Advertisement

ಮಡಿಕೇರಿ ಮಳೆ ಸಾರ್ವಕಾಲಿಕ ದಾಖಲೆ

06:00 AM Aug 27, 2018 | |

ಬೆಂಗಳೂರು: ಪ್ರವಾಹದ ಸುಳಿಗೆ ಸಿಲುಕಿರುವ ಕೊಡಗು ಜಿಲ್ಲೆಯ ಮಂಜಿನ ನಗರಿ ಮಡಿಕೇರಿಯಲ್ಲಿ ಈ ಬಾರಿ ಇಡೀ ಮುಂಗಾರು ಹಂಗಾಮಿನಲ್ಲಿ ಸುರಿಯಬೇಕಾದ ಪ್ರಮಾಣಕ್ಕಿಂತ ಹೆಚ್ಚು ಮಳೆ ಕೇವಲ 25 ದಿನಗಳಲ್ಲಿ ಸುರಿದಿದೆ. ಅಲ್ಪಾವಧಿಯಲ್ಲಿ ಸುರಿದ ಈ ತೀವ್ರ ಮಳೆಯು ಊರಿಗೆ ಊರು ಕೊಚ್ಚಿಹೋಗುವಂತೆ ಮಾಡಿತು.ಈಗಾಗಲೇ ಮಡಿಕೇರಿಯಲ್ಲಿ ಸುರಿದ ಮಳೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದಲ್ಲದೆ, ಇಡೀ ಮುಂಗಾರಿನ ಮಳೆ ಕೇವಲ 25 ದಿನಗಳಲ್ಲೇ ಬಿದ್ದಿದೆ. 

Advertisement

ಮಡಿಕೇರಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿಯಬೇಕಾಗಿದ್ದ ವಾಡಿಕೆ ಮಳೆ 2,007 ಮಿ.ಮೀ. ಆದರೆ, ಆಗಸ್ಟ್‌ನಲ್ಲೇ ಬಿದ್ದ ಮಳೆ 2,060 ಮಿ.ಮೀ. ಇದು ಹೆಚ್ಚು-ಕಡಿಮೆ ಕೊಡಗಿನ ವರ್ಷದ ಮಳೆಗೆ ಸರಿಸಮವಾಗಿದೆ ಎಂದೂ ಹೇಳಲಾಗುತ್ತಿದೆ.

ಇನ್ನು ಮಡಿಕೇರಿಯಲ್ಲಿ ವಾರ್ಷಿಕ ವಾಡಿಕೆ ಮಳೆ 3,320 ಮಿ.ಮೀ. ಈಗಾಗಲೇ 4,409 ಮಿ.ಮೀ. ಮಳೆ ಆ ಭಾಗದಲ್ಲಿ ಬಿದ್ದಿದೆ. ಜೂನ್‌ 1ರಿಂದ ಆಗಸ್ಟ್‌ 24ರವರೆಗಿನ ವಾಡಿಕೆ ಮಳೆ 2,007 ಮಿ.ಮೀ. ಅಂದರೆ ದುಪ್ಪಟ್ಟು ಮಳೆಯಾಗಿದೆ. ಈ ಮಧ್ಯೆ ಆಗಸ್ಟ್‌ 17ರಂದು ಒಂದೇ ದಿನದಲ್ಲಿ 300 ಮಿ.ಮೀ. ಮಳೆ ಸುರಿದಿದ್ದು, ಇದು ಸಾರ್ವಕಾಲಿಕ ದಾಖಲೆ. ಈ ಅಂಕಿ-ಸಂಖ್ಯೆಗಳು ಮಳೆಯ ತೀವ್ರತೆಗೆ ಸಾಕ್ಷಿಯಾಗಿದೆ. ಮಳೆಯ ರಭಸಕ್ಕೆ ಜಿಲ್ಲೆ ಪ್ರವಾಹಕ್ಕೆ ತುತ್ತಾಯಿತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಇನ್ನು 2,060 ಮಿ.ಮೀ.ನಲ್ಲಿ ಆಗಸ್ಟ್‌ 10ರಿಂದ 20ರ ಅವಧಿಯಲ್ಲೇ 867 ಮಿ.ಮೀ. ಮಳೆಯಾಗಿದ್ದು, ಈ ಹತ್ತು ದಿನಗಳ ವಾಡಿಕೆ ಮಳೆ 208.7 ಮಿ.ಮೀ. ಅದೇ ರೀತಿ, ಜೂನ್‌-ಆಗಸ್ಟ್‌ ಅಂತ್ಯದವರೆಗೆ ಕೊಡಗಿನ ವಾಡಿಕೆ ಮಳೆ 1,909.5 ಮಿ.ಮೀ. ಆದರೆ, ಬಿದ್ದ ಮಳೆ 3,229.3 ಮಿ.ಮೀ. ಈ ಮಧ್ಯೆ ಹಾರಂಗಿ ಜಲಾಶಯದ ನೀರು ಕೂಡ ಕೊಡಗು ಜಿಲ್ಲೆಗೆ ಹರಿಯಿತು. ಇವೆರಡರಿಂದ ಕೊಡಗು ಮುಳುಗಡೆಯಾಯಿತು ಎನ್ನುತ್ತಾರೆ ಹವಾಮಾನ ತಜ್ಞರು.

