Advertisement

Madikeri/Sulya: ಮುಂದುವರಿದ ಬಿರುಸಿನ ಶೋಧ

09:05 AM Mar 20, 2024 | Team Udayavani |

ಮಡಿಕೇರಿ/ಸುಳ್ಯ: ದಕ್ಷಿಣ ಕನ್ನಡ-ಕೊಡಗು ಗಡಿ ಭಾಗದ ಮಡಿಕೇರಿ ತಾಲೂಕಿನ ಕೂಜಿಮಲೆ ಎಸ್ಟೇಟ್‌ ಪ್ರದೇಶಕ್ಕೆ ನಾಲ್ವರು ನಕ್ಸಲರು ಭೇಟಿ ನೀಡಿ ತೆರಳಿದ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ದಳದ ಸಿಬಂದಿ ಮಂಗಳವಾರವೂ ಶೋಧ ಮುಂದುವರಿಸಿದ್ದಾರೆ. ಕಾರ್ಕಳ ನಕ್ಸಲ್‌ ನಿಗ್ರಹ ದಳದ ಎಸ್‌.ಪಿ. ಜಿತೇಂದ್ರ ಕುಮಾರ್‌ ದಯಾಮ ಮಂಗಳವಾರ ಕಲ್ಮಕಾರು ಸಮೀಪದ ಕಡಮಕಲ್ಲು ಪ್ರದೇಶಕ್ಕೆ ಭೇಟಿ ನೀಡಿದರು.

Advertisement

ಇದೇ ವೇಳೆ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಅವರು, ಕೂಜಿಮಲೆ ಎಸ್ಟೇಟ್‌ ಅಂಗಡಿಗೆ ಬಂದು ದಿನಸಿ ಪದಾರ್ಥ ತೆಗೆದುಕೊಂಡು ಹೋಗಿ ರುವ ಶಂಕಿತ ವ್ಯಕ್ತಿಗಳು ನಿಷೇಧಿತ ನಕ್ಸಲ್‌ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಶಸ್ತ್ರ ಸಜ್ಜಿತರಾಗಿ ಮಾ. 17ರ ಸಂಜೆ ವೇಳೆ ಕೂಜಿಮಲೆ ರಬ್ಬರ್‌ ಎಸ್ಟೇಟ್‌ನ ಅಂಗಡಿಗೆ ಆಗಮಿಸಿ 25 ಕೆಜಿ ಅಕ್ಕಿ ಸಹಿತ ಇತರ ವಸ್ತುಗಳನ್ನು ಖರೀದಿಸಿದ್ದಾರೆ. ಈ ವೇಳೆ ಕನ್ನಡ ಭಾಷೆಯಲ್ಲಿ ತಮ್ಮನ್ನು ನಕ್ಸಲ್‌ ಹೋರಾಟಗಾರರು ಎಂದೇ ಪರಿಚಯಿಸಿಕೊಂಡಿದ್ದಲ್ಲದೇ, ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ತಿಳಿಸಿದ್ದಾರೆ.

ತನಿಖೆ ಸಂದರ್ಭ ಅಂಗಡಿ ಮಾಲಕರಿಗೆ ಕೆಲವು ಫೋಟೋಗಳನ್ನು ತೋರಿಸಿದಾಗ ಓರ್ವ ವ್ಯಕ್ತಿ ನಕ್ಸಲ್‌ ಮುಖಂಡ ವಿಕ್ರಂ ಗೌಡನನ್ನು ಹೋಲು ತ್ತಿರುವುದಾಗಿ ಹೇಳಿದ್ದಾರೆ. ಇನ್ನುಳಿದ ಮೂವರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು. ಈ ಪ್ರಕರಣವನ್ನು ಜಿಲ್ಲಾ ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದರು.

