ಮಡಿಕೇರಿ: ಕಾಡಾನೆ ದಾಳಿ ಮಾಡಿದ ಸಂದರ್ಭ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದ ಅರಣ್ಯ ಸಿಬಂದಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಚಿನಿವಾಡದಲ್ಲಿ ಮಂಗಳವಾರ ಸಂಭವಿಸಿದೆ.
ತೇಜಸ್ ತೀವ್ರವಾಗಿ ಗಾಯಗೊಂಡ ಅರಣ್ಯ ಇಲಾಖೆಯ ಸಿಬಂದಿ. ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕೆಲವು ದಿನಗಳ ಹಿಂದೆ ಕಾಡಾನೆಯೊಂದು ಮರಿಗೆ ಜನ್ಮ ನೀಡಿದ್ದು, ಮರಿಯು ಆ ಕ್ಷಣವೇ ಸಾವನ್ನಪ್ಪಿತ್ತು. ಮಂಗಳವಾರ ಅರಣ್ಯ ಸಿಬಂದಿ ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಕಾಡಾನೆಯು ಅವರ ಮೇಲೆ ದಾಳಿಗೆ ಮುಂದಾಯಿತು. ತತ್ಕ್ಷಣ ಜಾಗೃತರಾದ ತೇಜಸ್ ಓಡಿ ಹೋಗಿ ಆನೆಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.