“ಸಾಮಾನ್ಯವಾಗಿ ವಾಯುಭಾರ ಕುಸಿತ ಮತ್ತಿತರ ಬದಲಾವಣೆಗಳಾದಾಗ್ಯೂ ಈ ಪ್ರಮಾಣದಲ್ಲಿ ಮಳೆ ಆಗುವುದಿಲ್ಲ. ಆದರೆ, ಕೊಡಗು ಜಿಲ್ಲೆಯಲ್ಲಿ ಈ ಪರಿಯ ಮಳೆ ನಮಗೂ ಅಚ್ಚರಿ ಮೂಡಿಸಿದೆ. ಅಲ್ಲಿ ಸಾಮಾನ್ಯವಾದ ಬದಲಾವಣೆಗಳ ನಡುವೆ ದಾಖಲೆ ಮಳೆಯಾಗಿದೆ. ಕಾರಣಗಳು ನಿಖರವಾಗಿ ಗೊತ್ತಾಗುತ್ತಿಲ್ಲ. ಈ ಬಗ್ಗೆ ಅಧ್ಯಯನ ಮಾಡುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಚಿಂತನೆಯೂ ನಡೆದಿದೆ’ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌. ಪಾಟೀಲ “ಉದಯವಾಣಿ’ಗೆ ತಿಳಿಸಿದರು.

Advertisement

ಮಳೆಯ ತೀವ್ರತೆಯೇ ಪ್ರವಾಹ ಮತ್ತು ಮಣ್ಣುಕುಸಿತಕ್ಕೆ ಮುಖ್ಯಕಾರಣ. ಮಳೆಯ ನೀರಿನ ಹರಿವನ್ನು ಹಸಿರು ಹೊದಿಕೆ ತಕ್ಕಮಟ್ಟಿಗೆ ತಡೆಯೊಡ್ಡುತ್ತದೆ. ಆದರೆ, ಮರಗಳು ನೆಲಕಚ್ಚಿದಾಗ, ಬೇರುಸಹಿತ ಬಿದ್ದ ಮರದ ಜಾಗದಲ್ಲಿ ನೀರು ತುಂಬಿಕೊಳ್ಳುತ್ತದೆ. ಹೀಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಭೂಮಿಯೊಳಗೆ ಸೇರಿತು. ಜತೆಗೆ ಮೇಲಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇತ್ತು. ಪರಿಣಾಮ ಮಣ್ಣುಕುಸಿತ ಉಂಟಾಯಿತು ಎಂದು ಕೊಡಗು ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಕೆ.ಜೆ. ಸೌಮ್ಯ ತಿಳಿಸುತ್ತಾರೆ.

ಮಡಿಕೇರಿಯಲ್ಲಾದ ಮಳೆಯ ವಿವರ (ಮಿ.ಮೀ.ಗಳಲ್ಲಿ).
ವರ್ಷ    ಮಳೆ ಪ್ರಮಾಣ
2008    800.8
2009    437.8
2010    628
2011    866.6
2012    732.7
2013    792.6
2014    704.2
2015    550
2016    665.6
2017    910
2018    2,060 (ಆಗಸ್ಟ್‌ 25ರವರೆಗೆ)
ಈ ಹಿಂದೆ 1931ರ ಆಗಸ್ಟ್‌ನಲ್ಲಿ 1,559.3 ಮಿ.ಮೀ. ಮಳೆ ಬಿದ್ದಿತ್ತು. ಇದು ಸಾರ್ವಕಾಲಿಕ ದಾಖಲೆ ಆಗಿತ್ತು.

ಇಡೀ ರಾಜ್ಯದಲ್ಲಿ ಈ ಬಾರಿ ವಾಡಿಕೆ ಮಳೆಯಾಗಿದೆ. ಆದರೆ, ಉತ್ತರ ಒಳನಾಡಿನಲ್ಲಿ ಮಾತ್ರ ಮಳೆ ಕೊರತೆ ಉಂಟಾಗಿದೆ. ಈ ಸಲ ಮುಂಗಾರಿನಲ್ಲಿ ಈವರೆಗೆ ಸುರಿದ ಮಳೆ ವಿವರ ಹೀಗಿದೆ.
ಪ್ರದೇಶ    ವಾಡಿಕೆ ಮಳೆ    ಬಿದ್ದ ಮಳೆ
ಕರಾವಳಿ    2,671.7    2,853.8
ದಕ್ಷಿಣ ಒಳನಾಡು    492.7    548.1
ಉತ್ತರ ಒಳನಾಡು    33.8    262.7
ಒಟ್ಟಾರೆ     639.6    654.3

Advertisement

Udayavani is now on Telegram. Click here to join our channel and stay updated with the latest news.

Next