ಪೆನ್ಸಿಲ್ ತೆಗೆದುಕೊಂಡು, ಹಾಳೆಗೆ ಚುಚ್ಚಿದರೆ ಏನಾಗುತ್ತದೆ? ಹಾಳೆ ತೂತಾಗುತ್ತದೆ. ಅದೇ ಪೆನ್ಸಿಲ್‌ನಿಂದ ನೋಟಿಗೆ (ಕರೆನ್ಸಿ ನೋಟು) ಚುಚ್ಚಿದರೆ ಏನಾಗುತ್ತೆ? ಅದೂ ಕೂಡಾ ತೂತಾಗುತ್ತೆ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ. ಆದರೆ ಏನೂ ಆಗುವುದಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಆಶ್ಚರ್ಯ ಆಗುತ್ತಿದೆ ಇಲ್ವಾ? ಅದೇ ಈ ಮ್ಯಾಜಿಕ್ ಸ್ವಾರಸ್ಯ.
ಬೇಕಾಗುವ ವಸ್ತು: ವಿದೇಶಿ ನೋಟು(ಆಟವಾಡಲು ಬಳಸುವ ಡಮ್ಮಿ ಕರೆನ್ಸಿ), ಪೆನ್ಸಿಲ್ ಹಾಗೂ ಪೇಪರ್/ ಹಾಳೆ.
ಪ್ರದರ್ಶನ: ನೋಟಿನ ಮೇಲೆ ತೂತು ಮಾಡಬೇಕಾಗಿರುವುದರಿಂದ ಈ ಮ್ಯಾಜಿಕ್‌ಗೆ ನಿಜವಾದ ಭಾರತೀಯ ನೋಟನ್ನು ಬಳಸಬಾರದು. ಅದರ ಬದಲಾಗಿ ಫ್ಯಾನ್ಸಿ ಸ್ಟೋರುಗಳಲ್ಲಿ ದೊರೆಯುವ ಆಟದ ವಿದೇಶಿ ನೋಟನ್ನು ಬಳಸಬಹುದು. ಜಾದೂಗಾರನ ಕೈಯಲ್ಲಿ ಒಂದು ನೋಟು ಹಾಗೂ ನೋಟಿಗಿಂತ ಸ್ವಲ್ಪ ದೊಡ್ಡದಾದ ಒಂದು ಪೇಪರ್ ಇದೆ. ಆತ, ನೋಟನ್ನು ಪ್ರೇಕ್ಷಕರಿಗೆ ತೋರಿಸುತ್ತಾ, ಅದನ್ನು ಪೇಪರ್‌ನೊಳಗೆ ಇಟ್ಟು (ಪರ್ಸ್‌ನಲ್ಲಿ ನೋಟುಗಳನ್ನು ಒಂದರ ಮೇಲೆ ಒಂದು ಇಡುವಂತೆ) ಅದನ್ನು ಒಂದು ಬಾರಿ ಮಡಚುತ್ತಾನೆ. ನಂತರ ಚೂಪಾದ ಪೆನ್ಸಿಲ್ ತೆಗೆದುಕೊಂಡು, ಪೇಪರ್ ಹಾಗೂ ನೋಟನ್ನು ಸೇರಿಸಿ ಒಳಗಿನಿಂದ ಚುಚ್ಚುತ್ತಾನೆ. ಪೇಪರ್ ಹಾಗೂ ನೋಟನ್ನು ಛೇದಿಸಿಕೊಂಡು ಪೆನ್ಸಿಲ್ ಹೊರಕ್ಕೆ ಬರುತ್ತದೆ. ನಂತರ ಪೆನ್ಸಿಲ್ ಅನ್ನು ಹೊರಕ್ಕೆ ತೆಗೆದು, ಪೇಪರ್ ಹಾಗೂ ನೋಟನ್ನು ಬೇರೆ ಬೇರೆ ಮಾಡಿ ತೋರಿಸುತ್ತಾನೆ. ಪೆನ್ಸಿಲ್‌ನಿಂದ ಚುಚ್ಚಲ್ಪಟ್ಟ ಪೇಪರ್‌ಗೆ ರಂಧ್ರವಾಗಿರುತ್ತದೆ. ಆದರೆ, ನೋಟಿಗೆ ಯಾವುದೇ ತೊಂದರೆಯಾಗಿರುವುದಿಲ್ಲ.
ತಯಾರಿ: ನೀವು ತೆಗೆದುಕೊಳ್ಳುವ ನೋಟನ್ನು ಚಿತ್ರದಲ್ಲಿ ತೋರಿಸಿರುವಂತೆ ಮಧ್ಯದಲ್ಲಿ ಒಂದಿಂಚು ಉದ್ದ ಕತ್ತರಿಸಬೇಕು. ನಂತರ ನೋಟನ್ನು, ಪೇಪರ್‌ನೊಳಗೆ ಇಟ್ಟು ಮಡಚಿರಿ. ಈಗ ನೋಟಿನಲ್ಲಿ ಕೊರೆದ ರಂಧ್ರದ ಒಳಗಿನಿಂದ ಪೆನ್ಸಿಲ್ ತೂರಿಸಿ. ಅಲ್ಲಿಂದ ತೂರಿ ಬಂದ ಪೆನ್ಸಿಲ್, ಪೇಪರ್ ಅನ್ನು ಛೇದಿಸಿ ಹೊರಕ್ಕೆ ಬರುತ್ತದೆ. ಕೊನೆಗೆ, ಪೇಪರ್ ಹಾಗೂ ನೋಟನ್ನು ಪ್ರೇಕ್ಷಕರಿಗೆ ತೋರಿಸುವಾಗ, ಪೇಪರ್ ಮೇಲಿನ ರಂಧ್ರ ಕಾಣಿಸುತ್ತದೆ. ಆದರೆ, ನೋಟಿನ ಮೇಲೆ ನೀವು ಮೊದಲೇ ಮಾಡಿದ್ದ ಕತ್ತರಿ ಕೆಲಸ ಯಾರಿಗೂ ಕಾಣಿಸುವುದಿಲ್ಲ. ಪೆನ್ಸಿಲ್‌ಅನ್ನು ನೋಟಿನ ರಂಧ್ರದೊಳಗೆ ತೂರಿಸುವಾಗ, ಜಾಗೃತೆ ವಹಿಸಿ.
ವಿನ್ಸೆಂಟ್ ಲೋಬೋ