ಮಡಿಕೇರಿ: ಕಾಡುಕೋಣವನ್ನು ಗುಂಡಿಕ್ಕಿ ಕೊಂದು ಮಾಂಸವನ್ನಾಗಿ ಕತ್ತರಿಸಿ ಸಾಗಿಸಿದ ಆರೋಪದಡಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬಂದಿ ಬಂಧಿಸಿದ್ದಾರೆ.
ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದ ಮಹಮ್ಮದ್ ಜಾಬೀರ್ (29) ಹಾಗೂ ನೌಫಲ್ (24) ಬಂಧಿತರು. ಅವರ ಬಳಿಯಿಂದ ಒಂದು ಕಾರು ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
6 ಆರೋಪಿಗಳು ತಲೆಮರೆಸಿ ಕೊಂಡಿದ್ದು, ಅವರ ಬಂಧನಕ್ಕೆ ಕಾರ್ಯಾಚರಣೆಯನ್ನು ಚುರುಕು ಗೊಳಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕುಶಾಲನಗರ ವಲಯ ವ್ಯಾಪ್ತಿಯ ಮಾಲ್ದಾರೆ ಶಾಖೆಯ ಮಾಲ್ದಾರೆ ಗಸ್ತಿನ ಪಿರಿಯಾಪಟ್ಟಣ-ಸಿದ್ದಾಪುರ ರಸ್ತೆಯಂಚಿನಲ್ಲಿ ಕಾಡು ಕೋಣ ವೊಂದವನ್ನು ಗುಂಡಿಕ್ಕಿ ಕೊಂದು ಮಾಂಸವನ್ನಾಗಿ ಕತ್ತರಿಸಿಕೊಂಡು ಸಾಗಿಸಿ ರುವ ಸಂಬಂಧ ಮಾ. 14ರಂದು ಪ್ರಕರಣ ದಾಖಲಾಗಿತ್ತು.
ಮಾ. 24ರಂದು ಆನೆಚೌಕೂರು ವನ್ಯಜೀವಿ ವಲಯದ ಪಿರಿಯಾಪಟ್ಟಣ-ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ಕಾಡುಕೋಣವನ್ನು ಹತ್ಯೆ ಮಾಡಿ ಮಾಂಸ ಮಾಡಿ ಸಾಗಿಸಿದ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಗಳನ್ನು ಪತ್ತೆಹಚ್ಚಲು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಸಿಬಂದಿ ಕಾರ್ಯಪ್ರವೃತ್ತರಾಗಿದ್ದರು.
ತನಿಖಾ ತಂಡಕ್ಕೆ ದೊರೆತ ಖಚಿತ ಮಾಹಿತಿಯನ್ವಯ ಇಬ್ಬರು ಆರೋಪಿಗಳನ್ನು ಬಂಧಿಸಿ ವೀರಾಜ ಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.