ ಮೂಡುತ್ತದೆ. ಆಗ ದೂರದಿಂದ ನೋಡುವವರಿಗೆ ಸಿಲ್ವರ್ ಪೇಪರ್ ಕೂಡ ನಾಣ್ಯದಂತೆಯೇ ತೋರುತ್ತದೆ. ನಕಲಿ ನಾಣ್ಯವನ್ನು, ಬಟ್ಟೆ ಚೂರಿನ ಒಳಗಿಟ್ಟು ಮುದ್ದೆ ಮಾಡಿ. ಸಿಲ್ವರ್ ಪೇಪರ್ ಕೂಡ ಬಟ್ಟೆಯ ಜೊತೆಗೇ ಮುದ್ದೆಯಾಗುತ್ತದೆ. ಒಂದು ಮಾತು ನೆನಪಿರಲಿ… ಸಿಲ್ವರ್ ಪೇಪರ್ ಪೂರ್ತಿಯಾಗಿ ಮುದ್ದೆಯಾಗಬೇಕು. ಇಲ್ಲದಿದ್ದರೆ ರಹಸ್ಯ ಬಯಲಾಗಿಬಿಡುತ್ತದೆ. ಪೇಪರ್ ಮುದ್ದೆಯಾಗುವವರೆಗೂ, ಬಾಯಲ್ಲಿ ಮಂತ್ರ ಹೇಳಿದಂತೆ ಮಾಡುತ್ತಾ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಿರಿ. ಆಮೇಲೆ ಪೇಪರ್ ಚೂರನ್ನು ಬೆರಳಿನ ಹಿಂಬದಿಯಲ್ಲಿ ಅಡಗಿಸಿಟ್ಟು, ಬಟ್ಟೆಯ ಚೂರನ್ನು ಬಿಡಿಸಿ, ನಾಣ್ಯ ಮಾಯವಾಗಿದೆ ಎಂದು ವೀಕ್ಷಕರು ಮೂಕವಿಸ್ಮಿತರಾಗುವರು.
ವಿನ್ಸೆಂಟ್ ಲೋಬೋ