Advertisement

ಮಡಿಕೇರಿ-ಸಂಪಾಜೆ ಘನ ವಾಹನ ಸಂಚಾರ ನಿಷೇಧ: 5 ಪರ್ಯಾಯ ರಸ್ತೆಗಳಿದ್ದರೂ ಅಭಿವೃದ್ಧಿ ನಿರ್ಲಕ್ಷ್ಯ

09:09 AM Aug 04, 2022 | Team Udayavani |

ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಡಿಕೇರಿ-ಸಂಪಾಜೆ ರಸ್ತೆ ಬಿರುಕು ಬಿಟ್ಟಿದ್ದು ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಪರ್ಯಾಯ ಓಡಾಟಕ್ಕೆ ಐದು ರಸ್ತೆಗಳಿದ್ದರೂ ಈ ಬಾರಿಯೂ ಅವು ಸಿದ್ಧವಾಗಿಲ್ಲ.

Advertisement

ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ಅವಘಡದಿಂದ ಮಡಿಕೇರಿ-ಸಂಪಾಜೆ ನಡುವೆ ಕೆಲವು ತಿಂಗಳು ಸಂಚಾರ ವ್ಯತ್ಯಯಗೊಂಡಿತ್ತು. ಈ ಬಾರಿ ಮತ್ತೆ ಅದೇ ಸಮಸ್ಯೆ ಎದುರಾಗಿದೆ. ತುರ್ತು ಸಂದರ್ಭ ಎದುರಿಸಲು ಪರ್ಯಾಯ ರಸ್ತೆಗಳು ಅಪೂರ್ಣ ಹಂತದಲ್ಲೇ ಇರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷéಕ್ಕೆ ಜ್ವಲಂತ ಉದಾಹರಣೆ.

ಪರ್ಯಾಯ ರಸ್ತೆಗಳಿವು
ಅರಂತೋಡು -ಸಂಪಾಜೆ -ಕಲ್ಲುಗುಂಡಿ-ಬಾಲೆಂಬಿ- ದಬ್ಬಡ್ಕ- ಕೊಪ್ಪಟ್ಟಿ -ಚೆಟ್ಟಿಮಾನಿ- ಭಾಗಮಂಡಲ -ಮಡಿಕೇರಿ ನಡುವೆ 72 ಕಿ.ಮೀ. ದೂರದ ರಸ್ತೆಯಲ್ಲಿ 1 ಕಿ.ಮೀ. ದೂರಕ್ಕೆ ಅರಣ್ಯ ಇಲಾಖೆ ತಕರಾರು ಬಗೆಹರಿದಿಲ್ಲ. ಬ್ರಿಟಿಷರ ಕಾಲದ ತೊಡಿಕಾನ-ಪಟ್ಟಿಘಾಟಿ-ತಣ್ಣಿಮಾನಿ-ಭಾಗಮಂಡಲ ರಸ್ತೆಯು ದ.ಕ. ಮತ್ತು ಕೊಡಗು ಜಿಲ್ಲೆಯನ್ನು ಅತಿ ಕಡಿಮೆ ಅವಧಿಯಲ್ಲಿ ಸಂಪರ್ಕಿಸುವಂಥದ್ದು. ಇಲ್ಲಿ 6 ಕಿ.ಮೀ. ರಸ್ತೆ ಅಭಿವೃದ್ಧಿಗೆ ಅರಣ್ಯ ಅಡ್ಡಿಯಾಗಿದೆ. ಮೂರನೆಯದು ಪೆರಾಜೆ- ಪಟ್ಟಿಘಾಟಿ-ಆವಂದೂರು- ತಣ್ಣಿಮಾನಿ ರಸ್ತೆ. ಇದರಲ್ಲಿ ಭಾಗಮಂಡಲಕ್ಕೆ 29 ಕಿ.ಮೀ. ಇಲ್ಲೂ ಅರಣ್ಯ ಭೂಮಿ ಸಮಸ್ಯೆ, ರಸ್ತೆ ವಿಸ್ತರಣೆಗೆ ಅಡ್ಡಗಾಲು. 4ನೆಯದು ಅರಂತೋಡು -ಮರ್ಕಂಜ -ಎಲಿಮಲೆ -ಸುಬ್ರಹ್ಮಣ್ಯ- ಕಲ್ಮಕಾರು -ಗಾಳಿಬೀಡು ರಸ್ತೆ. ಇದರಲ್ಲಿ ಸುಬ್ರಹ್ಮಣ್ಯದಿಂದ ಮಡಿಕೇರಿಗೆ ಕೇವಲ 45 ಕಿ.ಮೀ. 1972ರಲ್ಲಿಯೇ ಶಿಲಾನ್ಯಾಸ ನಡೆದಿದ್ದರೂ ಅರಣ್ಯ ವ್ಯಾಪ್ತಿಗೆ ಸೇರಿರುವುದರಿಂದ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿಲ್ಲ.

ಏಕೈಕ ರಸ್ತೆ
ಪ್ರತಿ ಬಾರಿಯೂ ಮಡಿಕೇರಿ-ಸುಳ್ಯ ನಡುವೆ ಏಕೈಕ ಕೊಂಡಿ ಆಗಿದ್ದದ್ದು ಸುಳ್ಯ-ಆಲೆಟ್ಟಿ ಪಾಣತ್ತೂರು- ಕರಿಕೆ- ಭಾಗಮಂಡಲ-ಮಡಿಕೇರಿ ರಸ್ತೆ. 98 ಕಿ.ಮೀ. ದೂರದ ಈ ರಸ್ತೆ ಇದಾಗಿದೆ. ಸುಳ್ಯ-ಕರಿಕೆ-ಮಡಿಕೇರಿ ರಸ್ತೆಯ ಕೊಡಗು ವ್ಯಾಪ್ತಿಯ 30 ಕಿ.ಮೀ. ಮೇಲ್ದರ್ಜೆಗೇರಿಸಲು ಲೋಕೋಪಯೋಗಿ ಇಲಾಖೆ ಸಲ್ಲಿಸಿರುವ 13 ಕೋ.ರೂ. ಪ್ರಸ್ತಾವನೆ ಕಡತದಲ್ಲೇ ಬಂದಿಯಾಗಿದೆ. ಇದು ಅತೀ ದೂರದ ರಸ್ತೆಯಾಗಿದ್ದು ಗುಡ್ಡ ಕುಸಿತದ ಭೀತಿ ಇಲ್ಲೂ ಇದೆ. ಅದಾಗ್ಯೂ ಜೀವ ಕೈಯಲ್ಲಿ ಹಿಡಿದುಕೊಂಡು ಈ ರಸ್ತೆಯನ್ನು ನಂಬಿ ಸಂಚರಿಸಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next