ನಾಣ್ಯ ಮಾಯ ಮಾಡೋದು, ಉಂಗುರವನ್ನು ತೇಲಿಸೋದು, ಕಾರ್ಡ್ಸ್‌ನ ಕರಾಮತ್ತು ಇತ್ಯಾದಿ ಜಾದೂಗಳನ್ನು ಕಲಿತಿರುತ್ತೀರಾ, ಆದರೆ ಈ ಜಾದೂ ಅಂತಿಂಥಾ ಜಾದೂ ಅಲ್ಲ. ಇದು ಬೆಂಕಿಯ ಜೊತೆಗೆ ಆಡೋ ಆಟ. ಒಂದು ಬೆಂಕಿಕಡ್ಡಿಯನ್ನು ಒಂದೇ ಬಾರಿ ಗೀರೋಕೆ ಮಾತ್ರ ಸಾಧ್ಯ ಅನ್ನೋದು ಎಲ್ಲರಿಗೂ ಗೊತ್ತಿರುತ್ತೆ. ಆದ್ರೆ, ಬಳಸಿದ ಬೆಂಕಿಕಡ್ಡಿಯಿಂದ ಮತ್ತೆ ಬೆಂಕಿ ತರಿಸೋ ಶಕ್ತಿ ಇದೆಯಾ? ಅಂದರೆ ಬೆಂಕಿಯನ್ನೇ ಸೃಷ್ಟಿಸೋ ಶಕ್ತಿ! ಆ ಜಾದೂ ಇಲ್ಲಿದೆ ನೋಡಿ.
ಬೇಕಾಗುವ ವಸ್ತುಗಳು: 2 ಕೆಂಪು ಬೆಂಕಿಕಡ್ಡಿಗಳು, ಪಾರದರ್ಶಕ ಗಮ್‌ಟೇಪ್, ಮಾರ್ಕರ್ ಪೆನ್
ಪ್ರದರ್ಶನ: ಜಾದೂಗಾರನ ಕೈಯಲ್ಲಿ ಒಂದು ಬೆಂಕಿಕಡ್ಡಿ ಇದೆ. ಆತ ಅದನ್ನು ಗೀರಿ ಬೆಂಕಿ ಹತ್ತಿಸುತ್ತಾನೆ. ನಂತರ ಬೆಂಕಿಕಡ್ಡಿಯನ್ನು ಅಲ್ಲಾಡಿಸುತ್ತಾ ಬೆಂಕಿ ಆರಿಸುತ್ತಾನೆ. ಪುನಃ ಅದೇ ಬೆಂಕಿಕಡ್ಡಿಯನ್ನು ಗೀರಿದರೆ ಬೆಂಕಿ ಫಕ್ಕನೆ ಹತ್ತಿಕೊಳ್ಳುತ್ತದೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಬೆಂಕಿಕಡ್ಡಿಯಲ್ಲಿ. ಅದೇನೆಂದರೆ, ನೀವು ಜಾದೂ ಮಾಡಲು ಒಂದಲ್ಲ, ಎರಡು ಬೆಂಕಿಕಡ್ಡಿಯನ್ನು ಬಳಸುತ್ತೀರಿ. ಆದರೆ, ನಿಮ್ಮ ಕೈಯಲ್ಲಿ ಎರಡು ಬೆಂಕಿಕಡ್ಡಿಗಳಿರುವ ವಿಷಯ ನೋಡುಗರಿಗೆ ತಿಳಿಯಬಾರದು. ಅದಕ್ಕೇನು ಮಾಡಬೇಕೆಂದರೆ- ಎರಡು ಬೆಂಕಿಕಡ್ಡಿಗಳನ್ನು ತೆಗೆದುಕೊಂಡು ಒಂದರ ತುದಿಗೆ ಕಪ್ಪು ಬಣ್ಣದ ಮಾರ್ಕರ್‌ನಲ್ಲಿ ಬಣ್ಣ ಹಚ್ಚಿ. ಆಗ ಅದು ಬಳಸಿದ ಕಡ್ಡಿಯಂತೆ ಕಾಣಿಸುತ್ತದೆ. ನಂತರ ಎರಡೂ ಕಡ್ಡಿಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ವಿರುದ್ಧ ದಿಕ್ಕಿನಲ್ಲಿ ಇಟ್ಟು ಗಮ್‌ಟೇಪ್ ಹಚ್ಚಿ. ಕಪ್ಪುತುದಿಯ ಬೆಂಕಿಕಡ್ಡಿ ಕಾಣಿಸದಂತೆ ಹಿಡಿದುಕೊಂಡು, ಕೆಂಪುತುದಿಯ ಕಡ್ಡಿಯನ್ನು ಗೀರಿ ಬೆಂಕಿ ಹಚ್ಚಿ. ನಂತರ ಕೈಯನ್ನು ಅಲ್ಲಾಡಿಸುತ್ತಾ ಆ ಬೆಂಕಿ ಆರಿಸುವಂತೆ ಮಾಡುತ್ತಲೇ, ಕಪ್ಪುತುದಿಯ ಬೆಂಕಿಕಡ್ಡಿ ಮುಂದಕ್ಕೆ ಬರುವಂತೆ ಮಾಡಿ. ನಂದಿಹೋದ ಕಡ್ಡಿಯಂತೆ ಕಾಣುವ ಅದನ್ನು ಗೀರಿ ಪುನಃ ಬೆಂಕಿ ತರಿಸಿ ಗೆಳೆಯರಲ್ಲಿ ಬೆರಗು ಮೂಡಿಸಿ. ಪ್ರದರ್ಶನಕ್ಕೂ ಮೊದಲು ಪ್ರಯೋಗಿಸಿ ಕರಗತ ಮಾಡಿಕೊಳ್ಳಿ.
ವಿನ್ಸೆಂಟ್ ಲೋಬೋ