ಚೆನ್ನೈ: ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಧುರೈನ ಸುಕನ್ಯಾ ಬಿರಿಯಾನಿ ಸ್ಟಾಲ್ ನ ಮಾಲೀಕರು ಘೋಷಿಸಿದ ಯೋಜನೆಯೊಂದು ಇದೀಗ ಭಾರೀ ಸಂಚಲನ ಸೃಷ್ಟಿಸಿದೆ.
ತಮ್ಮ ಹೊಟೇಲ್ ಗೆ ಹೆಚ್ಚು ಹೆಚ್ಚು ಗ್ರಾಹಕರು ಬರಬೇಕೆಂದು ಯೋಜಿಸಿದ ಮಾಲೀಕ, 5 ಪೈಸೆ ನಾಣ್ಯವನ್ನು ಯಾರು ತರುತ್ತಾರೋ ಅವರಿಗೆ ಉಚಿತ ಬಿರಿಯಾನಿ ನೀಡುವುದಾಗಿ ಘೋಷಿಸಿದ್ದಾನೆ. ಇದಕ್ಕಾಗಿ ಹಲವು ಕಡೆ ಪೋಸ್ಟರ್ ಗಳನ್ನು ಕೂಡ ಹಾಕಿಸಿದ್ದ.
ಪರಿಣಾಮವೆಂಬಂತೆ ನೂರಾರು ಮಂದಿ 5 ಪೈಸೆ ನಾಣ್ಯವನ್ನು ಹಿಡಿದುಕೊಂಡು ಬಿರಿಯಾನಿ ಸ್ಟಾಲ್ ಮುಂದೆ ಜಮಾಯಿಸಿದ್ದಾರೆ. ಒಂದು ಹಂತದಲ್ಲಿ 300ಕ್ಕಿಂತ ಹೆಚ್ಚು ಮಂದಿ ಅಲ್ಲಿ ಸೇರಿದ್ದರು ಎಂದು ವರದಿ ತಿಳಿಸಿದೆ. ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆಯೂ ಅದ್ದರಿಂದ ಬಿರಿಯಾನಿ ಸ್ಟಾಲ್ ಮಾಲೀಕ ಬೇರೆ ದಾರಿಯಿಲ್ಲದೆ ಬಿರಿಯಾನಿ ನೀಡುವುದನ್ನು ನಿಲ್ಲಿಸಿ ಸ್ಟಾಲ್ ಗೆ ಬೀಗ ಜಡಿದಿದ್ದಾನೆ.
ಕೇವಲ ಬಿರಿಯಾನಿಗಾಗಿ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಜನರ ನಡೆಯ ಬಗ್ಗೆ ಪೊಲೀಸರು ಕೂಡ ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ ಜನರ ಗುಂಪನ್ನು ಚದುರಿಸಿದ್ದಾರೆ. ಈ ವೇಳೆ ಕೆಲವರು ತಾವು 5 ಪೈಸೆಯ ನಾಣ್ಯವನ್ನು ತಂದರೂ ಬಿರಿಯಾನಿ ಸಿಗಲಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಪ್ರಸಂಗವೂ ನಡೆದಿದೆ.