ಸೋಮವಾರ ಕೂಜಿಮಲೆ, ಕಡಮ ಕಲ್ಲು ಹಾಗೂ ಬಾಳುಗೋಡಿನ ಉಪ್ಪುಕಳ ಪ್ರದೇಶದಲ್ಲಿ ಶೋಧ ನಡೆಸಲಾಗಿತ್ತು. ಮಂಗಳವಾರ ಬಿಸ್ಲೆ, ಕಡಮಕಲ್ಲು, ಸಂಪಾಜೆ ಸಮೀಪ, ಕರಿಕೆ, ನಕ್ಸಲರು ಭೇಟಿ ನೀಡಿದ ಕೂಜಿಮಲೆ ಭಾಗದಲ್ಲಿ ಕಾರ್ಯಾಚರಣೆ ನಡೆಸಿದರು. ಕಾರ್ಕಳ ದಿಂದ ಒಟ್ಟು 76 ಎಎನ್‌ಎಫ್‌ ಸಿಬಂದಿ ಆಗಮಿಸಿದ್ದಾರೆ. ಎರಡು ಶ್ವಾನ ದಳ, ಒಂದು ಡ್ರೋನ್‌ ಮೂಲಕವೂ ಶೋಧ ಕಾರ್ಯ ನಡೆಯುತ್ತಿದೆ. ಮುಂದಿನ ಹತ್ತು ದಿನಗಳ ವರೆಗೆ ಶೋಧ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.

Advertisement

ಎಎಎನ್‌ಎಫ್‌ ಡಿವೈಎಸ್‌ಪಿ ರಾಘವೇಂದ್ರ, ಇನ್‌ಸ್ಪೆಕ್ಟರ್‌ ಭೀಮಸಿಂಗ್‌, ಅಧಿಕಾರಿಗಳು, ಸಿಬಂದಿ ಎಸ್‌ಪಿ ಅವರ ಜತೆಗಿದ್ದರು. ನಕ್ಸಲರು ಭೇಟಿ ನೀಡಿದ ಕೂಜಿಮಲೆ ಎಸ್ಟೇಟ್‌ ಪ್ರದೇಶ ಅಂಗಡಿಗೆ ಮಡಿಕೇರಿ ಪೊಲೀಸರು ಮಂಗಳವಾರವೂ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಮಡಿಕೇರಿಯಲ್ಲಿ ಸಭೆ

ಸೋಮವಾರ ರಾತ್ರಿ ಮಡಿಕೇರಿಯ ಎಸ್‌ಪಿ ಕಚೇರಿಯಲ್ಲಿ ಕೊಡಗು ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಎಎನ್‌ಎಫ್‌ ಎಸ್‌.ಪಿ. ಜಿತೇಂದ್ರ ಕುಮಾರ್‌ ದಯಾಮ ನೇತೃತ್ವದಲ್ಲಿ ಎಎನ್‌ಎಫ್‌ ಹಾಗೂ ಪೊಲೀಸರ ಸಭೆ ನಡೆಸಿ ತನಿಖೆ ಹಾಗೂ ಶೋಧ ಕಾರ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.

ತ್ರಾಸದ ಪಯಣ

ಕೂಜಿಮಲೆ, ಕಡಮಕಲ್ಲು ಮಡಿಕೇರಿಯ ಗಾಳಿಬೀಡು ಸಮೀಪ ವಿದ್ದರೂ ಇಲ್ಲಿಗೆ ಆಗಮಿಸಲು ತ್ರಾಸದ ಪಯಣ ಇದೆ. ಕಡಮಕಲ್ಲು-ಗಾಳಿಬೀಡು ಸಂಪರ್ಕ ರಸ್ತೆ ಆಗದೇ ಇರುವುದರಿಂದ ಹಾಗೂ ಆ ಬೇಡಿಕೆ ಈಡೇರದೇ ಇರುವುದರಿಂದ ಈ ಭಾಗದಲ್ಲಿರುವ ಕೊಡಗು ಜಿಲ್ಲಾ ಹಾಗೂ ಮಡಿಕೇರಿ ಠಾಣೆ ವ್ಯಾಪ್ತಿಯ ಪ್ರಕರಣಗಳ ತನಿಖೆಗೆ ಸುತ್ತು ಬಳಸಿ ಸಂಚರಿಸುವುದು ಅನಿವಾರ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next