ಮಡಿಕೇರಿ: ಕಾಫಿ ತೋಟದಲ್ಲಿದ್ದ ಬೀಟೆ ಮರವನ್ನು ಕಡಿದು ನಾಟಾಗಳನ್ನಾಗಿ ಪರಿವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ತಿತಿಮತಿ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬಂದಿ ಮೂವರು ಆರೋಪಿಗಳನ್ನು ಬಂಧಿಸಿ 5 ಲಕ್ಷ ರೂ. ಮೌಲ್ಯದ ಬೀಟೆ ಮರವನ್ನು ವಶಕ್ಕೆ ಪಡೆದಿದ್ದಾರೆ.
ಗೋಣಿಕೊಪ್ಪ ಕಾಳಪ್ಪ ಕಾಲನಿ ನಿವಾಸಿ ಸಾಜನ್, ತಿತಿಮತಿ ನೆಹರೂ ಕಾಲನಿಯ ಚಾತ ಹಾಗೂ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮ ನಿವಾಸಿ ಬಿ.ಎಸ್.ಕೃಷ್ಣಪ್ಪ ಎಂಬ ಆರೋಪಿಗಳನ್ನು ತೋಟದಲ್ಲೇ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
5 ಲಕ್ಷ ರೂ. ಮೌಲ್ಯದ 10 ಬೀಟೆ ನಾಟಾಗಳು, 4 ಬೀಟೆ ಬಿಲ್ಲೆಟ್ಸ್‌ಗಳು ಹಾಗೂ 2 ಕೊಡಲಿಗಳನ್ನು ವಶಕ್ಕೆ ಪಡೆಯಲಾಗಿದೆ.
ವಿರಾಜಪೇಟೆ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಿತಿಮತಿ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು, ಅರಣ್ಯಾಧಿಕಾರಿ ಬಿ.ಎಂ.ಶಂಕರ್, ಉಪ ವಲಯ ಅರಣ್ಯಾಧಿಕಾರಿ ಕೆ.ಜಿ. ದಿವಾಕರ್, ಗಣೇಶ್, ನಾಗರಾಜ್ ಶೇಟ್, ರಕ್ಷಿತ್, ಅರಣ್ಯ ರಕ್ಷಕರಾದ ಬಿ.ಎಂ.ಪೊನ್ನಪ್ಪ, ಅಂತೋಣಿ ಪ್ರಕಾಶ್, ಕೆ.ಆರ್. ಚೇತನ್ ಹಾಗೂ ಆರ್.ಆರ್.ಟಿ. ಸಿಬಂದಿ ಪಾಲ್ಗೊಂಡಿದ್ದರು.