Advertisement
ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಭಾನುವಾರದ ಘಟನೆಯ ಬಳಿಕ ಶಿವಪ್ಪನ ಮನೆ ಮತ್ತು ಸ್ವಗ್ರಾಮ ಬಟ್ಟೂರಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದಲ್ಲಿ ಮೂರು ಎಕರೆ ಜಮೀನು ಮತ್ತು ಚಿಕ್ಕ ಮನೆ ಹೊಂದಿರುವ ಶಿವಪ್ಪನ ತಂದೆ ದುಂಡಪ್ಪಗೆ ಪತ್ನಿ ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಆಸರೆಯಾಗಿದ್ದ ಒಬ್ಬನೇ ಮಗ ನಮ್ಮಿಂದ ದೂರವಾದ ಎಂದು ಗೋಳಿಡುತ್ತಿದ್ದಾರೆ.
“ಶನಿವಾರ ಬೆಳಗ್ಗೆ ಮಗ ಕೆಲಸಕ್ಕೆ ಹೋಗಿದ್ದು, ರಾತ್ರಿ ಲಾರಿ ಕ್ಲೀನರ್ ಆತನನ್ನು ಮನೆಗೆ ಬಿಟ್ಟು ಹೋದಾ. ಬರುವಾಗಲೇ ಏದುರುಸಿರು ಬಿಡುತ್ತಿದ್ದ. ನೀರು ಕುಡಿದು, ನನಗೆ ಪೊಲೀಸ್‌ರು ಬೆನ್ನಟ್ಟಿ ಹೊಡೆದಾರ, ನನಗ ತ್ರಾಸ್ ಆಗಾಕತೈತಿ ಅಂತಾ ಒದ್ದಾಡುತ್ತಿರುವಾಗ ಗಾಡಿ ಮಾಡಿಕೊಂಡು ಲಕ್ಷ್ಮೇಶ್ವರದ ಸರ್ಕಾರಿ ದವಾಖಾನೆಗೆ ಕರೆದೊಯ್ದೆವು. ಅಲ್ಲಿ ಡಾಕ್ಟರ್ ಬೇರೆ ದವಾಖಾನೆಗೆ ಒಯ್ಯಿರಿ ಎಂದರು. ಬೇರೆ ದವಾಖಾನಿಗೆ ಹೋಗೋದರಾಗ ಮಗ ನಮ್ಮ ಕೈಬಿಟ್ಟು ಹೋಗಿದ್ದ. ಅಲ್ಲಿಂದ ನಾವು ನಸುಕಿನಾಗ ಠಾಣೆಯಾಗ ಹೆಣಾ ತೆಗೆದುಕೊಂಡು ಹೋದಾಗ ಪೊಲೀಸರು ನಮಗ ಬೆದರಿಸಿ ಕಳಿಸ್ಯಾರ. ನಂತರ 7 ಗಂಟೆ ಮ್ಯಾಲೆ ಸರ್ಕಾರಿ ದವಾಖಾನಿಯಿಂದ ಮತ್ತ ಪೊಲೀಸ್ ಠಾಣೆಗೆ ಬಂದ ಕುಂತಿವಿ. ಆದರ ನನ್ನ ಮಗನ ನೋವಿನಾಗ ನಾವಿದ್ವಿ, ಯಾರೋ ಕೂಡಿ ಹಿಂಗೆಲ್ಲ ಮಾಡ್ಯಾರ. ಆದರೆ ನನಗೆ ನ್ಯಾಯ ದೊರಕಿಸಿ ಕೊಡೋವರೆಗೂ ಪೊಲೀಸ್ ಠಾಣೆ ಮುಂದನ ಕೂಡತಿನಿ’ ಎಂದು ದುಂಡಪ್ಪ ಆಕ್ರೋಶಭರಿತರಾಗಿ ನುಡಿದರು.
Related Articles
ವೈದ್ಯಕೀಯ ಪರೀಕ್ಷೆ ಬಳಿಕ ಭಾನುವಾರ ರಾತ್ರಿ ಪೊಲೀಸ್ ಭದ್ರತೆಯ ನಡುವೆ ಶಿವಪ್ಪನ ಅಂತ್ಯಸಂಸ್ಕಾರ ನಡೆದಿದೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಪಟ್ಟಂತೆ ಗ್ರಾಮದ 13 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಬೆಳಿಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವರು ಊರು ತೊರೆದಿದ್ದಾರೆ.
Advertisement
– ಮಲ್ಲಿಕಾರ್ಜುನ ಕಳಸಾಪುರ